Site icon Vistara News

Corruption: KRIDL ಎನ್ನುವುದು ಹಳೆ ಬಾಟಲಿಯಲ್ಲಿ ಹೊಸ ಮದ್ಯ: ಫಸ್ಟ್ ಅದನ್ನು ಮುಚ್ಚಿ ಎಂದ ಕಾಂಟ್ರ್ಯಾಕ್ಟರ್‌ ಸಂಘ

Siddaramaiah and D Kempanna 1

#image_title

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು (KRIDL) ಹಳೆ ಬಾಟಲಿಯಲ್ಲಿ ಹೊಸ ಮದ್ಯದಂತಿದ್ದು, ಇದರಿಂದ ಯಾವುದೇ ಪ್ರಯೋಜನವೂ ಇಲ್ಲ, ಭ್ರಷ್ಟಾಚಾರವೂ ಕಡಿಮೆಯಾಗಿಲ್ಲ. ಇದನ್ನು ಮೊದಲು ಮುಚ್ಚಿಬಿಡಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಕಾಂಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಮನವಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅಧ್ಯಕ್ಷ ಡಿ.ಕೆಂಪಯ್ಯ ಅವರ ನಿಯೋಗ, ಭ್ರಷ್ಟಾಚಾರ ತಡೆಯಲು ಅನೇಕ ಸಲಹೆಗಳನ್ನು ನೀಡಿದೆ. “ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗುತ್ತಿಗೆದಾರರ ಶ್ರೇಯೋಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದನ್ನು ಸಂಘವು ಮರೆಯುವುದಿಲ್ಲ” ಎಂದಿರುವ ಗುತ್ತಿಗೆದಾರರ ಸಂಘ, ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಪ್ಯಾಕೇಜ್ ಪದ್ದತಿ ಮತ್ತು ಬಾಕಿ ಮೊತ್ತ ಬಿಡುಗಡೆಯಾಗದೆ ಇರುವುದು ನಮ್ಮ ಪ್ರಮುಖ ಸಮಸ್ಯೆಗಳಾಗಿವೆ. ಎಲ್ಲ ವರ್ಗಗಳ ಹಿತ ಕಾಯುತ್ತಿರುವ ತಾವು ದಯಮಾಡಿ ಗುತ್ತಿಗೆದಾರರ ರಕ್ಷಣೆಗೂ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರಗಳು ಬದಲಾದಂತೆ ಭ್ರಷ್ಟಾಚಾರ ಏರುಗತಿಯಲ್ಲಿ ಸಾಗುತ್ತಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಣ್ಣ ನೀರಾವರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಮಗಾರಿಗಳಿಗೆ ಮಂಜೂರಾಗುವ ಒಟ್ಟು ಅನುದಾನದಲ್ಲಿ ಶೇ 30-40ಕ್ಕಿಂತಲೂ ಹೆಚ್ಚು ಮೊತ್ತ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ
ಸರಿದೂಗಿಸಬೇಕಾಗಿತ್ತು. ಟೆಂಡರ್ ಅನುಮೋದನೆಗೂ ಮುನ್ನ ಆರಂಭವಾಗುವ ಭ್ರಷ್ಟಾಚಾರ ಪ್ರಕ್ರಿಯೆ, ಬಿಲ್ ಪಾವತಿ ಅಗುವವರೆಗೆ ಮುಂದುವರಿಯುತ್ತಲೇ ಇತ್ತು. ಇದೇ ಕಾರಣಕ್ಕೆ ಹಿಂದಿನ ಸರಕಾರಗಳ ಜತೆ ಸಂಘರ್ಷ ನಡೆದದ್ದೂ ಉಂಟು.

ಭ್ರಷ್ಟಾಚಾರಕ್ಕೆ ದಾಖಲೆಗಳು ಇರುವುದಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಭ್ರಷ್ಟಾಚಾರವೇ ನಡೆದಿಲ್ಲ ಎಂದು ಆಡಳಿತ ಮತ್ತು ಅಧಿಕಾರಶಾಹಿ ವರ್ಗ ರಕ್ಷಣೆ ಪಡೆಯುತ್ತಾ ಬಂದಿದೆ. ಹಾಗೆಂದು ಭ್ರಷ್ಟಾಚಾರವೇ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಅಂಶವನ್ನೇ ಅಸ್ತ್ರವನ್ನಾಗಿಸಿಕೊಂಡು ಭ್ರಷ್ಟಾಚಾರಕ್ಕೆ ದಾಖಲೆಗಳನ್ನು ಕೇಳುವುದು
ವಾಡಿಕೆಯಾಗಿದೆ. ಭ್ರಷ್ಟಾಚಾರ ಹಿಂದಿ ಸರಕಾರದಲ್ಲೂ ಇತ್ತು. ಅದರ ಹಿಂದಿನ ಸರಕಾರದಲ್ಲೂ ಇತ್ತು. ಕೇವಲ ಯಾವುದೇ ಒಂದು ಪಕ್ಷ ಅಥವಾ ಒಂದು ಸರ್ಕಾರಕ್ಕೆ ಸೀಮಿತವಾಗಿದೆ ಎಂದು ಹೊಣೆಗಾರಿಕೆ ಮಾಡುವುದಿಲ್ಲ. ಎರಡನೇ ಬಾರಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಭ್ರಷ್ಟಾಚಾರ ನಿಗ್ರಹಕ್ಕೆ ನೀವು ನಾಂದಿ ಹಾಡುತ್ತೀರಿ ಎಂಬ ಅಚಲ ವಿಶ್ವಾಸ ನಮಗಿದೆ. ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾದ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ ಪಾವತಿಗೆ ಹೊಸ ತಂತ್ರಜ್ಞಾನವನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಿದರೆ ಭ್ರಷ್ಟಾಚಾರ ನಿಗ್ರಹ ಸಾಧ್ಯವಾಗುತ್ತದೆ.

ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯಗಳ ಗುತ್ತಿಗೆದಾರರನ್ನು ಓಲೈಸುವ ಉದ್ದೇಶದಿಂದ ಪ್ಯಾಕೇಜ್ ಪದ್ದತಿ ಎಂಬ ತಂತ್ರವನ್ನು ಅಧಿಕಾರಶಾಹಿ ವರ್ಗ ಕಂಡುಕೊಂಡಿದೆ. ರಾಜ್ಯ, ಸ್ಥಳೀಯ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಈ ವ್ಯವಸ್ಥೆ ಉರುಳಾಗಿ ಪರಿಣಮಿಸಿದೆ. ಅನಗತ್ಯ ಅರ್ಹತೆ ಮತ್ತು ನಿಯಮಗಳನ್ನು ಹೇರಿ ಸ್ಥಳೀಯರನ್ನು ದೂರವಿಡಲಾಗುತ್ತಿದೆ. ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯುವ ಬದಲಾಗಿ ಹಲವು ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಎಂದು ಘೋಷಿಸಿ ನೆರೆ ರಾಜ್ಯದಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದೇ ಈ ಪ್ಯಾಕೇಜ್ ಪದ್ದತಿಯ ರಹಸ್ಯ! ಕೆಲವೇ ಲಕ್ಷ ರೂ.ಗಳ ಟೆಂಡರ್ ಪಡೆದುಕೊಳ್ಳಲೂ ಸಹ ಸ್ಥಳೀಯ ಗುತ್ತಿಗೆದಾರ ಹೆಣಗಬೇಕಾಗಿದೆ ಆದ್ದರಿಂದ ಪ್ಯಾಕೇಜ್ ಪದ್ದತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆದರೆ ಸ್ಥಳೀಯ ಮತ್ತು ರಾಜ್ಯದ ಗುತ್ತಿಗೆದಾರರಿಗೆ
ಸಹಾಯಕವಾಗುತ್ತದೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ಶಾಸನಸಭೆಯಲ್ಲೇ ಸ್ಥಳಿಯ ಗುತ್ತಿಗೆದಾರರಿಗೆ
ಮಾತ್ರ ಕಾಮಗಾರಿಗಳು ಲಭ್ಯವಾಗುವಂತೆ ಕಾನೂನು ತಿದ್ದುಪಡಿ ಮಾಡಿದ್ದು, ರಾಜ್ಯದಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕೆಂದು ಕೋರುತ್ತೇವೆ.

ಭ್ರಷ್ಟಾಚಾರದ ಅರೋಪ ಕೇಳಿ ಬಂದಾಗಲೆಲ್ಲಾ ಒಂದು ಸಂಸ್ಥೆಯನ್ನು ಮುಚ್ಚಿ ಮತ್ತೊಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಸಂಪ್ರದಾಯವಾಗಿದೆ. ಈ ಹಿಂದೆ ಕಳಪೆ ಕಾಮಗಾರಿಗೆ ಕುಖ್ಯಾತಿ ಪಡೆದಿದ್ದ ಭೂ ಸೇನಾ ನಿಗಮವನ್ನು ಮುಚ್ಚಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಎಂಬ ಹೊಸ ಇಲಾಖೆಯನ್ನು ಸೃಷ್ಟಿಸಲಾಯಿತು. ಇದು ಹೊಸ ಬಾಟಲಿಯಲ್ಲಿ ಹಳೆ ಮದ್ಯವನ್ನು ತುಂಬಿಕೊಟ್ಟ ರೀತಿಯಾಯಿತೇ ಹೊರತು ಯಾವುದೇ ಪ್ರಯೋಜನವಾಗಲಿಲ್ಲ. ಹೆಸರಿನಲ್ಲಿ ‘ಗ್ರಾಮೀಣ’ ಎಂದಿದ್ದರೂ ಗ್ರಾಮೀಣ ಕರ್ನಾಟಕಕ್ಕೂ ಪ್ರಯೋಜನಕಾರಿಯಾಗಿಲ್ಲ. ಬದಲಾಗಿ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಹಂಚುವ ಮಧ್ಯವರ್ತಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಈ ಇಲಾಖೆಯನ್ನು ಮುಚ್ಚುವಂತೆ ಲೋಕಾಯುಕ್ತರೂ ಶಿಫಾರಸು ಮಾಡಿರುತ್ತಾರೆ. ಆದ್ದರಿಂದ ಈ ಇಲಾಖೆಯನ್ನು ಮುಚ್ಚಿ ಆಯಾ ಇಲಾಖೆಗಳೇ ನೇರ ಮತ್ತು ಪಾರದರ್ಶಕವಾಗಿ ಟೆಂಡರ್ ಮೂಲಕವೇ ಕಾಮಗಾರಿಗಳನ್ನು ನಡೆಸಿದರೆ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗುತ್ತಿಗೆದಾರರ ಸಂಘ ಮನವಿ ಮಾಡಿದೆ.

ಇದನ್ನೂ ಓದಿ: Karnataka Politics: ಕಾಂಗ್ರೆಸ್‌ ಭ್ರಷ್ಟಾಚಾರವನ್ನೂ ನಾನೇ ಎಕ್ಸ್‌ಪೋಸ್‌ ಮಾಡ್ತೀನಿ ಎಂದ ಕಾಂಟ್ರ್ಯಾಕ್ಟರ್‌ ಕೆಂಪಣ್ಣ

Exit mobile version