ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಂತೆ ನಿಧನರಾದ ಕಾಂಗ್ರೆಸ್ (Karnataka Congress) ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರನ್ನು ನೆನೆದು ಡಿಸಿಎಂ ಡಿ.ಕೆ. ಶಿವಕುಮಾರ್ ಕಣ್ಣೀರು ಸುರಿಸಿದ್ದಾರೆ.
ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಡಿ.ಬಿ.ಇನಾಮದಾರ, ಅಂಜನಾ ಮೂರ್ತಿ ಹಾಗೂ ಧ್ರುವನಾರಾಯಣ ಅವರಿಗೆ ಸಂತಾಪ ಸೂಚನೆ ನಡೆಯಿತು.
ಮೊದಲಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಂಜನಾ ಮೂರ್ತಿ 3 ಬಾರೀ ವಿಧಾನಸಭೆ ಆಯ್ಕೆಯಾಗಿದ್ದರು. ಸಜ್ಜನ ಮತ್ತು ಅಜಾತಶತ್ರು ಆಗಿದ್ದರು. ಅವರ ಕ್ಷೇತ್ರ ಜನಪ್ರಿಯರಾಗಿದ್ದರು, ಅವರು ಶಾಸಕರಾಗಿ ಆಯ್ಕೆಯಾಗುವ ಅವಕಾಶ ಇತ್ತು. ಅವರ ಆತ್ಮಕ್ಕೆ ಶಾಂತಿ ಕೊರುತ್ತೇವೆ ಎಂದರು. ದೃವನಾರಾಯಣ ಎರಡು ಬಾರಿ ಲೋಕಸಭಾ ಮತ್ತು ವಿಧಾನಸಭೆ ಸದಸ್ಯರಾಗಿದ್ದರು. ಉತ್ತಮ ಶಾಸಕರಾಗಿ ಕಾರ್ಯ ನಿರ್ವಾಹಿಸಿದ್ದಾರೆ. ಇವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಆಗಿದೆ. ರಾಜ್ಯ ರಾಜಕೀಯಕ್ಕೂ ನಷ್ಟ ಆಗಿದೆ ಎಂದರು.
ಡಿ.ಬಿ. ಇನಮಾದಾರ್ ಕೂಡ ಒಳ್ಳೆಯ ಶಾಸಕರು. ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಅದು ನನಗೆ ವೈಯಕ್ತಿಕ ನಷ್ಟ ಆಗಿದೆ. ಅವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬ ನೋವು ಬರಿಸುವ ಶಕ್ತಿ ಕೊಡಲಿ ಎಂದು ಕೊರುತ್ತೇನೆ ಎಂದರು.
ಇದನ್ನೂ ಓದಿ: Death News : ಧ್ರುವನಾರಾಯಣ್ ಪತ್ನಿ ವೀಣಾ ನಿಧನ; ಪತಿಯ ಸಾವಿನಿಂದ ಕುಗ್ಗಿದ್ದರು, ತಿಂಗಳೊಳಗೆ ಮತ್ತೊಂದು ಆಘಾತ
ನಂತರ ಧ್ರುವನಾರಾಯಣ ಅವರನ್ನು ಸ್ಮರಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ನನ್ನ ನಂತರ ಕೆಪಿಸಿಸಿ ಆಧ್ಯಕ್ಷ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಇತ್ತು. ಆ ಪ್ರಶ್ನೆ ಬಂದಾಗೆಲ್ಲ ನನ್ನ ಮನಸಲ್ಲಿ ಇದ್ದಿದ್ದು ಧ್ರುವನಾರಾಯಣ ಹೆಸರು ಮಾತ್ರ. ನನ್ನ ನಂತರ ಧ್ರುವನಾರಾಯಣರನ್ನು ಅಧ್ಯಕ್ಷರಾಗಿ ಮಾಡುತ್ತಿದ್ದೆ.
ಅಧ್ಯಕ್ಷ ಸ್ಥಾನದ ಜಂಜಾಟದ ಬಗ್ಗೆ ಧ್ರುವನಾರಾಯಣ ಜತೆ ಒಮ್ಮೆ ಮಾತಾಡಿದ್ದೆ. ಅವರು ಬದುಕಿರುತ್ತಿದ್ದರೆ ಅವರಿಗೆ ರಾಜ್ಯಾಧ್ಯಕ್ಷ ಮಾಡುವ ಅಭಿಲಾಷೆ ಇತ್ತು. ಇವತ್ತು ಅವರಿದ್ದಿದ್ದರೆ ಕ್ಯಾಬಿನೆಟ್ ಸಚಿವ ಆಗುವುದರಿಂದ ಯಾರೂ ತಪ್ಪಿಸೋಕೆ ಆಗುತ್ತಿರಲಿಲ್ಲ ಎಂದು ಕಣ್ಣೀರು ಸುರಿಸಿದರು. ಸ್ನೇಹಿತನನ್ನು ನೇನೆದು ಭಾವುಕರಾದರು, ಸದನದ ಸದಸ್ಯರೂ ಗದ್ಗದಿತರಾದರು.