Site icon Vistara News

Karnataka Weather: ಇಂದು ಮೈಸೂರು, ಬೀದರ್, ಹಾಸನ ಸೇರಿ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

Karnataka Weather

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್‌ 11ರಂದು ಗುರುವಾರ ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಯಾದಗಿರಿ, ರಾಯಚೂರು, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದ್ದು, ಮುಂದಿನ 5 ದಿನಗಳವರೆಗೆ ಕರ್ನಾಟಕದ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ. ಏ.13ರವರೆಗೆ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಏ. 12ರಿಂದ 13ರವರೆಗೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸಿಡಿಲು ಸಂಭವಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.

ಇದನ್ನೂ ಓದಿ | Protection From Heatwave: ಮತ್ತಷ್ಟು ದಿನ ಬಿಸಿಲ ತಾಪ; ಅಲ್ಲಿಯವರೆಗೆ ತಂಪಾಗಿರಲು ಹೀಗೆ ಮಾಡಿ

ರಾಜ್ಯದ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಗಳವಾರ 2 ರಿಂದ 4 ಡಿಗ್ರಿ ಸೆ. ಉಷ್ಣಾಂಶ(temperature) ಇಳಿಕೆಯಾಗಿರುವುದು ಕಂಡುಬಂದಿದ್ದು, ಕರಾವಳಿ ಮತ್ತು ಒಳನಾಡಿನ ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಒಳನಾಡಿನ ಒಂದೆರಡು ಕಡೆ (ಹರಪನಹಳ್ಳಿ) ಹಗುರ ಮಳೆಯಾಗಿದ್ದು, ಕರಾವಳಿ ಭಾಗದಲ್ಲಿ ಒಣ ಹವೆ ಇತ್ತು.

ಕಾಲರಾ ಕೇಸ್ ಉಲ್ಬಣ;‌ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಬಿಟ್ಟ ಬಿಬಿಎಂಪಿ!

Cholera Outbreak BBMP issues strict guidelines

ಬೆಂಗಳೂರು: ಕಲುಷಿತ ನೀರು (polluted driniking water) ಹಾಗೂ ಆಹಾರದಿಂದ ಹರಡುವ ಕಾಲರಾ ಸಾಂಕ್ರಾಮಿಕ (Cholera Outbreak) ಈ ಬೇಸಿಗೆಯಲ್ಲಿ (Summer) ರಾಜ್ಯಾದ್ಯಂತ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಈವರೆಗೆ 13 ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8, ನಗರ ವ್ಯಾಪ್ತಿಯಲ್ಲಿ 5 ಕೇಸ್‌ಗಳು ಕಂಡುಬಂದಿವೆ. ರಾಮನಗರದಲ್ಲಿ ಒಂದು ಕಾಲರಾ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಈ ನಡುವೆ ಬಿಬಿಎಂಪಿ ವತಿಯಿಂದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಾಗಿ ತಪಾಸಣೆ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ (Water Scarcity) ಉಂಟಾಗಿರುವುದರಿಂದ, ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಲುಷಿತ ಅಂಶಗಳು ಪತ್ತೆಯಾಗುತ್ತಿವೆ. ಬೀದಿ ಬದಿಯ ಆಹಾರದಲ್ಲಿಯೂ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ಇರಬಹುದು. ಆದ್ದರಿಂದ ಆಹಾರದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಹ ಈಗಾಗಲೇ ಸೂಚಿಸಿದೆ. ಈಗ ಬಿಬಿಎಂಪಿ ಸಹ ಕೆಲವು ಸೂಚನೆಗಳನ್ನು ನೀಡಿದೆ.

ಬಿಬಿಎಂಪಿ ಮಾರ್ಗಸೂಚಿಯಲ್ಲೇನಿದೆ?

ಬೇಸಿಗೆ ಕಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಕಲುಷಿತ ನೀರು, ಕಲುಷಿತ ಆಹಾರದ ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಸಂಭವಿಸುವ ಸಾಧ್ಯತೆಗಳಿವೆ. ಸಾಂಕ್ರಾಮಿಕ ರೋಗಗಳು ಸಂಭವಿಸದಂತೆ ಮತ್ತು ಉಲ್ಬಣಗೊಳ್ಳದಂತೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಆರೋಗ್ಯಾಧಿಕಾರಿಗಳು/ಆರೋಗ್ಯ ವೈದ್ಯಾಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸಬೇಕಿದೆ ಎಂದು ಬಿಬಿಎಂಪಿ ಹೇಳಿದೆ.

ಕಾಲರಾ ಹೇಗೆ ಹರಡುತ್ತದೆ?

ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: Summer Drinks: ಬೇಸಿಗೆ ಧಗೆಗೆ ನಿಂಬೆಹಣ್ಣಿನ ಪಾನಕಗಳ ಥರಹೇವಾರಿ ಐಡಿಯಾಗಳು ಇಲ್ಲಿವೆ!

ಮುನ್ನೆಚ್ಚರಿಕಾ ಕ್ರಮಗಳೇನು?

-ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
-ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
-ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
-ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್‌ ಬೆರಸಿ ಕುಡಿಯಿರಿ.
-ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
-ಕಾಲರಾ ಬ್ಯಾಕ್ಟಿರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

Exit mobile version