Site icon Vistara News

Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ

DK Shivakumar and HD Kumaraswamy infront of kaveri river

ಬೆಂಗಳೂರು: ಬಹುಮತದ ಸರ್ಕಾರ ಬಂದಿದೆ ಎಂದಾಕ್ಷಣ ರಾಜ್ಯದ ಜನತೆಯನ್ನು, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ (DCM DK Shivakumar) ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಎಂದು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy), ತಮಿಳುನಾಡಿಗೆ ಕಾವೇರಿ ನದಿ (Kaveri River) ನೀರನ್ನು ಹರಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಕ್ಷಣವೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಎಕ್ಸ್‌ (ಟ್ವಿಟರ್‌)ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Operation Hasta : ಎಸ್‌.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? ಖಚಿತಪಡಿಸಿದ ಪರಮೇಶ್ವರ್!

ಅನ್ನದಾತರಿಗೆ ಕಾಂಗ್ರೆಸ್‌ನಿಂದ ವಿಶ್ವಾಸ ದ್ರೋಹ

ಮೇಕೆದಾಟು ಪಾದಯಾತ್ರೆ (Mekedatu Padayatra) ಹೈಡ್ರಾಮಾ ಮಾಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು, ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ ಎಂದು‌ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಮಿಳುನಾಡು ಜತೆ ರಾಜಕೀಯ ಚೌಕಾಬಾರ

ಮಳೆ ಅಭಾವದಿಂದ ಜಲಾಶಯಗಳು (Karnataka Reservoirs) ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ ಇದೆ.. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ‌ ಈ ಸರ್ಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಮಿಳುನಾಡಿಗೆ ಬೆದರಿ ಶರಣಾಗಿದೆ!

2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷದ ಸರ್ಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು?

1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ಎಚ್.ಡಿ.ದೇವೇಗೌಡರು ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತಿ ಸರ್ಕಾರವೂ ಕೇಂದ್ರಕ್ಕೆ ಸಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರ್ಕಾರವು, ನೆರೆರಾಜ್ಯ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈ ಚೆಲ್ಲಿದೆ. ಸಂಕಷ್ಟ ಸ್ಥಿತಿಯ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ‌ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಿಲ್ಲ, ಯಾಕೆ? ಕಾನೂನು ತಜ್ಞರ ಜತೆ, ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ?

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಸರ್ಕಾರದ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಳಿದ್ದಾರೆ.

ದರ್ಪ, ದುರಹಂಕಾರದ ಪರಾಕಾಷ್ಠೆ

ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ? ಎಂದಿದ್ದಾರೆ ಎಚ್.ಡಿ. ಕುಮಾರಸ್ವಾಮಿ.

ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ?

ಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ, ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Operation Hasta : ʼಆಪರೇಷನ್ ಹಸ್ತʼದ ಹಿಟ್‌ ಲಿಸ್ಟ್‌ನಲ್ಲಿ ಇರೋದು ಈ 14 ಜನ!

ಸರ್ವಪಕ್ಷ ಸಭೆ ಕರೆಯಬೇಕು

ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ! ಕಾವೇರಿ ಪಾಲಿಗೆ ಆ ಪಕ್ಷ ನಯವಂಚನೆ, ನಂಬಿಕೆ ದ್ರೋಹದ ಪ್ರತೀಕ. ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ. ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟ ಸೂತ್ರದ ಪಾಲನೆಗೆ ಒತ್ತಡ ಹೇರಬೇಕು ಹಾಗೂ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆಯಬೇಕು (Demands all party meeting) ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

Exit mobile version