Site icon Vistara News

Award | ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಗಣೇಶ ಕೊಲೆಕಾಡಿ ಸೇರಿ ಸಾಧಕರಿಗೆ ಗೌರವ

Award

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು (Award) ಪ್ರಕಟ ಮಾಡಲಾಗಿದ್ದು, ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಪ್ರಸಂಗಕರ್ತ ಹಾಗೂ ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ತಿಳಿಸಿದ್ದಾರೆ.

2022ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಮಂಗಳೂರಿನ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ತೆಂಕುತಿಟ್ಟು ಭಾಗವತ ಪಟ್ಲ ಸತೀಶ್ ಶೆಟ್ಟಿ, ತುಮಕೂರಿನ ಮೂಡಲಪಾಯ ಯಕ್ಷಗಾನ ಭಾಗವತ ಹಾಗೂ ಕಲಾವಿದ ಭಾಗವತ ಚಂದಯ್ಯ, ಉತ್ತರ ಕನ್ನಡದ ಭಾಗವತ ಹಾಗೂ ಪಾರಂಪರಿಕ ಯಕ್ಷಗಾನ ಕಲಾವಿದ ಭಾಗವತ ಉಮೇಶ ಭಟ್‌ ಬಾಡ ಹಾಗೂ ಉಡುಪಿಯ ಭಾಗವತ, ಬಡಗುತಿಟ್ಟು ಯಕ್ಷಗಾನ ಕಲಾವಿದ ಕೆ.ಪಿ. ಹೆಗಡೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹ 50 ಸಾವಿರ ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rain News | ಬೆಂಗಳೂರು-ಮೈಸೂರು ಹೆದ್ದಾರಿ ಕಾಲುವೆಗಳು ಮುಚ್ಚಿದ್ದಕ್ಕೆ ಪ್ರವಾಹ; ಸಿಎಂ ಬೊಮ್ಮಾಯಿ

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ಗೆ ಉತ್ತರ ಕನ್ನಡದ ಪಾರಂಪರಿಕ ಯಕ್ಷಗಾನ ಕಲಾವಿದ ಹುಕ್ಕಲಮಕ್ಕಿ ಕಮಲಾಕರ ಹೆಗಡೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಒಳಗೊಂಡಿದೆ.

2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮಂಗಳೂರಿನ ಪೊಳಲಿ ನಿತ್ಯಾನಂದ ಕಾರಂತ ಅವರ ‘ಯಕ್ಷಗಾನ ಪ್ರಸಂಗ ಸಂಪುಟ’, ಬೆಳಗಾವಿಯ ಎಲ್‌.ಎಸ್. ಶಾಸ್ತ್ರಿ ಅವರ ‘ಯಕ್ಷಗಾನ ನಕ್ಷತ್ರಗಳು’ ಹಾಗೂ ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ‘ಯಕ್ಷಗಾನ ಲೀಲಾವಳಿ’ ಕೃತಿಗಳು ಆಯ್ಕೆಯಾಗಿವೆ. ಈ ಬಹುಮಾನವು ತಲಾ ₹ 25 ಸಾವಿರ ನಗದನ್ನು ಒಳಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

‘ಪಾರ್ತಿಸುಬ್ಬ ಸೇರಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಉಡುಪಿಯ ಕಮಲಶಿಲೆಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಜಿ.ಎಲ್. ಹೆಗಡೆ ತಿಳಿಸಿದರು.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು
1.ಕೋಲ್ಯಾರು ರಾಜು ಶೆಟ್ಟಿ, ಯಕ್ಷಗಾನ ಕಲಾವಿದ, ಹೊರನಾಡು ಕನ್ನಡಿಗ
2.ಕೃಷ್ಣನಾಯ್ಕ ಜಿ. ಬೇಡ್ಕಣಿ, ಬಡಾಬಡಗು ಯಕ್ಷಗಾನ ಕಲಾವಿದ, ಉತ್ತರ ಕನ್ನಡ
3.ಕೃಷ್ಣ ಗಾಣಿಗ ಕೋಡಿ, ಬಡಗುತಿಟ್ಟು ಯಕ್ಷಗಾನ ಕಲಾವಿದ, ಉಡುಪಿ
4.ಶುಭಾನಂದ ಶೆಟ್ಟಿ, ತೆಂಕುತಿಟ್ಟು ಯಕ್ಷಗಾನ ಕಲಾವಿದ, ಕಾಸರಗೋಡು
5.ಕವ್ವಾಳೆ ಗಣಪತಿ ಭಾಗವತ, ಬಡಾಬಡಗು ಯಕ್ಷಗಾನ ಕಲಾವಿದ, ಉತ್ತರ ಕನ್ನಡ
6.ಬಾಲಕೃಷ್ಣ ನಾಯಕ್, ಬಡಗುತಿಟ್ಟು ಯಕ್ಷಗಾನ ಪ್ರಸಾಧನ ಕಲಾವಿದ, ಉಡುಪಿ
7.ಎಸ್‌.ಪಿ. ಅಪ್ಪಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ, ಬೆಂಗಳೂರು
8.ಕೊಲ್ಲೂರು ಕೊಗ್ಗ ಆಚಾರ್ಯ, ಬಡಗುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದ, ಉಡುಪಿ
9.ಡಿ. ಭೀಮಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ, ತುಮಕೂರು
೧೦.ಅಜಿತ್ ಕುಮಾರ್ ಜೈನ್, ತೆಂಕುತಿಟ್ಟು ಯಕ್ಷಗಾನ ಕಲಾವಿದ, ಉಡುಪಿ

ಇದನ್ನೂ ಓದಿ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ, ಕ್ರೀಡಾ ಕರ್ನಾಟಕ ನಿರ್ಮಾಣ ಗುರಿ: ಸಿಎಂ ಬೊಮ್ಮಾಯಿ

Exit mobile version