Site icon Vistara News

KAS Prelims exam: ಕೆಎಎಸ್‌ ಪ್ರಿಲಿಮ್ಸ್ ಮುಂದೂಡಲು ರಾಜ್ಯಪಾಲರಿಗೆ ಅಭ್ಯರ್ಥಿಗಳ ನಿಯೋಗ ಮನವಿ

KAS Prelims exam

ಬೆಂಗಳೂರು: ಆಗಸ್ಟ್‌ 27ರಂದು ನಿಗದಿಯಾಗಿರುವ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಕ್ರಮ ಕೈಗೊಳ್ಳಬೇಕು ಎಂದು ಅಭ್ಯರ್ಥಿಗಳ ನಿಯೋಗ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಭಾನುವಾರ ಸಂಜೆ ಮನವಿ ಪತ್ರ ಸಲ್ಲಿಸಿದೆ. ಇನ್ನು ಕೆಎಎಸ್‌ ಆಕಾಂಕ್ಷಿಗಳಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಧೀರಜ್‌ ಮುನಿರಾಜು ಮತ್ತಿತರ ನಾಯಕರು ಬೆಂಬಲ ನೀಡಿದ್ದು, ಕೆಪಿಎಸ್‌ಸಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಹೀಗಾಗಿ ಕೆಎಎಸ್‌ ಪ್ರಿಲಿಮ್ಸ್ ಪರೀಕ್ಷೆ (KAS Prelims exam) ಮುಂದೂಡಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಕಳೆದ ಹತ್ತು ದಿನಗಳಿಂದ ಕೆಪಿಎಸ್‌ಸಿ ಪರೀಕ್ಷೆ ಮುಂದೂಡುವಂತೆ ಸರ್ಕಾರ ಹಾಗೂ ಕೆಪಿಎಸ್‌ಸಿಗೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ವಾರದ ದಿನದಲ್ಲಿ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ಅನೇಕ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಪರೀಕ್ಷಾ ಕೇಂದ್ರಗಳನ್ನೂ ಕೂಡ ದೂರದ ಊರುಗಳಲ್ಲಿ ನಿಗದಿ ಮಾಡಲಾಗಿದೆ. ಸಾಕಷ್ಟು ಅಭ್ಯರ್ಥಿಗಳು ಬೇರೆ ಬೇರೆ ಕಡೆ ಕೆಲಸ‌ ಮಾಡುತ್ತಿರುತ್ತಾರೆ. ವಿಶೇಷ ಚೇತನ ಅಭ್ಯರ್ಥಿಗಳು ಸ್ಕ್ರೈಬ್‌ಗಳ ಮೇಲೆ ಅವಲಂಬಿತರಾಗಿದ್ದು, ಸ್ಕ್ರೈಬ್‌ಗಳಿಗೂ ರಜೆ ಹಾಕಿ ಬರಲು ಸಮಸ್ಯೆ ಆಗಲಿದೆ. ಹೀಗಾಗಿ ಪರೀಕ್ಷೆ ಮುಂದೆ ಹಾಕಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್ ಹಾಕಿ, ಬಂಧಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದು, ಇದೊಂದು ಗಂಭೀರ ವಿಚಾರ ಅಂತ ಅವರು ಹೇಳಿದ್ದಾರೆ. ಕೆಪಿಎಸ್‌ಸಿ ಚೇರ್ಮನ್ ಜೊತೆ ರಾಜ್ಯಪಾಲರು ಮಾತನಾಡಿದ್ದು, ಅಭ್ಯರ್ಥಿಗಳ ಜೊತೆ ಮಾತನಾಡುವಂತೆ ಸೂಚಿಸಿದ್ದಾರೆ. ಕೆಪಿಎಸ್‌ಸಿ ಮೂರು ವರ್ಷಕ್ಕೊಮ್ಮೆ ಪರೀಕ್ಷೆ ನಡೆಸುತ್ತದೆ, ಆದರೆ ಪರೀಕ್ಷೆ ಕ್ಯಾಲೆಂಡರ್ ನೋಡದೆ ಡೇಟ್ ನಿಗದಿ ಹಾಕಿದ್ದಾರೆ. ಪರೀಕ್ಷೆಗೆ ಇನ್ನು ಎರಡು ದಿನವಷ್ಟೆ ಬಾಕಿ ಇದೆ. ಹೀಗಾಗಿ ಇನ್ನು ನಾಲ್ಕು ದಿನಗಳಾದರೂ ಪರೀಕ್ಷೆ ಮುಂದೂಡಿಕೆ ಮಾಡಿ, ಅಭ್ಯರ್ಥಿಗಳಿಗೆ ಅನುಕೂಲ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದಾರೆ.

ಇದನ್ನೂ ಓದಿ | KAS Prelims exam: ಕೆಎಎಸ್‌ ಪರೀಕ್ಷೆ ಮುಂದೂಡಲು ಕೆಲವರಿಂದ ಲಾಬಿ; ಆದರೆ ಮುಂದೂಡುವುದಿಲ್ಲ ಎಂದ ಸರ್ಕಾರ

ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ (UGCET 2024) ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಎರಡನೇ ಅಣಕು ಸೀಟು‌ ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ಸಂಜೆ ಪ್ರಕಟಿಸಿದೆ.

ಕೆಇಎ ವೆಬ್ ಸೈಟ್‌ನಲ್ಲಿ ಅಣಕು ಫಲಿತಾಂಶ ಲಭ್ಯ‌ ಇದ್ದು, ಅದನ್ನು ನೋಡಿದ ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಅಭ್ಯರ್ಥಿಗಳು ತಮ್ಮ‌ ಇಚ್ಛೆಯನುಸಾರ ಕಾಲೇಜು/ಕೋರ್ಸ್ ಗಳನ್ನು ಅಧಿಕೃತ ಮೊದಲ ಸುತ್ತಿನ ಆಯ್ಕೆಗೆ ಬದಲಿಸಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಗದಿಯಂತೆ ಮೊ‌ದಲ ಸುತ್ತಿನ‌ ನೈಜ ಸೀಟು ಹಂಚಿಕೆ ಫಲಿತಾಂಶವನ್ನು ಸೆ.1ರಂದು ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 22ರ ಸಂಜೆ 5ಗಂಟೆವರೆಗೆ ಆದ್ಯತಾ ಕ್ರಮದಲ್ಲಿ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಅಣಕು ಸೀಟು ಹಂಚಿಕೆಯನ್ನು ಮಾಡಲಾಗಿದೆ. ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್‌ಸಿ (ನರ್ಸಿಂಗ್), ಬಿ-ಫಾರ್ಮ, ಫಾರ್ಮ್-ಡಿ ಇತ್ಯಾದಿ ಕೋರ್ಸುಗಳ ಸೀಟು ಹಂಚಿಕೆಯನ್ನು ಮಾಡಲಾಗಿದೆ.

ಇದನ್ನೂ ಓದಿ: UGCET 2024: ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ರಿಸ್ಟಲ್‌ ಅನೌನ್ಸ್‌; ಆಪ್ಶನ್ ಎಂಟ್ರಿಗೆ ಇವತ್ತೆ ಲಾಸ್ಟ್

ಇಲ್ಲಿಯವರೆಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಇಷ್ಟವಿದ್ದಲ್ಲಿ ಆ.27ರ ಬೆಳಗ್ಗೆ 11ರೊಳಗೆ ಮೊದಲನೆ ಸುತ್ತಿನ ಸೀಟು ಹಂಚಿಕೆಗೆ ಕಾಲೇಜು ಮತ್ತು ಕೋರ್ಸುಗಳ ಆಯ್ಕೆಗಾಗಿ ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದರು.

ಅಭ್ಯರ್ಥಿಗಳು ಕೇಳಬಹುದಾದ ಪುನರಾವರ್ತಿತ ಪ್ರಶ್ನೆಗಳನ್ನು ಕ್ರೋಡೀಕರಿಸಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಉತ್ತರಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಅದನ್ನು ಓದಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಭೇಟಿ ನೀಡಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version