Site icon Vistara News

ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ: ವರದಿ ಕೈಬಿಡುವಂತೆ ಕಾನೂನು ಹೋರಾಟ

kasturirangan report

ಬೆಂಗಳೂರು: ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಇದು ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಕಂಟಕಪ್ರಾಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣೆ ವಿಚಾರವಾಗಿ ಮಲೆನಾಡು, ಕರಾವಳಿ ಭಾಗದ ಶಾಸಕರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ಎಲ್ಲ ಶಾಸಕರಿಂದ ಈ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕಸ್ತೂರಿ ರಂಗನ್ ವರದಿಯ‌ ಸಂಬಂಧ ಕೇಂದ್ರ ಪರಿಸರ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರದಿಂದ 5ನೇ ಅಧಿಸೂಚನೆ ಪ್ರಕಟವಾಗಿದೆ. ಈ ಬಗ್ಗೆ ಚಿಂತನೆ ಮಾಡಲು ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದು, ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದೇವೆ.

ಇದನ್ನೂ ಓದಿ | ಪಶ್ಚಿಮ ಘಟ್ಟ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡು ಶಾಸಕರ ಸಭೆ ಕರೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಈ ಹಿಂದೆ ಸಿಎಂ ನೇತೃತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿಯಾಗಿ ವರದಿಯನ್ನು ರದ್ದು ಮಾಡುವಂತೆ ಮನವಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗವು ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಈ ಮೊದಲು ಮಾಧವ ಗಾಡ್ಗೀಳ್ ವರದಿ ‌ಬಂದಿತ್ತು, ನಂತರ ಕಸ್ತೂರಿ‌ರಂಗನ್‌ ವರದಿ ಬಂದಿದೆ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಿದೆ. ವಿಶೇಷವಾಗಿ ಜು.‌ 22ರಂದು‌ ನಡೆಯಲಿರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಈ ವರದಿ ವಿರುದ್ಧ ಕಾನೂನು ಹೋರಾಟ ಮಾಡಲು ವಕೀಲರನ್ನು ನೇಮಕ ಮಾಡಲಾಗುತ್ತಿದೆ. ಜು.25 ಅಥವಾ 26 ರಂದು ಸಿಎಂ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಶಾಸಕರ ನಿಯೋಗದಿಂದ ಕೇಂದ್ರದ ಪರಿಸರ ಸಚಿವರ ಭೇಟಿ ಮಾಡಿ, ವರದಿ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದರು.

ಈ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆನಂದ್ ಸಿಂಗ್, ಸುನೀಲ್ ಕುಮಾರ್ ಸೇರಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು.‌

ಇದನ್ನೂ ಓದಿ | ಅತಿ ಸೂಕ್ಷ್ಮ ಪ್ರದೇಶ | ಕೇಂದ್ರಕ್ಕೆ ಜನಾಭಿಪ್ರಾಯ ವರದಿ ಸಲ್ಲಿಸಲು ರವೀಂದ್ರ ನಾಯ್ಕ ಒತ್ತಾಯ

Exit mobile version