ಮಂಗಳೂರು: ಸರ್ಕಾರ ವಿಧಿಸಿರುವ ಧ್ವನಿವರ್ಧಕ ನಿರ್ಬಂಧದ ಬಿಸಿ ಯಕ್ಷಗಾನ ಮೇಳಗಳಿಗೂ ತಟ್ಟಿದೆ. ಕಟೀಲು ಕ್ಷೇತ್ರದ ಯಕ್ಷಗಾನ ಮೇಳಗಳು ಕೂಡ ಮುಂದಿನ ವರ್ಷದಿಂದ ರಾತ್ರಿಯಿಡೀ ಪ್ರದರ್ಶನ ನಿಲ್ಲಿಸಿ, ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡಲಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳು ಇದುವರೆಗೂ ರಾತ್ರಿಯಿಂದ ಮುಂಜಾನೆವರೆಗೆ ಹರಿಕೆ ಯಕ್ಷಗಾನ ಬಯಲಾಟ ಪ್ರದರ್ಶಿಸುತ್ತಿದ್ದವು. ಇದೀಗ ರಾತ್ರಿ 10.30ರಿಂದ 50 ಡೆಸಿಬಲ್ ಮೀರಿದ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಪ್ರದರ್ಶನವನ್ನು ಕಾಲಮಿತಿಯಲ್ಲಿ ನಡೆಸಲು ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಹಾಗೂ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಂಜೆ 5ರಿಂದ ರಾ.10.30ರವರೆಗೆ ಮಾತ್ರ ಯಕ್ಷಗಾನ ಪ್ರದರ್ಶನ ನೀಡಲು ಆಡಳಿತ ನಿರ್ಧರಿಸಿದ್ದು, ಈ ಬಗ್ಗೆ ದೇವರ ಸನ್ನಿಧಿಯಲ್ಲಿ ಹೂವಿನ ಪ್ರಶ್ನೆ ಕೇಳಿದಾಗ ಸಮ್ಮತಿ ಸಿಕ್ಕಿದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷದಿಂದ ಕಾಲಮಿತಿ ಪ್ರದರ್ಶನ ಜಾರಿಗೆ ಬರಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು- ಈ ನಾಲ್ಕು ಜಿಲ್ಲೆಗಳಲ್ಲಿ 80ಕ್ಕೂ ಅಧಿಕ ಯಕ್ಷಗಾನ ಮೇಳಗಳಿದ್ದು, ಇದರಲ್ಲಿ 30ರಷ್ಟು ತಿರುಗಾಟ ಮೇಳಗಳಿವೆ. ಒಂದೂವರೆ ದಶಕದ ಹಿಂದೆ, ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನವನ್ನು ಐದು- ಆರು ಗಂಟೆಗಳ ಕಾಲಮಿತಿಯಲ್ಲಿ, ಸಂಜೆಯಿಂದ ಆರಂಭಿಸಿ ರಾತ್ರಿ ಹನ್ನೊಂದರ ಒಳಗೆ ಮುಗಿಸುವ ರೂಢಿ ಬಂದಿದೆ. ಬಡಗಿನ ಕೆಲವು ಮೇಳಗಳು ಮಾತ್ರ ಡೇರೆ ಹಾಕಿ ರಾತ್ರಿಯಿಡೀ ಯಕ್ಷಗಾನ ನಡೆಸುತ್ತಿವೆ. ಮಳೆಗಾಲದಲ್ಲಿ ಟೌನ್‌ಹಾಲ್‌ಗಳಲ್ಲಿ ಆಯ್ದ ಕಲಾವಿದರಿಂದ ರಾತ್ರಿಯಡೀ ಪ್ರದರ್ಶನಗಳೂ ಜನಪ್ರಿಯವಾಗಿವೆ.