ಹಾಸನ/ಸಕಲೇಶಪುರ: ಅವೈಜ್ಞಾನಿಕವಾಗಿರುವ ಕಸ್ತೂರಿ ರಂಗನ್ ವರದಿ (Kasturirangan report) ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಜುಲೈ 27, 28 ಹಾಗೂ 29ರಂದು ಕರೆ ನೀಡಿದ್ದ ಮಲೆನಾಡು ಬಂದ್ ಅನ್ನು ವಾಪಸ್ ಪಡೆಯಲಾಗಿದೆ. ಕೇಂದ್ರದ ಕ್ರಮಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟವು ಬಂದ್‌ನಿಂದ ಹಿಂದೆ ಸರಿದಿದೆ.
ಕಸ್ತೂರಿ ರಂಗನ್ ವರದಿಯನ್ನು (Kasturirangan report) ವೈಜ್ಞಾನಿಕವಾಗಿ ಜಾರಿಗೊಳಿಸಬೇಕು ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್‌ಕುಮಾರ್ ಎಚ್ಚರಿಸಿದ್ದಾರೆ. ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಸರ್ಕಾರದಿಂದ ಮನವಿ ಬಂದ ನಿಟ್ಟಿನಲ್ಲಿ ವಾಪಸ್ ಪಡೆಯಲಾಗಿದೆ. ಒಕ್ಕೂಟದ ವತಿಯಿಂದ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರು ನೀಡುವ ಆಶ್ವಾಸನೆಯ ನಂತರ ಮುಂದಿನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | ಒಂದು ವರ್ಷ ಕಸ್ತೂರಿ ರಂಗನ್ ವರದಿಗೆ ಬ್ರೇಕ್: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು
ಸಕಲೇಶಪುರ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಸಂಪೂರ್ಣ ಅವೈಜ್ಞಾನಿವಾಗಿದ್ದು, ಡ್ರೋನ್ ಮೂಲಕ ನಡೆಸಿರುವ ಸರ್ವೇಯಿಂದಾಗಿ ಇಷ್ಟೆಲ್ಲ ಸಮಸ್ಯೆಗಳು ಉದ್ಬವವಾಗಿವೆ. ಆದ್ದರಿಂದ, ಕಸ್ತೂರಿ ರಂಗನ್ ವರದಿಗೆ ಒಳಪಡುವ ಗ್ರಾಮಗಳನ್ನು ವ್ಯಕ್ತಿಗತವಾಗಿ ಸರ್ವೇ ನಡೆಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ತಿದ್ದುಪಡಿಗಾಗಿ ಹಿಂದಿನಿಂದಲೂ ಒತ್ತಾಯಿಸಿದ್ದೇವೆ.
ಈ ನಮ್ಮ ಬೇಡಿಕೆ ಈಡೇರುವವರಗೆ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳೆಗಾರರ ಸಂಘಟನೆಗಳು ತೆಗೆದುಕೊಳ್ಳುವ ಪ್ರತಿಯೊಂದು ಹೋರಾಟದ ನೇತೃತ್ವವನ್ನು ನಾವು ವಹಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಕಾರ್ಯದರ್ಶಿ ಕೃಷ್ಣಪ್ಪ, ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಿ.ಎ. ಜಗನ್ನಾಥ್, ಜಯರಾಂ, ಕೊಡಗು ಸಂಘಟನಾ ಕಾರ್ಯದರ್ಶಿ ಕೆ.ಕೆ ವಿಶ್ವನಾಥ್, ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್, ರಘು ಹಾಜರಿದ್ದರು.
ಇದನ್ನೂ ಓದಿ | ಕಸ್ತೂರಿ ರಂಗನ್ ವರದಿ ವಿರುದ್ಧ ಮೂರು ದಿನ ಮಲೆನಾಡು ಬಂದ್‌ಗೆ ಕರೆ