ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ತೀವ್ರಗತಿಯಲ್ಲಿ ಕುಸಿತ ಕಂಡಿರುವ ನಡುವೆಯೇ ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು (kaveri water) ಬಿಟ್ಟಿದೆ ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿಬಿದ್ದಿವೆ. ಈ ಸಂಬಂಧ ಬುಧವಾರ (ಆಗಸ್ಟ್ 23) ರಾಜ್ಯ ಸರ್ಕಾರ ಸರ್ವಪಕ್ಷ ಸಭೆ (Karnataka All party meeting) ಕರೆದಿದೆ. ಇದರ ಬೆನ್ನಲ್ಲೇ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ (Agriculture Minister N Cheluvarayaswamy) ನೀಡಿರುವ ಹೇಳಿಕೆ ರೈತರನ್ನು ಆತಂಕಕ್ಕೆ ದೂಡಿದೆ. ಮಳೆ ಹೀಗೆಯೇ ಕಡಿಮೆ ಆದರೆ, ಆಹಾರ ಉತ್ಪಾದನೆಗೆ ಸಮಸ್ಯೆ ಆಗುತ್ತದೆ. ಕಾವೇರಿ ಕಣಿವೆ ಭಾಗದ (Kaveri Valley Region) ರೈತರಿಗೆ ಹೊಸ ಬೆಳೆಯನ್ನು ಬೆಳೆಯದಂತೆ ಮನವಿ ಮಾಡಿದ್ದೇವೆ. ತೀರಾ ಸಮಸ್ಯೆಯಾದರೆ ಕಟ್ಟು ನೀರು ಬಿಡುವುದನ್ನೂ ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ತಿಂಗಳಲ್ಲಿ ಹದಿನೈದು ದಿನಕ್ಕೆ ಕಟ್ಟುನೀರು ಬಿಡುತ್ತಿದ್ದೇವೆ. ಮಳೆ ಸಮಸ್ಯೆಯಾದರೆ ಕಟ್ಟುನೀರು ಬಿಡುವುದನ್ನು ಬಂದ್ ಮಾಡಬೇಕಾಗುತ್ತದೆ. ರೈತರು ಎಚ್ಚರಿಕೆಯಿಂದ ಬೆಳೆ ಬಿತ್ತನೆ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರೈತರಿಗೆ ಮನವಿ ಮಾಡಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Operation Hasta : ಬಂಗಾರಪ್ಪ ಕುಟುಂಬ ಒಂದು ಮಾಡಲು ಡಿಕೆಶಿ ಪ್ಲ್ಯಾನ್! ಕುಮಾರ್ಗೆ ಶಿವಮೊಗ್ಗ ಟಿಕೆಟ್?
ಕಾವೇರಿ ನೀರಿನ ವಿಚಾರವಾಗಿ ರೈತರ ಪ್ರತಿಭಟನೆಗೆ ನನ್ನ ವಿರೋಧ ಇಲ್ಲ. ಅವರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು, ತರುತ್ತಾ ಇದ್ದಾರೆ. ಬಿಜೆಪಿ ಮಾಡಿದ ಪ್ರತಿಭಟನೆ ಬಗ್ಗೆ ಹೇಳಲು ಮಾತ್ರ ನನಗೆ ಪದಗಳೇ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ನಡೆಸುತ್ತಾ ಇರುವಂತಹ ರಾಷ್ಟ್ರೀಯ ಪಕ್ಷಕ್ಕೆ ಕನಿಷ್ಠ ತಿಳಿವಳಿಕೆ ಇಲ್ಲವೇ ಎಂಬುದೂ ಗೊತ್ತಾಗುತ್ತಿಲ್ಲ. ತಮಿಳುನಾಡಿನವರು ನೀರು ಬೇಕೆಂದು ಕೇಳುತ್ತಾ ಇದ್ದಾರೆ. ಅಧಿಕಾರಿಗಳು ಪರಿಸ್ಥಿತಿ ಮನವರಿಕೆ ಮಾಡಿದ ಬಳಿಕ 10 ಸಾವಿರ ಕ್ಯೂಸೆಕ್ ಬಿಡುವ ನಿರ್ಧಾರ ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಬಿಜೆಪಿಯ ರಾಜ್ಯಸಭಾ, ಲೋಕಸಭಾ ಸದಸ್ಯರು ಕೇಂದ್ರದ ಬಳಿ ಅನ್ಯಾಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಚುನಾವಣೆಗಾಗಿ ರಾಜಕಾರಣವನ್ನು ಮಾಡುತ್ತಾ ಇದ್ದಾರೆ. ಆದರೆ, ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದಂತಹ ವೇಳೆ ಇವರು ಯಾಕೆ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ? ಎಂದು ಪ್ರಶ್ನೆ ಮಾಡಿದರು.
ತಮಿಳುನಾಡಿನ ಡಿಎಂಕೆ ಜತೆ ನಾವು ಹೊಂದಾಣಿಕೆ ಮಾಡಿಕೊಂಡಿರಬಹುದು. ಆದರೆ, ನೀರಿನ ವಿಚಾರದಲ್ಲಿ ಹೊಂದಾಣಿಕೆ ಇಲ್ಲ. ಮಳೆ ಇಲ್ಲದೆ ಇರುವುದರಿಂದ ನಮಗೆ ಸಮಸ್ಯೆ ಆಗಿದೆ. ಅವರು ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಬುಧವಾರ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಅಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ರಾಜಕಾರಣ ನೀರಿನ ಮೇಲೆ ಮಾಡಬಾರದು. ಅವರವರ ಆಡಳಿತ ಅವಧಿಯಲ್ಲಿ ಏನಾಗಿತ್ತು ಅಂತ ಅವರಿಗೂ ಗೊತ್ತಿದೆಯಲ್ಲವೇ? ಮಾಹಿತಿಯನ್ನು ಸರಿಯಾಗಿ ಕೊಟ್ಟಿರುವ ಕಾರಣಕ್ಕೆ ಅಥಾರಿಟಿಯವರು ನಮ್ಮ ಪರ ತೀರ್ಮಾನ ಮಾಡಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: HD Kumaraswamy : ಒಮ್ಮೆ ಚಂದ್ರಯಾನ ಮುಗೀಲಿ; ಆಮೇಲೆ ನೈಸ್ನ ಎಲ್ಲ ದಾಖಲೆ ಬಿಚ್ಚಿಡ್ತೀನಿ: ಎಚ್.ಡಿ. ಕುಮಾರಸ್ವಾಮಿ
ರಾಜ್ಯಪಾಲರಿಗೆ ಪತ್ರ ಬರೆದವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯಷ್ಟೇ ನನಗೆ ಗೊತ್ತು. ಇದಕ್ಕೆ ಯಾರು ಕಾರಣ ಅನ್ನೋದು ಗೊತ್ತಿಲ್ಲ. ಅದರಲ್ಲಿ ಜೆಡಿಎಸ್ನವರ ಹೆಸರಿದೆ ಅನ್ನೋದು ಗೊತ್ತಿದೆ. ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರಿಗೆ ಬೆಳಗ್ಗೆ ಎದ್ದು ಏನೂ ಕೆಲಸ ಇಲ್ಲ ಅಂದ್ರೆ ಇದನ್ನೇ ಮಾಡಲಿ. ಅದೇನು ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಚಲುವರಾಯಸ್ವಾಮಿ ಹೇಳಿದರು.