ಕಾರವಾರ: ಕ್ಯಾನ್ಸರ್ ದೃಢಪಟ್ಟು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಗರದ ನಂದನಗದ್ದಾದ 4 ವರ್ಷದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ನುರಿತ ಕ್ಯಾನ್ಸರ್ ತಜ್ಞರ ‘ಕ್ಯಾನ್‌ವಿನ್ ಗ್ರೂಪ್’ ತಂಡದ ಅವಿರತ ಶ್ರಮದ ಫಲವಾಗಿ ಬಾಲಕನ ಆರೋಗ್ಯದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ.
ಕಿವಿಯ ಹಿಂಬದಿಯ ಚಿಕ್ಕ ಗುಳ್ಳೆಯೊಂದು ಬೃಹದಾಕಾರವಾಗಿ ಬೆಳೆದು ಮುಖವನ್ನು ಆವರಿಸಿಕೊಂಡಿದ್ದ ನಂದನಗದ್ದಾದ ಬಾಲಕನಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹಾಗೂ ಇತರರು ಕಾರವಾರ ಜಿಲ್ಲಾಸ್ಪತ್ರೆಯ ಬಳಿಕ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಅಲ್ಲಿ ಬಾಲಕನಿಗೆ ಕ್ಯಾನ್ಸರ್ ದೃಢಪಟ್ಟಿತ್ತು. ಈ ವೇಳೆ ಹಲವರ ಸಲಹೆ, ಸೂಚನೆ ಮೇರೆಗೆ ‘ಕ್ಯಾನ್‌ವಿನ್ ಗ್ರೂಪ್’ ತಂಡದ ವೈದ್ಯರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದ ಮಾಧವ ನಾಯಕ, ಬಾಲಕನನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ | Nirmala Sitharaman Pressmeet: ಸ್ತ್ರೀ ಸಬಲೀಕರಣ, ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ನಿರ್ಮಲಾ ಸೀತಾರಾಮನ್
ಸದ್ಯ ಇಂಡಿಯಾನ ಆಸ್ಪತ್ರೆಯಲ್ಲಿ ‘ಕ್ಯಾನ್‌ವಿನ್ ಗ್ರೂಪ್’ನ ಡಾ.ಅಜಯ ಕುಮಾರ್, ಡಾ.ರಾಮನಾಥ ಶೆಣೈ ನೇತೃತ್ವದಲ್ಲಿ ಆಸ್ಪತ್ರೆಯ ಇತರ ವೈದ್ಯರು ಹಾಗೂ ಸಿಬ್ಬಂದಿ ಬಾಲಕನಿಗೆ ಚಿಕಿತ್ಸೆಯ ಜೊತೆಗೆ ಆರೈಕೆ ಮಾಡುತ್ತಿದ್ದಾರೆ. ಹೆಚ್ಚಿನ ಕಾಳಜಿ ವಹಿಸಿ ಬಾಲಕನನ್ನು ಕ್ಯಾನ್ಸರ್ ಮುಕ್ತವಾಗಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಬಾಲಕನ ಆರೋಗ್ಯದಲ್ಲಿ ಈ ಮೊದಲಿಗಿಂತಲೂ ಚೇತರಿಕೆ ಕಂಡುಬಂದಿದ್ದು, ಇನ್ನೊಂದು ವೈದ್ಯಕೀಯ ವರದಿ ಬಂದ ಬಳಿಕ, ಅಂದರೆ ಇನ್ನೆರಡು ವಾರಗಳಲ್ಲಿ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನ ಚಿಕಿತ್ಸೆ ಸಂಬಂಧ ಆತನ ಕುಟುಂಬಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಅನೇಕ ದಾನಿಗಳು ನೆರವಾಗಿದ್ದಾರೆ. ಮಂಗಳೂರಿನ ಕ್ಯಾನ್ಸರ್ ಸೊಸೈಟಿ ಬಾಲಕನ ಚಿಕಿತ್ಸೆಗೆ 1 ಲಕ್ಷ ರೂ. ನೀಡಿ ನೆರವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಕೂಡ ಕೆಲವು ಸಂಘ- ಸಂಸ್ಥೆಗಳ ನೆರವಿನೊಂದಿಗೆ ಹೆಚ್ಚು ಖರ್ಚು ಬಾರದಂತೆ ನೋಡಿಕೊಳ್ಳುತ್ತಿದೆ.
ಕಾರವಾರದಲ್ಲಿ ಮಹಿಳಾ ಮೀನುಗಾರರ ಮುಖಂಡರಾದ ಸುಶೀಲಾ ಹರಿಕಂತ್ರ ಮಗುವಿನ ಚಿಕಿತ್ಸೆಗೆ ಮೀನು ಮಾರಾಟ ಮಹಿಳೆಯರಿಂದ ಸುಮಾರು 10 ಸಾವಿರ ರೂ. ಸಂಗ್ರಹಿಸಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ನರೇಂದ್ರ ದೇಸಾಯಿ 5 ಸಾವಿರ ರೂ., ನಗರಸಭೆಯ ಉಪಾಧ್ಯಕ್ಷ ಪ್ರಕಾಶ ನಾಯ್ಕ 2 ಸಾವಿರ ರೂ., ಮಾಜಿ ಶಾಸಕ ಸತೀಶ್ ಸೈಲ್ 10 ಸಾವಿರ ರೂ. ಹಾಗೂ ಅನೇಕ ಸಂಘ ಸಂಸ್ಥೆಗಳು, ದಾನಿಗಳು ಬಾಲಕನ ಕುಟುಂಬಕ್ಕೆ ನೆರವಾಗಿದ್ದಾರೆ.
ಇದನ್ನೂ ಓದಿ | Union Budget 2023 : ಸಹಜ ಕೃಷಿಯತ್ತ ಒಲವು, ಸಿರಿಧಾನ್ಯಕ್ಕೆ ಪ್ರೋತ್ಸಾಹ
“ಆಸ್ಪತ್ರೆಯವರು ಹಾಗೂ ವೈದ್ಯರ ತಂಡ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಷ್ಟೇ ಖರ್ಚು ಬಂದರೂ ಅದನ್ನು ದಾನಿಗಳ ನೆರವು ಪಡೆದು ಭರಿಸಿಕೊಡುವುದಾಗಿ ಕುಟುಂಬಕ್ಕೆ ಧೈರ್ಯ ನೀಡಿದ್ದೇನೆ. ನಮಗೆ ಬಾಲಕ ಗುಣಮುಖನಾಗಿ ಮೊದಲಿನಂತಾದರಷ್ಟೇ ಸಾಕು” ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ -ಮಾಧವ ನಾಯಕ ಹೇಳಿದರು.