ಹೈದರಾಬಾದ್: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷ ಎ. ರೇವಂತ್ ರೆಡ್ಡಿ (Revanth Reddy) ಗಂಭೀರ ವಿಷಯ ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಸಹಕರಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಹಕರಿಸುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ಕಾಂಗ್ರೆಸ್ ನಾಯಕರೊಬ್ಬರಿಗೆ ಕೆಸಿಆರ್ ಅವರು 500 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ರೇವಂತ್ ರೆಡ್ಡಿ, “ಕರ್ನಾಟಕದಲ್ಲಿ ಕೆಸಿಆರ್ ಅವರು ಪರೋಕ್ಷವಾಗಿ ಬಿಜೆಪಿಗೆ ನೆರವು ನೀಡುತ್ತಿದ್ದಾರೆ. ಕಾಂಗ್ರೆಸ್‌ನ 25 ಟಿಕೆಟ್ ಆಕಾಂಕ್ಷಿಗಳಲ್ಲಿ ಒಡಕು ಮೂಡಿಸುವುದು ಅಥವಾ ಅವರು ಬೇರೆ ಪಕ್ಷದಿಂದ ಸ್ಪರ್ಧಿಸುವಂತೆ ಮಾಡಲು ಕರ್ನಾಟಕ ಕಾಂಗ್ರೆಸ್ ನಾಯಕರೊಬ್ಬರಿಗೆ ಕೆಸಿಆರ್ 500 ಕೋಟಿ ರೂಪಾಯಿ ನೀಡುವ ಆಮಿಷ ಒಡ್ಡಿದ್ದಾರೆ” ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿಯೇ ಹೀಗೆ ಆರೋಪ ಮಾಡಿರುವುದು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ.
ಕುಮಾರಸ್ವಾಮಿಗೆ ಪಿತೂರಿ ಗೊತ್ತು, ಅದಕ್ಕೇ ಸಭೆಯಿಂದ ದೂರ
“ಕರ್ನಾಟಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆ.ಚಂದ್ರಶೇಖರ್ ರಾವ್ ಅವರ ಮೋಸ ಹಾಗೂ ಪಿತೂರಿಯ ರಾಜಕಾರಣ ಗೊತ್ತಾಗಿದೆ. ಹಾಗಾಗಿಯೇ, ಅವರು ಜನವರಿ 18ರಂದು ಖಮ್ಮಂನಲ್ಲಿ ನಡೆದ ಬಿಆರ್‌ಎಸ್ ಸಾರ್ವಜನಿಕ ಸಭೆಯಿಂದ ದೂರ ಉಳಿದರು” ಎಂದು ತಿಳಿಸಿದ್ದಾರೆ. ಆದರೆ, ಕೆಸಿಆರ್ ಬಲೆ ಬೀಸಿರುವ ಕರ್ನಾಟಕದ ಕಾಂಗ್ರೆಸ್ ನಾಯಕರು ಯಾರು ಎಂಬುದರ ಬಗ್ಗೆ ರೇವಂತ್ ರೆಡ್ಡಿ ಮಾಹಿತಿ ನೀಡಿಲ್ಲ.
ಇದನ್ನೂ ಓದಿ | BRS Public Meeting | ಕೆಸಿಆರ್ ನೇತೃತ್ವದಲ್ಲಿ ಸಭೆ, 3 ರಾಜ್ಯಗಳ ಸಿಎಂಗಳು ಭಾಗಿ, ತೃತೀಯ ರಂಗಕ್ಕೆ ಸಭೆ ಮುನ್ನುಡಿ?