ತುಮಕೂರು: ಬಾವಿಗೆ ಬಿದ್ದಿದ್ದ ತನ್ನ ಎರಡು ವರ್ಷದ ತಂಗಿಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟಿದ್ದ, ಬಾವಿಗೆ ಜಿಗಿದು ತಂಗಿಯನ್ನು ರಕ್ಷಿಸಿದ್ದ 8 ವರ್ಷದ ಬಾಲಕಿ ಶಾಲೂಗೆ ರಾಜ್ಯ ಸರ್ಕಾರವು (Karnataka Government) ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ (Keladi Chennamma Bravery Award) ಘೋಷಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಾಲೂಗೆ ಅಧಿಕೃತ ಅಹ್ವಾನ ನೀಡಲಾಗಿದ್ದು, ಗುರುವಾರ (ನವೆಂಬರ್ 23) ಬೆಂಗಳೂರಿನಲ್ಲಿ ದಿಟ್ಟ ಬಾಲಕಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ತುಮಕೂರು ತಾಲೂಕು ಕುಚ್ಚಂಗಿಪಾಳ್ಯದಲ್ಲಿ ಕಳೆದ ಜೂನ್‌ನಲ್ಲಿ ಘಟನೆ ನಡೆದಿತ್ತು. ತೋಟದ ಮನೆಯ ಬಳಿ ಇರುವ ಬಾವಿಯಲ್ಲಿ ಎರಡು ವರ್ಷದ ಬಾಲಕಿ ಹಿಮಾಂಶು ಬಿದ್ದಿದ್ದಳು. ಇದನ್ನು ಕಂಡ ಶಾಲೂ ಲೈಫ್ ಜಾಕೆಟ್ ಧರಿಸಿ ಕೂಡಲೇ ಬಾವಿಗೆ ಜಿಗಿದಿದ್ದಳು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಬಾವಿಗೆ ಜಿಗಿದ ಆಕೆ ತನ್ನ ತಂಗಿ ಹಿಮಾಂಶುಳನ್ನು ರಕ್ಷಿಸಿದ್ದಳು. ಇದಾದ ಬಳಿಕ ಶಾಲೂ ರಾಜ್ಯಾದ್ಯಂತ ಸುದ್ದಿಯಾಗಿದ್ದಳು. ಶಾಲೂ ಧೈರ್ಯವನ್ನು ಮೆಚ್ಚಿದ ರಾಜ್ಯ ಸರ್ಕಾರವು ಈಗ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಘೋಷಿಸಿದೆ. ಬೆಂಗಳೂರಿನ ಜವಾಹರ ಬಾಲಭವನದಲ್ಲಿ ನಡೆಯಲಿರುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉತ್ತರ ಪ್ರದೇಶದ ಮೂಲದ ದಂಪತಿಯ ಮಗಳು
ಉತ್ತರ ಪ್ರದೇಶ ಮೂಲದ ಜಿತೇಂದ್ರ ಹಾಗೂ ರಾಜಕುಮಾರಿ ದಂಪತಿಯ ಪುತ್ರಿಯಾಗಿರುವ ಶಾಲೂ ಕುಟುಂಬವು ತುಮಕೂರು ತಾಲೂಕಿನಲ್ಲಿ ನೆಲೆಸಿದೆ. ಜಿತೇಂದ್ರ ಹಾಗೂ ರಾಜಕುಮಾರಿ ದಂಪತಿಯು ಕುಚ್ಚಂಗಿಪಾಳ್ಯದ ಧನಂಜಯ ಎಂಬುವರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಾಲ್ಕು ಮಕ್ಕಳಿದ್ದು, ಶಾಲೂ ಹಿರಿಯ ಪುತ್ರಿಯಾಗಿದ್ದಾಳೆ.
ಇದನ್ನೂ ಓದಿ: ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ. ಸುಮಾ ಶಿವಾನಂದ ದೇಸಾಯಿ ಆಯ್ಕೆ
ಈಜು ಕಲಿಸಿದ್ದ ಮಾಲೀಕ
ಕಳೆದ ಜೂನ್‌ನಲ್ಲಿ ಹಿಮಾಂಶು ಬಾವಿಗೆ ಬೀಳುವ ಮೂರ್ನಾಲ್ಕು ದಿನ ಮೊದಲು ತೋಟದ ಮಾಲೀಕ ಧನಂಜಯ ಅವರೇ ಶಾಲೂಗೆ ಈಜು ಕಲಿಸಿದ್ದರು ಎಂದು ತಿಳಿದುಬಂದಿದೆ. ಧನಂಜಯ ಅವರ ನೆರವಿನಿಂದ ಶಾಲೂ ಮೂರ್ನಾಲ್ಕು ದಿನಗಳಲ್ಲಿಯೇ ಸ್ವಲ್ಪ ಈಜಲು ಕಲಿತಿದ್ದಳು. ತನ್ನ ತಂಗಿಯು ಬಾವಿಗೆ ಬೀಳುತ್ತಲೇ ಯಾರ ನೆರವಿಗೂ ಕಾಯದೆ ಬಾವಿಗೆ ಜಿಗಿಯಲು ಇದೇ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಕೇವಲ ಎಂಟು ವರ್ಷದ ಶಾಲೂ ಬಾವಿಗೆ ಜಿಗಿದು ಆಕೆಯನ್ನು ರಕ್ಷಿಸಿದ್ದು ದೊಡ್ಡ ಸಾಹಸ ಹಾಗೂ ಶ್ಲಾಘನೀಯವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ