Site icon Vistara News

Commission Politics : ಆಗಸ್ಟ್‌ 31ರೊಳಗೆ ಬಾಕಿ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ: ಕೆಂಪಣ್ಣ ಗಡುವು

DK Shivakumar and Kempanna talk about Commission Politics

ಬೆಂಗಳೂರು: ರಾಜ್ಯದಲ್ಲೀಗ ಕಮಿಷನ್‌ ಪಾಲಿಟಿಕ್ಸ್‌ (Commission Politics) ಶುರುವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಕಾಮಗಾರಿಗಳ ಕಮಿಷನ್‌ ವಾರ್‌ (Commission war) ನಡೆಯುತ್ತಿದೆ. ಬಿಬಿಎಂಪಿ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು 15% ಕಮಿಷನ್ ಕೇಳಿದ್ದಾರೆ ಎಂಬ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಅವರ ಬಳಿ ಇದಕ್ಕೆ ದಾಖಲೆ ಇದ್ದರೆ ಕೊಡಲಿ. ಆಗ ನಾನು ಅವರ ಪರವಾಗಿ ನಿಲ್ಲುತ್ತೇನೆ. ಆದರೆ, ಬಿಜೆಪಿ ಸರ್ಕಾರದ (BJP Government) 40% ಕಮಿಷನ್‌ ಬಗ್ಗೆ ನನ್ನ ಬಳಿ ದಾಖಲೆ ಇದೆ. ಈ ದಾಖಲೆಯನ್ನು ಸರ್ಕಾರ ನೇಮಿಸಿರುವ ಒನ್ ಮ್ಯಾನ್ ಕಮಿಟಿಯ ನಿವೃತ್ತ ಜಡ್ಜ್‌ಗೆ ಕೊಡುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Karnataka State Contractors Association President Kempanna) ಹೇಳಿದರು. ಈ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ಪರವಾಗಿ ಮಾತನಾಡಿದ್ದಾರೆ. ಆದರೆ, ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿದ್ದು, ಅಷ್ಟೊರಳಗೆ ಬಾಕಿ ಹಣ ಬಿಡುಗಡೆ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, ನಮಗೆ ಗ್ಯಾರಂಟಿ ಪೀರಿಯಡ್ ಇರೋದು ಒಂದು ವರ್ಷ. ಮೂರು ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ. ನಾವು ಕಾಂಗ್ರೆಸ್ ಸರ್ಕಾರ ಹಾಕಿರುವ ಕಂಡೀಷನ್ ಅನ್ನು ವಿರೋಧ ಮಾಡುತ್ತೇವೆ. ಹಣ ಬಿಡುಗಡೆ ಮಾಡುವಾಗ ತನಿಖೆ ಮಾಡುತ್ತಿದ್ದಾರೆ. ಚೀಫ್ ಕಮಿಷನರ್ ಮಾಡುವ ನೀತಿಗೆ ನಮ್ಮ ವಿರೋಧ ಇದೆ. ಗುತ್ತಿಗೆದಾರರು ಸರಿಯಾಗಿದ್ದು, ನಮ್ಮ ಬಳಿ ಬಂದು ಮನವಿ ಮಾಡಿಕೊಂಡರೆ ಅವರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಬಿಡುಗಡೆ ಮಾಡಿ

ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಬಿಡುಗಡೆ ಆಗಬೇಕು. ಕಳೆದ 7 ತಿಂಗಳಿಂದ ಗುತ್ತಿಗೆದಾರರ ಬಾಕಿ ಇದೆ. ಚುನಾವಣೆ, ನೀತಿ ಸಂಹಿತೆ ಕಾರಣದಿಂದ ಬಾಕಿ ಮೊತ್ತ ಬಿಡುಗಡೆಯಾಗಿಲ್ಲ. ಚುನಾವಣೆ ಮುಗಿದು ಆಗಸ್ಟ್ 20ಕ್ಕೆ ಹೊಸ ಸರ್ಕಾರಕ್ಕೆ ಮೂರು ತಿಂಗಳಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರನ್ನು ಮೂರು ತಿಂಗಳಲ್ಲಿ ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿದ್ದೇವೆ. ಮುಂದಿನ ವಾರ ಅಂತ ಎಲ್ಲರೂ ಸಬೂಬು ಹೇಳುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಸರ್ಕಾರದಿಂದ ಈಗಾಗಲೇ ಜೂನ್ 28 ಹಾಗೂ ಜುಲೈ 30 ರಂದು ಬಾಕಿ ಮೊತ್ತ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಆದರೂ ಈವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಜಿಲ್ಲಾ ಸಂಘಗಳಿಂದಲೂ ಈಗಾಗಲೇ ಸಚಿವರಿಗೆ ಮನವಿ ಮಾಡಲಾಗಿದೆ. ಹಾಗಾಗಿ ಆಗಸ್ಟ್‌‌ 31ರೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದೇವೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬಿಬಿಎಂಪಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಸಾಲ ಮಾಡಿ ಕೋಟಿ ಕೋಟಿ ಕಾಮಗಾರಿ ಮಾಡಿದ್ದೇವೆ. ಮನೆ, ಚಿನ್ನ, ನಿವೇಶನ ಪತ್ರ ಅಡವಿಟ್ಟು ಕಾಮಗಾರಿ ಮಾಡಲಾಗಿದೆ. ಕೆಲ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಅಂತಲೇ ಹಣ ಮೀಸಲಿಡಲಾಗಿದೆ. ಸರ್ಕಾರ ಬಿಬಿಎಂಪಿಗೆ 657 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ, ಬಿಬಿಎಂಪಿ ಆಯುಕ್ತರು ಸರ್ಕಾರದಿಂದ ಆದೇಶ ಬಂದಿಲ್ಲ ಅಂತ ಸಬೂಬು ಹೇಳುತ್ತಿದ್ದಾರೆ. ಆಗಸ್ಟ್ 31ರೊಳಗೆ ಬಾಕಿ ಹಣ ಬಿಡುಗಡೆ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಲಿದೆ ಎಂದು ಕೆಂಪಣ್ಣ ಎಚ್ಚರಿಕೆ ನೀಡಿದರು.

ಹೊಸ ಸರ್ಕಾರದಲ್ಲಿ ಕಮಿಷನ್ ಬಗ್ಗೆ ಗೊತ್ತಿಲ್ಲ: ಕೆಂಪಣ್ಣ

ಹೊಸ ಸರ್ಕಾರದಲ್ಲಿ ಕಮಿಷನ್ ಬಗ್ಗೆ ಗೊತ್ತಿಲ್ಲ. ಇದುವರೆಗೂ ಯಾವುದೇ ಕಾಮಗಾರಿ ಆಗಿಲ್ಲ. ಮೂರು ತಿಂಗಳಲ್ಲಿ ಯಾವ ಕಾಮಗಾರಿಯನ್ನೂ ಕರೆದಿಲ್ಲ. ಬಿಬಿಎಂಪಿ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅವರು ಇಲ್ಲೇ ಇದ್ದಾರೆ. ಕಾರ್ಯನಿರತ ಗುತ್ತಿಗೆದಾರರು ಅಂತ ಹೆಸರಲ್ಲಿ ನಡೆಸುತ್ತಿದ್ದಾರೆ. ಆಗ ಕೆಲವೇ ಅಸೋಸಿಯೇಷನ್ ಇತ್ತು. ಈಗ ಅನೇಕ ಅಸೋಸಿಯೇಷನ್ ಇದೆ. ಅವರ ಆರೋಪದ ಬಗ್ಗೆಯೂ ನಮಗೆ ಗೊತ್ತಿಲ್ಲ ಎಂದು ಕೆಂಪಣ್ಣ ಹೇಳಿದರು.

15% ಆರೋಪ ಮಾಡಿದ್ದು ಸುಳ್ಳು: ಕೆಂಪಣ್ಣ

ಅಜ್ಜಯ್ಯನ ಮೇಲೆ ಆರೋಪ ಮಾಡಿದ್ದ ಕಂಟ್ರಾಕ್ಟರ್ ಹೇಮಂತ್ ಅವರು, ತಾವು ಟೆನ್ಷನ್‌ನಲ್ಲಿ ಆಣೆ ಮಾಡಿ ಅಂತ ಹೇಳಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ. 15% ಆರೋಪ ಮಾಡಿದ್ದು ಸುಳ್ಳು ಅಂತ ಹೇಳಿದ್ದಾರೆ. ಗುತ್ತಿಗೆದಾರ ಹಾಗೆ ಹೇಳಿದ್ದು ಸುಳ್ಳು ಎಂದು ಕೆಂಪಣ್ಣ ಸ್ಪಷ್ಟನೆ ನೀಡಿದರು.

ನಕಲಿ ಬಿಲ್ ಮಾಡಿರೋದು ನನಗೆ ಗೊತ್ತಿಲ್ಲ. ಡಬಲ್ ಬಿಲ್, ತ್ರಿಬಲ್ ಬಿಲ್ ಬಗ್ಗೆ ಗೊತ್ತಿಲ್ಲ. ಸರ್ಕಾರದ ಬಳಿ ದಾಖಲೆ ಇದ್ದರೆ ತನಿಖೆ ಮಾಡಲಿ. ನಾವು ಯಾವುದೇ ದಾಖಲೆ ಕೊಟ್ಟಿಲ್ಲ ಎಂದು ಕೆಂಪಣ್ಣ ಹೇಳಿದರು.

ಗುತ್ತಿಗೆದಾರರಿಗೆ ಈಗಾಗಲೇ ಏಳು ತಿಂಗಳಿಂದ ಬಾಕಿ ಬರಬೇಕು. ಕೆಲವಷ್ಟು ಹಣ ಬಿಡುಗಡೆ ಆಗಿದೆ. ನೂರು ಕೋಟಿ ಸಾಲಲ್ಲ. ಸಿಎಂ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ದಾರೆ. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದ್ರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ ಎಂದು ಕೆಂಪಣ್ಣ ತಿಳಿಸಿದರು.

ಎಲ್ಲ ಕೆಲಸ ನಿಲ್ಲಿಸಿದ್ದೇವೆ: ಕೆಂಪಣ್ಣ

ಬಿಬಿಎಂಪಿಯಲ್ಲಿ ಗುತ್ತಿಗೆದಾರರು ಎಲ್ಲ ಕೆಲಸ ನಿಲ್ಲಿಸಿದ್ದೇವೆ. ನಾವು ಮತ್ತೆ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಹಣ ಬಿಡುಗಡೆ ಮಾಡಿ, ಇಲ್ಲದಿದ್ರೆ ಕಾಮಗಾರಿ ಮಾಡಲ್ಲ ಅಂತ ಮನವಿ ಮಾಡಲಿದ್ದೇವೆ‌. ಇನ್ನೊಂದು ವಾರದಲ್ಲಿ ಇಬ್ಬರನ್ನೂ ಭೇಟಿಯಾಗಲಿದ್ದೇವೆ ಎಂದು ಕೆಂಪಣ್ಣ ಹೇಳಿದರು.

ಸರ್ಕಾರಕ್ಕೆ ಕೆಂಪಣ್ಣ ಪತ್ರ

ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಚಿವರಿಗೆ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?

“ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಕಾಮಗಾರಿಗಳನ್ನು ಮುಗಿಸಲಾಗಿದೆ. ಮುಗಿಸಿ ನಾಲ್ಕೈದು ತಿಂಗಳು ಕಳೆದರೂ ಇದುವರೆಗೂ ಹಣ ಬಿಡುಗಡೆ ಮಾಡಿರುವುದಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಪರಿವೀಕ್ಷಣೆಗೆ ಸಿವಿಲ್‌ ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ಸಹಾಯಕರನ್ನು ನೇಮಿಸಲಾಗಿದೆ. ಅವರ ಬಳಿ IRC MORTH Specification ಪ್ರಕಾರ ಯಂತ್ರೋಪಕರಣಗಳು ಇರುವುದಿಲ್ಲ. ಆದ ಕಾರಣ ಇವರನ್ನು ಗುಣ ಪರೀಕ್ಷೆಗೆ ನಿಯೋಜನೆ ಮಾಡಬಾರದು ಎನ್ನುವುದು ಗುತ್ತಿಗೆದಾರರ ಅಭಿಪ್ರಾಯವಾಗಿರುತ್ತದೆ.

ಇದನ್ನೂ ಓದಿ: Karnataka Politics : ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್‌; ಇದು ಬಿಜೆಪಿ ಟಕ್ಕರ್!

ನಗರಾಭಿವೃದ್ಧಿ ಇಲಾಖೆ ಕಾರ್ಯಗತಗೊಳಿಸುವ ಅಮೃತ್ -2 ಅಲ್ಲದೆ ಪ್ಯಾಕೇಜ್ ಟೆಂಡ‌ರ್ ಕರೆಯುವುದನ್ನು ಕೈ ಬಿಡಬೇಕು. ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು. ಅಂತಿಮ ಬಿಲ್ ಪಾವತಿಸುವಾಗ ಶೇಕಡಾ 20ರಷ್ಟು ಮೊತ್ತವನ್ನು ತಡೆಹಿಡಿಯಲಾಗಿದೆ. ಈ ಮೊದಲು ಟೆಂಡರ್ ಅನುಮೋದನೆ ಪಡೆಯುವಾಗ ಶೇಕಡಾ 5ರಷ್ಟು ಠೇವಣಿ ಸಲ್ಲಿಸಲಾಗಿರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ತಾವು ಕೂಡಲೇ ಬಾಕಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಪಿಎಂಜಿಎಸ್‌ವೈ ಅಡಿಯಲ್ಲಿ ಕೈಗೊಂಡು ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಮೊತ್ತವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು” ಎಂದು ಪತ್ರದಲ್ಲಿ ಕೆಂಪಣ್ಣ ಮನವಿ ಮಾಡಿದ್ದಾರೆ.

Exit mobile version