Site icon Vistara News

ಕೃಷ್ಣರಾಜ ಪರಿಷನ್ಮಂದಿರ ಹೆಸರು ಬದಲು, ಬಣ್ಣವೂ ಬದಲು: ಆಗಸ್ಟ್‌ 26ಕ್ಕೆ ಉದ್ಘಾಟನೆ

KASAPA 1

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರುವಾಸಿಯಾಗಿರುವ, ನಗರದ ಪ್ರತಿಷ್ಠಿತ ಸಭಾಂಗಣದಲ್ಲೊಂದಾದ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರ ನವೀಕೃತಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿರುವ ಪರಿಷನ್ಮಂದಿರ ಶಿಥಿಲಗೊಂಡಿತ್ತು ಹಾಗೂ ಧ್ವನಿ ಬೆಳಕು ವ್ಯವಸ್ಥೆ ಸರಿಯಿಲ್ಲ ಎಂಬ ದೂರಿಗೆ ಉತ್ತರವಾಗಿ ಈಗ ಸುಸಜ್ಜಿತವಾಗಿ ರೂಪುಗೊಂಡಿದೆ. 90 ವರ್ಷ ದಾಟಿದ ಕೃಷ್ಣರಾಜ ಪರಿಷನ್ಮಂದಿರವನ್ನು ʻಕೃಷ್ಣರಾಜ ಪರಿಷತ್ತಿನ ಮಂದಿರʼ ಎಂದು ಬದಲಾವಣೆ ಮಾಡಲಾಗುತ್ತಿದ್ದು, ಈ ಹಿಂದೆ ಇದ್ದ ಹಳದಿ ಮಿಶ್ರಿತ ತಿಳಿ ಹಸಿರು ಬಣ್ಣವನ್ನೂ ಬದಲಾಯಿಸಿಕೊಂಡು ನವದೆಹಲಿಯ ಕೆಂಪುಕೋಟೆ, ಕರ್ನಾಟಕದ ಹೈಕೋರ್ಟ್‌ನಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಹೆಸರು ಬದಲಾವಣೆಗೆ ಕಾರಣವೂ ಇದೆ.

90 ವರ್ಷ ಮೀರಿದ ಕಟ್ಟಡ

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಆದಾಗ ಅದರ ಕಚೇರಿ ಪ್ರಾರಂಭವಾದದ್ದು ಚಾಮರಾಜಪೇಟೆಯ ೪ನೆಯ ಮುಖ್ಯರಸ್ತೆಯಲ್ಲಿ. ಪರಿಷತ್ತಿಗೆ ಸ್ವಂತ ನಿವೇಶನದ ಕನಸು ಕಂಡವರು ಕರ್ಪೂರ ಶ್ರೀನಿವಾಸರಾಯರು. ಅದಕ್ಕೆ ಇಂಬು ನೀಡಿದವರು. ಅಂದಿನ ದಿವಾನರಾದ ಸರ್‌ ಮಿರ್ಜಾ ಇಸ್ಮಾಯಿಲ್‌. ಇವರ ಪ್ರಯತ್ನದಿಂದ ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಈಗಿನ ನಿವೇಶನ ದೊರಕಿತು. ಇದು ಮೊದಲು ವಿಶಾಲವಾದ ಬಯಲು ಪ್ರದೇಶವಾಗಿತ್ತು. ಇಲ್ಲಿ ಭಾರತ ಸ್ವಾತಂತ್ರ್ಯ ಚಳವಳಿಯ ಎಲ್ಲ ಸಭೆಗಳೂ ನಡೆಯುತ್ತಿದ್ದವು. ಹೀಗಾಗಿ ಜನರು ಇದನ್ನು “ಗಾಂಧಿ ಮೈದಾನ’ವೆಂದು ಕರೆಯುತ್ತಿದ್ದರು. ಸರ್ಕಾರದಿಂದ ಪ್ರಸ್ತುತ ಸ್ಥಳ ಪರಿಷತ್ತಿಗೆ ದಾನವಾಗಿ ದೊರೆಯಿತು.

ನವೀಕೃತ ಕಟ್ಟಡ

೧೯೩೧ರ ಏಪ್ರಿಲ್‌ ೧೨ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿತು. ಸ್ವತಃ ಇಂಜಿನಿಯರ್‌ ಆಗಿದ್ದ ಶ್ರೀನಿವಾಸರಾಯರು ಕಟ್ಟಡದ ವಿನ್ಯಾಸ ಮತ್ತು ರಚನೆಗೆ ಗಮನ ಕೊಟ್ಟಿದ್ದು ಮಾತ್ರವಲ್ಲದೆ, ಕಟ್ಟಡ ನಿರ್ಮಾಣಕ್ಕೆ ಹಣ ಸಂಗ್ರಹಿಸಿದರು. ಕಟ್ಟಡ ನಿಧಿಗಾಗಿ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್‌ ಅವರು ಮೂರು ಸಾವಿರ ರೂಪಾಯಿಗಳನ್ನು, ಅಂದು ಪರಿಷತ್ತಿನ ಅಧ್ಯಕ್ಷರಾಗಿದ್ದ ರಾಜಬಂಧು ಎಂ. ಕಾಂತರಾಜ ಅರಸ್‌ ಅವರು ಐದು ಸಾವಿರ ರೂಪಾಯಿಗಳನ್ನು ಉದಾರವಾಗಿ ದಾನ ನೀಡಿದರು. ಪರಿಷತ್ತು ಸುಮಾರು ಎರಡೂವರೆ ಸಾವಿರ ರೂಪಾಯಿಗಳನ್ನು ಸಂಗ್ರಹ ಮಾಡಿತು. ಸರ್‌ ಮಿರ್ಜಾ ಇಸ್ಮಾಯಿಲ್‌ ಸರ್ಕಾರದಿಂದ ೧೫,೨೮೬ ರೂಪಾಯಿ ಮಂಜೂರು ಮಾಡಿಸಿದರು.

ಆರಂಭದಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಕಟ್ಟಡದ ಮೂಲ ಸ್ವರೂಪ ಈಗಿರುವಂತೆ ಇರಲಿಲ್ಲ. ಸಭಾಂಗಣವನ್ನು ಮೂರು ವಿಶಾಲ ಕೊಠಡಿಗಳಾಗಿ ರೂಪಿಸಲಾಗಿತ್ತು. ಒಮ್ಮೆ ನಗರ ಪ್ರದರ್ಶನಕ್ಕೆ ಬಂದಾಗ ಇದನ್ನು ಕಂಡ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ಪರಿಷತ್ತು ಬರೀ ಕಚೇರಿ ಆಗಬಾರದು. ಅದು ಬಹು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸಾಂಸ್ಕೃತಿಕ ಚಟುವಟಿಕೆ ತಾಣವಾಗಬೇಕು ಎಂದು ಸೂಚಿಸಿದರು. ಇದರಿಂದಾಗಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ರೂಪುಗೊಂಡಿತು. ಕರ್ಪೂರ ಶ್ರೀನಿವಾಸರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪನವರು ಕಟ್ಟಡ ರೂಪಿಸುವಲ್ಲಿ ಸಾಕಷ್ಟು ಶ್ರಮಿಸಿದರು. ೧೯೩೩ ಮೇ ೨೬ರ ಶುಕ್ರವಾರದಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ ಅಧಿಕೃತವಾಗಿ ಉದ್ಧಾಟನೆಯಾಯಿತು.

ಇದನ್ನೂ ಓದಿ | ಕೋಟಿ ಸದಸ್ಯತ್ವಕ್ಕೆ ಕಸಾಪ ಮೊದಲ ಹೆಜ್ಜೆ; ಆ್ಯಪ್‌ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಕಳೆದ ಒಂಭತ್ತು ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹಲವು ಚಾರಿತ್ರಿಕ ಘಟನೆಗಳಿಗೆ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಾಕ್ಷಿಯಾಗಿದೆ. ನಾಡಿನ ಭವ್ಯ ಪರಂಪರೆಯನ್ನು ಅದು ಶ್ರೀಮಂತಗೊಳಿಸಿದೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕಿ ಇದು ಶಿಥಿಲಾವಸ್ಥೆಯನ್ನು ತಲುಪಿತ್ತು. ಇದನ್ನು ಗಮನಿಸಿದ ನಾಡಿನ ಅನೇಕ ಸಾಹಿತ್ಯ ಮತ್ತು
ಸಾಂಸ್ಕೃತಿಕ ಲೋಕದ ದಿಗ್ಗಜರು ಪರಿಷನ್ಮಂದಿರವನ್ನು ನವೀಕರಣಗೊಳಿಸುವಂತೆ ಆಶಿಸಿದ್ದರು.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಅವರ ಅವಧಿ ಮುಕ್ತಾಯದ ನಂತರ ಆಡಳಿತಾಧಿಕಾರಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶ ಎಸ್‌. ರಂಗಪ್ಪ ಅವರು ಸಿಎಸ್‌ಆರ್‌ ಹಣದಿಂದ ನವೀಕರಣ ಮಾಡುವುದಾಗಿ ತಿಳಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ನಡೆದ ಚುನಾವಣೆಯಲ್ಲಿ ಜಯಗಳಿಸಿ ಬಂದ ಡಾ. ಮಹೇಶ್‌ ಜೋಶಿ ಅವರು ಇದೀಗ ಸಭಾಂಗಣವನ್ನು ನವೀಕರಿಸಿದ್ದಾರೆ.

ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹವಾನಿಯಂತ್ರಿತ ಸಭಾಂಗಣ, ಸುಸಜ್ಜಿತ ಆಸನ ವ್ಯವಸ್ಥೆ, ಸಮರ್ಪಕ ಧ್ವನಿ, ಬೆಳಕಿನ ವಿನ್ಯಾಸ ಹೀಗೆ ಹೊಸ ಕಾಲಘಟ್ಟಕ್ಕೆ ತಕ್ಕಂತೆ ರೂಪುಗೊಂಡಿದೆ. ಆದರೆ ಪರಂಪರೆಯ ಲಕ್ಷಣಗಳನ್ನು ಕೂಡ
ಉಳಿಸಿಕೊಂಡಿದೆ. ಕಟ್ಟಡದ ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಆಗಸ್ಟ್‌ 26ಕ್ಕೆ ಉದ್ಘಾಟನೆ

ನವೀಕೃತ ಕಟ್ಟಡವನ್ನು ಆಗಸ್ಟ್‌ 26ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಕಂದಾಯ ಸಚಿವ ಆರ್‌. ಅಶೊಕ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್‌, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಉಪಸ್ಥಿತರಿರಲಿದ್ದಾರೆ.

ಕೃಷ್ಣರಾಜ ಪರಿಷನ್ಮಂದಿರ ಎಂದು ಪ್ರಾರಂಭದ ದಿನಗಳಿಂದಲೂ ಕರೆಯಲಾಗುತ್ತಿದೆ. ಆದರೆ ಅನೇಕ ಬಾರಿ ಸಾಮಾನ್ಯರು ಉಚ್ಛಾರಣೆ ಮಾಡುವಾಗ ತಪ್ಪುತಪ್ಪಾಗುತ್ತಿತ್ತು, ಕೆಲವರಿಗೆ ನಾಲಗೆ ಹೊರಳುತ್ತಿರಲಿಲ್ಲ. ಹೀಗೆ ಅಪಭ್ರಂಶವಾಗುವ ಬದಲಿಗೆ, ಕನ್ನಡದಲ್ಲಿ ಪರಿಷತ್ತಿನ ಮಂದಿರ ಎಂದು ಇರಿಸಲು ನಿರ್ಧರಿಸಲಾಗಿದೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ. ಪರಿಷನ್ಮಂದಿರ ಎನ್ನುವುದು ಸಂಸ್ಕೃತದ ಪ್ರಭಾವವನ್ನು ಹೊಂದಿದೆ ಎಂಬ ಮಾತುಗಳಿದ್ದವು, ಹಾಗಾಗಿ ಬದಲಾಯಿಸಲಾಗಿದೆ ಎನ್ನಲಾಗುತ್ತಿದ್ದರೂ, ಈ ವಾದವನ್ನು ಪರಿಷತ್ತಿನ ಮೂಲಗಳು ಅಲ್ಲಗಳೆದಿವೆ. ಮುಖ್ಯ ಕಟ್ಟಡ ಇಲ್ಲಿಯವರೆಗೆ ಹಳದಿ ಮಿಶ್ರಿತ ತಿಳಿ ಹಸಿರು ಬಣ್ಣದಲ್ಲಿತ್ತು. ಇದೀಗ ಕೆಂಪು ಬಣ್ಣಕ್ಕೆ ಬದಲಾಯಿಸಲಾಗಿದೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿದೇಶಗಳಲ್ಲಿಯೂ ಘಟಕ; ಸಲಹೆ ನೀಡಲು ಸಮಿತಿ ರಚನೆ

Exit mobile version