Site icon Vistara News

Kempanna Charge : ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ; ಕೆಂಪಣ್ಣ ಗಂಭೀರ ಆರೋಪ

Contractor Kempanna Charges Siddaramaiah Government of corruption

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದೂವರೆ ತಿಂಗಳು‌ ಮಾತ್ರ ಆಗಿದೆ. ಆದರೆ, ಕಾಮಗಾರಿ ಬಿಲ್ ಪೇಮೆಂಟ್​ನಲ್ಲಿ ಈಗಾಗಲೇ ಅವ್ಯವಹಾರ (Corruption in Payment) ನಡೆಯುತ್ತಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗಮನಕ್ಕೆ ತಂದಿದ್ದೇನೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna Charge) ಹೇಳಿದ್ದಾರೆ.

ಮಂಗಳವಾರ ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲೂ (Siddaramaiah Government) ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದರು. ಎಲ್ಲವನ್ನೂ ಡಿ.ಕೆ. ಶಿವಕುಮಾರ್‌ ಅವರಿಗೆ ವಿವರಿಸಿದ್ದೇನೆ. ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಭ್ರಷ್ಟಾಚಾರ ಇಲ್ಲ ಅಂತ ಹೇಳಿದರೆ ನನ್ನಂತ ಮೂರ್ಖ ಇನ್ನೊಬ್ಬರಿಲ್ಲ. ಹಿಂದೆಯೂ ಇತ್ತು, ಈಗಲೂ ಇದೆ. ಅದನ್ನು ತಡೆಗಟ್ಟಬೇಕು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿಲ್ಲ. ಈಗ ಯಾವುದೇ ಪ್ರಮುಖ ಕೆಲಸಗಳು ಆಗಿಲ್ಲ. ಹಾಗಾಗಿ ಆರೋಪ ಮಾಡಲ್ಲ. ಪ್ರಮುಖ ಕಾಮಗಾರಿ ನಡೆದರೆ ಆಗ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಲಿದೆ ಎಂದರು.

ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಕೆಂಪಣ್ಣ ಮತ್ತು ಟೀಮ್

ಅಂಬಿಕಾಪತಿ ಪರ ಬ್ಯಾಟ್‌ ಬೀಸಿದ ಕೆಂಪಣ್ಣ

ಐಟಿ ದಾಳಿಗೆ ಒಳಗಾದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು ಎಂದು ಎಂದು ಕೆಂಪಣ್ಣ ವಾದಿಸಿದರು. ಅಂಬಿಕಾಪತಿ ಏನು ಎನ್ನುವುದು ನನಗೆ ಗೊತ್ತು. ನಾನೂ ಅಂಬಿಕಾಪತಿ 45ವರ್ಷದಿಂದ ಸ್ನೇಹಿತರು. ಅಂಬಿಕಾಪತಿ ಮೇಲಿನ‌ ಆರೋಪ ಸುಳ್ಳು ಎಂದಿದ್ದಾರೆ ಕೆಂಪಣ್ಣ.

ನಾನು ಪ್ರಭಾವ ಬೀರಲು ಸಿದ್ದರಾಮಯ್ಯ ಮನೆಗೆ ಹೋಗಿದ್ದಲ್ಲ

ನಾನು ಸಿಎಂ ಅವರ ಸೂಚನೆ ಮೇರೆಗೆ ಮಾತುಕತೆಗೆ ಹೋಗಿದ್ದೆ ಎಂದು ಸಂಸದ ಡಿ.ವಿ ಸದಾನಂದ ಗೌಡರು ಹೇಳಿದ್ದಾರೆ. ನಾನು ಸಿದ್ದರಾಮಯ್ಯ ಅವತ ಮನೆಯಿಂದ ಅಂಬಿಕಾಪತಿ ಮನೆಗೆ ಹೋಗಿಯೇ ಇಲ್ಲ. ನೇರ ನಮ್ಮ ಮನೆಗೆ ಹೋಗಿದ್ದೇನೆ. ಒಂದು ವೇಳೆ ಅವರು ಮಾಡಿದ ಆರೋಪವನ್ನು ಸಾಬೀತು ಮಾಡಿದರೆ ಅವರ ಕಾಲಡಿ ಇರುತ್ತೇನೆ ಎಂದು ಹೇಳಿದರು ಕೆಂಪಣ್ಣ.

ಅಂಬಿಕಾಪತಿ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಇದೆ, ಸಿಬಿಐ ಇಡಿ ಅವರ ಬಳಿಯೇ ಇದೆ. ತನಿಖೆ‌ ಮಾಡಿಸಲಿ ಎಂದು ಸವಾಲು ಹಾಕಿದರು. ನಮ್ಮ ಬಳಿ ಯಾರೂ ಕಮಿಷನ್‌ ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

40 % ಕಮಿಷನ್‌ ಆರೋಪಕ್ಕೆ ಸಾಕ್ಷ್ಯ ನೀಡುತ್ತೇವೆ ಎಂದ ಕೆಂಪಣ್ಣ

ಬಿಜೆಪಿ ಸರ್ಕಾರದ ವಿರುದ್ಧ ನಾವು ಮಾಡಿದ 40 ಪರ್ಸೆಂಟ್ ಆರೋಪಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ನಾಗಮೋಹನ್ ದಾಸ್ ಸಮಿತಿಗೆ ಕೊಡುತ್ತೇವೆ ಎಂದು ಹೇಳಿದರು ಕೆಂಪಣ್ಣ. ಡಿ.ಕೆ.ಶಿವಕುಮಾರ್‌ ಜತೆಗಿನ ಸಭೆಯಲ್ಲಿ ಬಿಬಿಎಂಪಿಯ ಬಾಕಿ ಬಿಲ್ ವಿಚಾರ ಮಾತ್ರ ಇಂದು ಮಾತನಾಡಿದ್ದೇವೆ. ಕನಿಷ್ಠ 75% ಆದರೂ ಬಿಲ್ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೆಂಪಣ್ಣ ಹೇಳಿದರು. 80 ಪರ್ಸೆಂಟ್​​ಗಿಂತ ಹೆಚ್ಚು ಸೀನಿಯಾರಿಟಿ ಮೇಲೆ ಪೇಮೆಂಟ್ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದರು.

Exit mobile version