ಬೆಂಗಳೂರು: ರಾಜ್ಯದ ಮಳೆ (Rain News) ಬೀಳುವ ಸಾಧ್ಯತೆ ದಿನೇ ದಿನೆ ಕ್ಷೀಣಿಸುತ್ತಿದೆ. ಈ ನಡುವೆ, ಕಣ್ಣಾಮುಚ್ಚಾಲೆ ಆಟವನ್ನು ಆಡುವಂತೆ ಭಾಸವಾಗುತ್ತಿದೆ. ಬಹುತೇಕ ಭಾಗಗಳಲ್ಲಿ ಬೆಳಗ್ಗೆ ವೇಳೆ ಬಿಸಿಲಿನಿಂದ ಕೂಡಿದ ವಾತಾವರಣ ಇರುತ್ತದೆ. ಇನ್ನು ಕೆಲವು ಕಡೆ ಮೋಡ ಕವಿದ ವಾತಾವರಣ ಇರಲಿದೆ. ಇನ್ನು ಚಳಿಯು ಸಹ ಪ್ರಾರಂಭವಾಗಿದ್ದು, ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ತನ್ನ ಪ್ರಭಾವವನ್ನು ತೋರಲಿದೆ. ಇಲ್ಲಿ ಕೇವಲ 24 ಗಂಟೆಯಿಂದ 48 ಗಂಟೆಗಳ ವರೆಗೆ ವಾತಾವರಣದಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿರುವುದು ಕಂಡುಬಂದಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ (south interior) ಕೆಲವು ಕಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ಉಲ್ಲೇಖಿಸಿದೆ. ಆದರೆ, ಅದೇ ಮುಂದಿನ 48 ಗಂಟೆಯನ್ನು ಗಮನಿಸುವುದಾದರೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ ಎಂದು ಅಂದಾಜಿಸಲಾಗಿದೆ.
ಅಂದರೆ ಕರಾವಳಿಯಲ್ಲಿ ಭಾನುವಾರ ಕೆಲವು ಕಡೆ ಮಳೆಯಾಗಲಿದೆಯಾದರೂ ಸೋಮವಾರ ಒಣ ಹವೆಯ ವಾತಾವರಣ ಇರಲಿದೆ. ಇನ್ನು ಉಷ್ಣಾಂಶದಲ್ಲಿ ಸಹ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳು ಇವೆ.
ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಭಾಗಗಳಲ್ಲಿ ಮಳೆ ಅಷ್ಟಾಗಿ ಬಾರದು ಎಂದು ಹೇಳಲಾಗಿದೆ. ಈ ವಾತಾವರಣವು ಇನ್ನೆರಡು ದಿನ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಬೆಂಗಳೂರಲ್ಲಿ ರಾತ್ರಿ ಮಳೆ
ಬೆಂಗಳೂರಿನಲ್ಲಿ ಬೆಳಗ್ಗೆ ವೇಳೆ ಬಿಸಿಲಿನ ವಾತಾವರಣ ಇದ್ದು, ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಸೋಮವಾರ ಮುಂಜಾನೆ ಕೆಲವು ಕಡೆ ಮಂಜು ಮುಸುಕಿದ ವಾತಾವರಣ ಇರುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ರಾತ್ರಿ ವೇಳೆ ತುಸು ಚಳಿ ಇರಬಹುದು ಎನ್ನಲಾಗಿದೆ.
ಇದನ್ನೂ ಓದಿ: Elephant Attack : ಮಂಡ್ಯದಲ್ಲಿ ಆನೆ ದಾಳಿಗೆ ಮಹಿಳೆ ಬಲಿ; ಹೊಲಕ್ಕೆ ಹೋದಾಗ ಅಟ್ಯಾಕ್
ನ. 18ರಂದು ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ!
ಇನ್ನು ಶನಿವಾರ (ನ. 18) ರಾಜ್ಯದಲ್ಲಿನ ಉಷ್ಣಾಂಶವನ್ನು ಗಮನಿಸುವುದಾದರೆ ವಿಜಯಪುರದಲ್ಲಿ ಅತಿ ಕಡಿಮೆ ಅಂದರೆ 14.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಾಗಿ ಆ ಭಾಗದಲ್ಲಿ ವಿಪರೀತ ಚಳಿಯ ಸ್ಥಿತಿ ನಿರ್ಮಾಣವಾಗಿತ್ತು.