ಬೆಂಗಳೂರು: ಕರ್ನಾಟಕ ಹಾಗೂ ಕಾಸರಗೋಡಿನ ನಡುವಿನ ಕೊಂಡಿಯಾಗಿರುವ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಟಕ ಇನ್ನೂ ತಪ್ಪಿಲ್ಲ. ರಾಜಕೀಯವಾಗಿ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲು ಅಥವಾ ನಿರ್ಬಲಗೊಳಿಸಲು ಆಗಾಗ್ಗೆ ಅಲ್ಲಿ ನಡೆಯುವ ಪ್ರಯತ್ನಗಳ ಕುರಿತು 2018ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಸಿನಿಮಾವನ್ನು ರಿಷಭ್ ಶೆಟ್ಟಿ ನಿರ್ಮಿಸಿದ್ದರು.
ಈ ಸಿನಿಮಾ ಕರ್ನಾಟಕದಾದ್ಯಂತ ಜನಮೆಚ್ಚುಗೆಯನ್ನು ಪಡೆದು ಕಾಸರಗೋಡು ಸೇರಿ ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆ ಉಳಿಸುವ ಪ್ರೇರೇಪಣೆಯನ್ನು ಸಾರ್ವಜನಿಕರಿಗೆ ನೀಡಿತ್ತು. ಆದರೆ ಇದೀಗ ನಡೆದಿರುವುದು ಸಿನಿಮಾ ಕಥೆ ಅಲ್ಲ, ನಿಜವಾದ ಘಟನೆ.
ಕಾಸರಗೋಡು ಜಿಲ್ಲೆಯ ಅಡೂರು ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಕೇರಳ ಸರ್ಕಾರ ಒಬ್ಬ ಶಿಕ್ಷಕಿಯನ್ನು ನಿಯೋಜನೆ ಮಾಡಿದೆ. ಆ ಶಿಕ್ಷಕಿ ಸಮಾಜ ವಿಜ್ಞಾನ ಬೋಧಿಸುವವರಿದ್ದರು. ಆದರೆ ಅವರಿಗೆ ಕನ್ನಡವೇ ಬರುವುದಿಲ್ಲ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡವೇ ಬಾರದ ಶಿಕ್ಷಕರನ್ನು ನೇಮಿಸಿದ್ದಕ್ಕೆ ಪೋಷಕರು ಹಾಗೂ ಸ್ವತಃ ವಿದ್ಯಾರ್ಥಿಗಳೇ ಸಿಟ್ಟಾಗಿದ್ದಾರೆ.
ಇತ್ತೀಚೆಗೆ ಈ ಶಿಕ್ಷಕಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಆಗಮಿಸಿದ್ದರು. ಆದರೆ ಆಗ ಗ್ರಾಮಸ್ಥರು ವಿರೋಧಿಸಿದ್ದರಿಂದ ವಾಪಸಾಗಿದ್ದರು. ಆದರೆ ಶನಿವಾರ ಪೊಲೀಸ್ ಕಾವಲಿನೊಂದಿಗೆ ವರದಿ ಮಾಡಿಕೊಳ್ಳಲು ಶಿಕ್ಷಕಿ ಆಗಮಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಊಟವನ್ನೂ ಮಾಡದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಘಟನಾವಳಿಗಳನ್ನು ತಿಳಿದ ಮುಖ್ಯಶಿಕ್ಷಕರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೆ ಸೋಮವಾರವೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಕಳೆದ ವರ್ಷ ಕಾಸರಗೋಡಿನ ಅನೇಕ ಕನ್ನಡ ಮಾಧ್ಯಮ ಶಾಲೆಗಳಿಗೆ ಕ ನ್ನಡವೇ ತಿಳಿದಿಲ್ಲದ ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಇದರ ವಿರುದ್ಧ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೇರಳ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಪ್ರತಿಭಟನೆಗಳು ನಡೆದಾಗ ಸರ್ಕಾರ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಂಡಿತ್ತು.
ಆನಂತರ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದಾಗಲೂ, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಮತ್ತೊಮ್ಮೆ ಸರ್ಕಾರ ಅದೇ ತಪ್ಪನ್ನು ಮಾಡಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಕೇರಳ ಸರ್ಕಾರಕ್ಕೆ ದೂರವಾಣಿ ಹಾಗೂ ಪತ್ರದ ಮೂಲಕ ಸಂಪರ್ಕಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಗೂ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಕೊಣನೂರು ಪಿಎಸ್‌ಐ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು; ಸರ್ಕಾರಿ ಶಾಲೆಗೆ ಕಲ್ಲೆಸೆದು ವಿಕೃತಿ