Site icon Vistara News

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

kea

kea

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ವರ್ಷದ ಜನವರಿಯಲ್ಲಿ ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET 2023)ಯ ಪರಿಷ್ಕೃತ ಕೀ ಉತ್ತರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಜನವರಿ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ 42 ವಿವಿಧ ವಿಷಯಗಳ ಪರೀಕ್ಷೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದ ಕೀ ಉತ್ತರಗಳನ್ನು ಜನವರಿ 29ರಂದು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 7ರ ತನಕ ಅವಕಾಶ ನೀಡಿತ್ತು. ಬಳಿಕ ಕೆಲವು ಅಭ್ಯರ್ಥಿಗಳು ದಿನಾಂಕವನ್ನು ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ಫೆಬ್ರವರಿ 17ರ ತನಕ ಮುಂದೂಡಲಾಗಿತ್ತು.

ಅದರಂತೆ ಪರೀಕ್ಷಾ ಪ್ರಾಧಿಕಾರಕ್ಕೆ 23 ಪತ್ರಿಕೆಗಳ ಆಯ್ದ ಕೀ ಉತ್ತರಗಳಿಗೆ ಮಾತ್ರ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಬಳಿಕ ವಿಷಯ ತಜ್ಞರು ಒಟ್ಟು 22 ಪತ್ರಿಕೆಗಳ ಕೆಲವು ಉತ್ತರಗಳಿಗೆ ಬದಲಾವಣೆ ಸೂಚಿಸಿದ್ದರು. ಇನ್ನು ಒಂದು ಪತ್ರಿಕೆಯಲ್ಲಿನ ಆಕ್ಷೇಪಣೆಗೆ ಯಾವುದೇ ಬದಲಾವಣೆ ತಂದಿಲ್ಲ. ಅಲ್ಲದೆ ಉಳಿದ 19 ಪತ್ರಿಕೆಗಳಿಗೆ ಯಾವುದೇ ಆಕ್ಷೇಪಣೆ ಕಂಡು ಬರದ ಹಿನ್ನೆಲೆಯಲ್ಲಿ ಕೀ ಉತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ.

”ಆಕ್ಷೇಪಣೆ ವ್ಯಕ್ತವಾದ 23 ಪತ್ರಿಕೆಗಳ ಪ್ರಶ್ನೆಗಳನ್ನು ವಿಷಯ ತಜ್ಞರು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಆ ಪೈಕಿ ಮನಃಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದ 22 ಪತ್ರಿಕೆಗಳ ಪರಿಷ್ಕೃತ ಕೀ ಉತ್ತರಗಳನ್ನು ಈಗ ಪಕ್ರಟಿಸಲಾಗಿದೆ” ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಪರಿಷ್ಕೃತ ಕೀ ಉತ್ತರ ಹೀಗೆ ಪರಿಶೀಲಿಸಿ

ಬೆಂಗಳೂರು ನಗರ ಸೇರಿದಂತೆ ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 1,17,302 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ ವಾಣಿಜ್ಯಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ಚು ಅಂದರೆ 16,000 ಜನ ತೆಗೆದುಕೊಂಡಿದ್ದರು. ಕನ್ನಡ ವಿಷಯವನ್ನು 11 ಸಾವಿರ ಮಂದಿ ಆಯ್ದುಕೊಂಡಿದ್ದರು. ಅತಿ ಕಡಿಮೆ ಅಂದರೆ 25 ಜನ ಭಾಷಾಶಾಸ್ತ್ರದ ವಿಷಯದಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ಶೇ. 6 ಆಕಾಂಕ್ಷಿಗಳಿಗೆ ಅಂತಿಮವಾಗಿ ಕೆಸೆಟ್ ಪರೀಕ್ಷೆಯ ಅರ್ಹತೆ ಸಿಗಲಿದೆ. ಇದರಲ್ಲಿ ರೋಸ್ಟರ್ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: KEA Exam Scam: ಸರ್ಕಾರಿ ನೌಕರಿಗೆ ಸೇರಿ ಒಂದೇ ತಿಂಗಳಲ್ಲಿ ಜೈಲು ಸೇರಿದ ವಾರ್ಡನ್!

Exit mobile version