Site icon Vistara News

Government schools: ಟಾಯ್ಲೆಟ್‌, ನೀರಿಲ್ಲದಿದ್ದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಯಾರು ಕಳಿಸ್ತಾರೆ? ಹೈಕೋರ್ಟ್‌ ಗರಂ

schools in Karnataka

#image_title

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government schools) ಶೌಚಾಲಯ ವ್ಯವಸ್ಥೆ (Toilets in school), ನೀರಿನ ವ್ಯವಸ್ಥೆ ಇಲ್ಲದಿದ್ದರೆ ಅಂಥ ಕಡೆ ಯಾರು ತಾನೇ ಮಕ್ಕಳನ್ನು ಕಳುಹಿಸುತ್ತಾರೆ? ಹಣ ಕೊಟ್ಟಾದರೂ ಖಾಸಗಿ ಶಾಲೆ (Private schools) ಹುಡುಕುತ್ತಾರೆ; ಹೀಗೆಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದೆ ರಾಜ್ಯ ಹೈಕೋರ್ಟ್‌ (Karnataka High court).

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡ ಕೋರ್ಟ್‌ ಶಾಲೆಗಳ ಸ್ಥಿತಿಗತಿ ಬಗ್ಗೆ ಸರ್ಕಾರದಿಂದ ವರದಿ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಬಂದಿರುವ ವರದಿಯನ್ನು ನೋಡಿ ಅದು ಇನ್ನಷ್ಟು ಕೆರಳಿತು. ರಾಜ್ಯದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಶಾಲೆಗಳ ಸಂಖ್ಯೆ ಕೇವಲ 38 ಮಾತ್ರ ಎಂದು ಸರ್ಕಾರ ತನ್ನ ಅನುಪಾಲನಾ ವರದಿಯಲ್ಲಿ ಹೇಳಿತ್ತು!

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009 (ಆರ್‌ಟಿಇ) ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದರ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆಗೆದುಕೊಂಡಿತು.

ಬೆಳಗಾವಿ ಜಿಲ್ಲೆಯ ಖಾನಾಪುರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಪರಿಸ್ಥಿತಿ ಉಲ್ಲೇಖಿಸಿದ ನ್ಯಾಯಾಲಯವು, “ಇಲ್ಲಿ ಶೌಚಾಲಯ ಎಂಬುದು ನಾಮ್‌ಕೇ ವಾಸ್ತೆ ಇದ್ದು, ನಾಲ್ಕು ಗೋಡೆ, ಬಾಗಿಲು ಮಾತ್ರ ಇದೆ. ಇದೆಲ್ಲಕ್ಕೂ ಮಿಗಿಲಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲೆಯ ಪ್ರಾಧಿಕಾರಗಳು ಮಾಡಿರುವ ಪ್ರಯತ್ನವು ಕಣ್ಣೊರೆಸುವ ತಂತ್ರವಷ್ಟೆ. ಇಂಥ ಶಾಲೆಗೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಇಚ್ಛಿಸುವುದಿಲ್ಲ ಎಂದಷ್ಟೇ ನಾವು ಹೇಳುತ್ತೇವೆ.” ಎಂದು ಆದೇಶದಲ್ಲಿ ಕಿಡಿಕಾರಿದೆ.

“ಸೋಲಾ ತಾಂಡ ಏಕಂಬದಲ್ಲಿನ ಶಾಲೆಯ ಪರಿಶೀಲನಾ ವರದಿಯ ಜೊತೆಗೆ ಸಲ್ಲಿಸಲಾಗಿರುವ ಚಿತ್ರವು ಆತ್ಮಸಾಕ್ಷಿಗೆ ಆಘಾತ ಉಂಟು ಮಾಡುವಂತಿದೆ. ಮೊದಲಿಗೆ ಇಲ್ಲಿ ನಿರ್ಮಿಸಲಾಗಿರುವ ಶೌಚಾಲಯವು ಗಂಡು ಮಕ್ಕಳಿಗೋ ಅಥವಾ ಹೆಣ್ಣು ಮಕ್ಕಳಿಗೋ ಎಂಬುದೇ ತಿಳಿಯದಂತಿದೆ ಎನ್ನುವುದನ್ನು ಉಲ್ಲೇಖಿಸಿದೆ.

ಹೊಸ ಸಮೀಕ್ಷೆ, ಬಜೆಟ್‌ನಲ್ಲಿ ಅನುದಾನ ಇಡಲು ಆದೇಶ

ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಬೇಕು ಎಂದು ಸೂಚಿಸಿರುವ ಕೋರ್ಟ್‌ ಶಾಲೆಗಳ ಮೂಲ ಸೌಕರ್ಯ ಸ್ಥಿತಿಗತಿ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸುವಂತೆ ಆದೇಶಿಸಿದೆ.

ಈ ಸಮೀಕ್ಷಾ ಪ್ರಕ್ರಿಯೆಯಲ್ಲಿ ಶಾಲಾ ಆಡಳಿತವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ತಾಲ್ಲೂಕು ಸದಸ್ಯ ಕಾರ್ಯದರ್ಶಿ ಅವರನ್ನು ಒಳಗೊಳ್ಳಬೇಕು. ಈ ಸಮೀಕ್ಷೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ, ಕೆಎಸ್‌ಎಲ್‌ಎಸ್‌ಎ ತಾಲ್ಲೂಕು ಸದಸ್ಯ ಕಾರ್ಯದರ್ಶಿ ಸಹಿ ಮಾಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.

ಎಲ್ಲೆಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲವೋ ಅಲ್ಲಿ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು. ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಎರಡು ವಾರಗಳಲ್ಲಿ ಸೌಲಭ್ಯ ಕಲ್ಪಿಸಬೇಕು. ಸಮೀಕ್ಷೆ ನಡೆಸುವಾಗ ಕೆಟ್ಟ ಪರಿಸ್ಥಿತಿ ಕಂಡು ಬಂದರೆ ವರದಿ ಸಲ್ಲಿಸುವುದಕ್ಕಾಗಿ ಕಾಯಬಾರದು. ಅಲ್ಲಿನ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳಬೇಕು. ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರಬೇಕು ಎಂದಿದೆ.

ಹೈಕೋರ್ಟ್‌ ಕಂಡ ಶಾಲೆಗಳ ದಯನೀಯ ಸ್ಥಿತಿ

  1. ರಾಜ್ಯದ ಬಾಕಿ ಇರುವ 464 ಶಾಲೆಗಳ ಪೈಕಿ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇಲ್ಲ. 430 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂದು ವರದಿ ಸಲ್ಲಿಸಿದ್ದೀರಿ. ಆದರೆ, ಇದು ತಪ್ಪಾದ ಮಾಹಿತಿಯಾಗಿದೆ.
  2. ಸರ್ಕಾರದ ಮಾಹಿತಿಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಯಾರು? ಯಾರಾದರೂ ಅವುಗಳನ್ನು ಪರಿಶೀಲಿಸಿದ್ದಾರೆಯೇ? ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಶೌಚಾಲಯಗಳಲ್ಲಿ ಸಾಕಷ್ಟು ಧೂಳು, ಗಿಡಗಂಟಿ ಬೆಳೆದು ನಿಂತಿವೆ. ಶೌಚಾಲಯಕ್ಕೆ ಬಾಗಿಲೇ ಇಲ್ಲ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾಗ ಶೌಚಾಲಯಗಳನ್ನು ಹೀಗೆ ನಿರ್ವಹಿಸಲಾಗಿತ್ತೇ?
  3. ಇಂಥ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಯಾವ ಪೋಷಕರು ಇಚ್ಛಿಸುತ್ತಾರೆ? ಆರ್ಥಿಕವಾಗಿ ಸಬಲರಲ್ಲದಿದ್ದರೂ ತಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಕಳುಹಿಸಲು ಬಯಸುವುದಿಲ್ಲ.
  4. ಸ್ಥಳವನ್ನು ಸ್ವಚ್ಛಗೊಳಿಸಲು ಮತ್ತು ಕುಡಿಯಲು ಯಾರೋ ನೀರು ಹೊತ್ತು ತರುತ್ತಿದ್ದಾರೆ. ನೀವು ಸಲ್ಲಿಸಿರುವುದು ಅನುಪಾಲನಾ ವರದಿಯೇ? ಈ ಪರಿಸ್ಥಿತಿಯು ಆಘಾತಕ್ಕಿಂತ ಹೆಚ್ಚಾಗಿ ನಮಗೆ ನೋವುಂಟು ಮಾಡಿದೆ.
  5. ಹೊರಗಡೆಯಿಂದ ಕುಡಿಯುವ ನೀರು ತರಲಾಗುತ್ತಿದೆ. ಕುಡಿಯುವ ನೀರನ್ನು ಬ್ಯಾರಲ್‌ನಲ್ಲಿ ಇಡಬಾರದೆ? ನೀರು ಬೇಕಾದರೆ ಏನು ಮಾಡಬೇಕು?

ಇದನ್ನೂ ಓದಿ: Sexual rejection : ಮದುವೆ ಆದ್ಮೇಲೆ ಸೆಕ್ಸ್‌ಗೆ ನಿರಾಕರಿಸುವುದು ಕ್ರೌರ್ಯ ಎಂದ ಹೈಕೋರ್ಟ್‌

Exit mobile version