ಬೆಂಗಳೂರು: ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ (Revenue department) ಸಾಕಷ್ಟು ಬದಲಾವಣೆ ತರಲು ಸಚಿವ ಕೃಷ್ಣ ಬೈರೇಗೌಡ (Krishna Byregowda) ಅವರು ಮುಂದಾಗಿದ್ದು, ನೋಂದಣಿಗಾಗಿ (Revenue registration) ಕಾವೇರಿ -2.0 (Kaveri 2.0 online service) ತಂತ್ರಾಂಶವನ್ನು ಸೋಮವಾರ ಸಂಜೆಯಿಂದಲೇ ಅಳವಡಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೊಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ರಾಜ್ಯದ 251 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸೋಮವಾರ ಸಂಜೆಯೊಳಗೆ ಕಾವೇರಿ -2.0 ತಂತ್ರಾಂಶ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ʻʻಆಡಳಿತ ಸುಧಾರಣೆ ಆಗಬೇಕು, ಜನರಿಗೆ ವಿಳಂಬ ಇಲ್ಲದೆ ಕೆಲಸ ಆಗಬೇಕು ಎಂಬುದು ಸರ್ಕಾರದ ಆದ್ಯತೆ. ಜನರು ಹಾಗೂ ಸರ್ಕಾರದ ನಡುವೆ ರಿಜಿಸ್ಟ್ರೇಷನ್ ಅತ್ಯಂತ ಪ್ರಮುಖ ಭಾಗ. ನೊಂದಣಿ ಇಲಾಖೆಯಲ್ಲಿ ಬಹಳ ಅಸ್ತವ್ಯಸ್ತತೆ ಇದೆ. ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ಜನರು ಅವರ ಆಸ್ತಿ ಅವರು ಮಾರಾಟ ಮಾಡುವುದಕ್ಕೆ ಪಡಬಾರದ ಯಾತನೆ ಅನುಭವಿಸಿದ್ದಾರೆ. ಇದನ್ನು ಪರಿಹರಿಸಲು ಪ್ರಯತ್ನ ನಡೆಯುತ್ತಿದೆ. ಜನರ ಸಮಸ್ಯೆ ಪರಿಹರಿಸಲು ಕಾವೇರಿ-2 ಎಂಬ ಪದ್ಧತಿ ತರಲಾಗಿದೆ. ಕಾವೇರಿ-2.0 ತಂತ್ರಾಂಶದಿಂಧ ಅನುಕೂಲ, ಅನಾನುಕೂಲ ಎರಡೂ ಆಗ್ತಿದೆ ಎಂಬ ಮಾಹಿತಿ ಇದೆ. ಏಪ್ರಿಲ್‌ನಿಂದಲೇ ನೋಂದಣಿ ಪ್ರಕ್ರಿಯೆಯಲ್ಲಿ ಬಳಕೆಯಲ್ಲಿರುವ ಈ ತಂತ್ರಜ್ಞಾನವನ್ನು ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ವಿಸ್ತರಿಸಲಾಗುತ್ತದೆʼʼ ಎಂದು ಹೇಳಿದರು.
ಕಾವೇರಿ -2.0 ತಂತ್ರಾಂಶ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವರದಿಗಳನ್ನು ಗಮನಿಸಿದ್ದೇವೆ. ಇದರ ಬಗ್ಗೆ ನಾವು ಮಾಹಿತಿ ತರಿಸಿಕೊಂಡು ನೋಡಿದಾಗ ದೊಡ್ಡಬಳ್ಳಾಪುರದಲ್ಲಿ ಕಾವೇರಿ-1 ಇದ್ದಾಗ 63 ಡಾಕ್ಯುಮೆಂಟ್ ರಿಜಿಸ್ಟರ್ ಆಗ್ತಿತ್ತು. ಕಾವೇರಿ-2.0 ಬಂದಮೇಲೆ ಅದಕ್ಕಿಂತ ಹೆಚ್ಚು ಡಾಕ್ಯುಮೆಂಟ್ ರಿಜಿಸ್ಟರ್ ಆಗುತ್ತಿದೆ. ಕಾವೇರಿ-2.0ನಿಂದ ಡಾಕ್ಯುಮೆಂಟ್ ರಿಜಿಸ್ಟರ್ ಹೆಚ್ಚಾಗಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಗುಲ್ಬರ್ಗ ಸೇರಿ ಹಲವು ಕಡೆಗಳಲ್ಲಿ ಇದರಿಂದ ಹೆಚ್ಚು ಡಾಕ್ಯುಮೆಂಟ್‌ಗಳು ರಿಜಿಸ್ಟರ್ ಆಗಿರುವುದು ಕಂಡುಬಂದಿದೆ ಎಂದು ವಿವರಣೆ ನೀಡಿದರು.
ರಿಜಿಸ್ಟ್ರೇಷನ್ ಆದಾಯ ಹೆಚ್ಚಳ
ಈ ಬಾರಿ ರಿಜಿಸ್ಟ್ರರೇಷನ್ ಜಾಸ್ತಿ ಆಗಿದ್ದು ನಮ್ಮ ಇಲಾಖೆಗೆ ಒಳ್ಳೆಯ ಆದಾಯ ಸಂಗ್ರಹ ಆಗಿದೆ ಎಂದು ಖುಷಿಯಿಂದ ಹೇಳಿಕೊಂಡರು ಕೃಷ್ಣ ಭೈರೇಗೌಡರು. 2022ರಲ್ಲಿ ಮೇ ತಿಂಗಳಲ್ಲಿ 1220 ಕೋಟಿ ರೂ. ಸಂಗ್ರಹ ಆಗಿತ್ತು. ಈ ವರ್ಷ ಚುನಾವಣೆ ಇದ್ದಗಲೂ 1350 ಕೋಟಿ ರೂ. ಸಂಗ್ರಹ ಆಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ 720 ಕೋಟಿ ರೂ. ಸಂಗ್ರಹ ಆಗಿತ್ತು. 2023ರ ಜೂನ್ ತಿಂಗಳಲ್ಲಿ 800 ಕೋಟಿ ರೂ. ಸಂಗ್ರಹ ಆಗಿದೆ. ಕಾವೇರಿ 2.0 ತಂತ್ರಾಂಶದಿಂದ ಇದು ಸಾಧ್ಯವಾಯಿತು. ಆಡಳಿತ ಸುಧಾರಣೆಗೆ ಕಾವೇರಿ 2.0 ಉಪಯೋಗ ಆಗಿದೆ ಎಂದು ಹೇಳಿದರು.
ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಮಾಡಲಾಗುವುದೇ?
ಮಾರುಕಟ್ಟೆ ವ್ಯಾಲ್ಯೂ ಕಡಿಮೆ ಆಗುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಕಪ್ಪು ಹಣದ ವಹಿವಾಟು ಜಾಸ್ತಿ ಆಗುತ್ತದೆ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ಗೈಡೆನ್ಸ್ ವ್ಯಾಲ್ಯೂ ಮತ್ತು ಮಾರುಕಟ್ಟೆ ವ್ಯಾಲ್ಯೂ ರಾಜ್ಯಾದ್ಯಂತ ಹೇಗಿದೆ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಕೊರೊನಾ ಸಮಯದಲ್ಲಿ ಗೈಡೆನ್ಸ್ ವ್ಯಾಲ್ಯೂ ಕಡಿಮೆ ಆಗಿದ್ದರಿಂದ ಆದಾಯದಲ್ಲಿ ಬಾರಿ ಏರುಪೇರು ಆಗಿಲ್ಲ ಎಂದು ಹೇಳಿದರು. ಆ ಅವಧಿಯಲ್ಲಿ ನೋಂದಣಿ ಜಾಸ್ತಿ ಆಗಿದೆ ಎಂದರು.
ಇದನ್ನೂ ಓದಿ : Free Bus Service : ಭಾನುವಾರ ಎರ‍್ರಾಬಿರ‍್ರಿ ರಷ್; ಆದರೆ, ಇದು ಫ್ರೀ ಓಡಾಟದಲ್ಲಿ ದಾಖಲೆಯೇನಲ್ಲ!