Site icon Vistara News

Kempe Gowda Jayanti 2023 : ನಾಡು ಕಟ್ಟಿದ ಕಲಿ ಕೆಂಪೇಗೌಡ

Kempe Gowda King of Bengaluru

#image_title

ಅಲಕಾ ಕೆ
ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ (Kempe Gowda Jayanti 2023) ಇಂದು. ಕೆಂಪೇಗೌಡರ ಬಗ್ಗೆ ನಾವ್ಯಾರೂ ಅರಿಯದವರಲ್ಲ. ಆಧುನಿಕ ಬೆಂಗಳೂರಿನ ನಿರ್ಮಾತೃ, ಕೆರೆಗಳನ್ನು ನಿರ್ಮಿಸಿದವರು, ಮರಗಳನ್ನು ಬೆಳೆಸಿದವರು, ಕೋಟೆ-ಕೊತ್ತಲಗಳು ಮತ್ತು ದೇವಾಲಯಗಳನ್ನು ಕಟ್ಟಿಸಿದವರು- ಇತ್ಯಾದಿ ನಮಗೆ ತಿಳಿದಿದೆ.

ಆದರೆ ಇವುಗಳನ್ನೆಲ್ಲಾ ಆ ಕಾಲದ ಬಹಳಷ್ಟು ರಾಜರು, ರಾಜವಂಶಗಳು ಮಾಡಿರುವುದೇ ಅಲ್ಲವೇ? ಹಾಗಿದ್ದ ಮೇಲೆ ಕೆಂಪೇಗೌಡರೇ ಏಕೆ ನಾಡಪ್ರಭು ಎಂದು ಕರೆಸಿಕೊಳ್ಳಬೇಕು? ಹಲವು ಶತಮಾನಗಳ ಹಿಂದೆ ಬೆಂಗಳೂರು ಕಟ್ಟಿ ಕಾಲವಾದವರನ್ನು ಇಂದಿನ ಕಾಲದವರು ಏಕಾಗಿ ನೆನಪಿಸಿಕೊಳ್ಳಬೇಕು? ಇಂದಿಗೂ ಅವರೇಕೆ ಪ್ರಸ್ತುತ? – ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಿದು.

ನಾಗರಿಕತೆಯ ಹೆಸರಿನಲ್ಲಿ ಊರುಗಳನ್ನು, ನಗರಗಳನ್ನು ನಿರ್ಮಿಸಿಕೊಳ್ಳುವುದು ಇಂದು-ನಿನ್ನೆಯದಲ್ಲ. ಕ್ರಿಸ್ತಪೂರ್ವದ ಕಾಲದಲ್ಲೂ ವ್ಯವಸ್ಥಿತವಾದ ನಗರಗಳಿದ್ದವು ಎಂಬುದು ಹಲವಾರು ಉತ್ಖನನಗಳಲ್ಲಿ ಸ್ಪಷ್ಟವಾಗಿದೆ. ಹಾಗಿದ್ದೂ ನವ ಬೆಂಗಳೂರಿಗೆ ಭಾಷ್ಯ ಬರೆದವರೆಂದು ಕೆಂಪೇಗೌಡರನ್ನು ನಾವು ನೆನಪಿಸಿಕೊಳ್ಳಬೇಕಾಗಿರುವುದು ಬೆಂಗಳೂರು ಕಟ್ಟಿಸಿದ್ದಕ್ಕೆ ಮಾತ್ರವಲ್ಲ; ಅವರ ಅತ್ಯಪೂರ್ವ ದೂರದರ್ಶಿತ್ವಕ್ಕೆ, ಪ್ರಬುದ್ಧ ಮುತ್ಸದ್ದಿತನಕ್ಕೆ, ಆರ್ಥಿಕ ಅಭಿವೃದ್ಧಿಗೆ, ಪರಿಸರದ ಬಗೆಗಿನ ಕಾಳಜಿಗೆ, ಯೋಜನಾಬದ್ಧ ಧಾರ್ಮಿಕ ಚಟುವಟಿಕೆಗಳಿಗೆ, ಕಲೆ- ವಾಸ್ತುಶಿಲ್ಪಕ್ಕೆ ನೀಡಿದ ಪ್ರೋತ್ಸಾಹಕ್ಕೆ, ಸುಸ್ಥಿರ ಆಡಳಿತ ಮತ್ತು ಪ್ರಜಾ ವಾತ್ಸಲ್ಯಕ್ಕೆ.

ಹೀಗಿತ್ತು ಕೆಂಪೇಗೌಡರ ಬಾಲ್ಯದ ಜೀವನ

ಯಲಹಂಕದ ನಾಡಪ್ರಭು ಕೆಂಪನಂಜೇಗೌಡ ಮತ್ತು ಲಿಂಗಮಾಂಬೆ ಅವರ ಮಗನಾಗಿ 1510ರಲ್ಲಿ ಜನಿಸಿದವರು ಮೊದಲನೇ ಕೆಂಪೇಗೌಡರು. (ಮಾಗಡಿಯಲ್ಲಿ ಇದೇ ವಂಶದ ಇನ್ನೂ ಒಬ್ಬ ಕೆಂಪೇಗೌಡರು ಆಳಿದ್ದರಿಂದ ಇವರು ಮೊದಲನೇ ಕೆಂಪೇಗೌಡರು) ಆವತಿ ವಂಶದ ಕುಲದೇವಿ ಕೆಂಪಮ್ಮನ ಮತ್ತು ಭೈರವನ ಅನುಗ್ರಹದಿಂದ ಜನಿಸಿದ ಮಗುವನ್ನು ಕೆಂಪಯ್ಯ, ಕೆಂಪಣ್ಣ ಎಂದು ಕರೆಯಲಾಯಿತು. ಅದೇ ಮುಂದುವರೆದು ಕೆಂಪರಾಯ, ಕೆಂಪೇಗೌಡ ಎಂದಾಯಿತು.

ಮೊದಲಿನಿಂದಲೂ ವಿಜಯನಗರದ ಸಾಮಂತರಾಗಿದ್ದ ಯಲಹಂಕದ ಈ ಪಾಳೇಗಾರರು, ಕೃಷ್ಣದೇವರಾಯರ ಆಡಳಿತ ಮತ್ತು ಶಿಸ್ತಿನಿಂದ ಅತೀವ ಪ್ರಭಾವಗೊಂಡಿದ್ದರು. ತಂದೆಯೊಂದಿಗೆ ವಿಜಯನಗರದ ರಾಜಧಾನಿಗೆ ಭೇಟಿ ನೀಡಿದ್ದ ಬಾಲಕ ಕೆಂಪಣ್ಣನ ಮನದಲ್ಲಿ ಹಂಪಿಯ ಅಚ್ಚುಕಟ್ಟುತನ ಅಚ್ಚೊತ್ತಿತ್ತು. ಐಗಂಡಪುರದ ಮಾಧವ ಭಟ್ಟರಲ್ಲಿ ಬಾಲಕನ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸಗಳೆಲ್ಲ ನಡೆದವು. ಗುರುಕುಲದಲ್ಲಿ ಅಭ್ಯಾಸ ಪೂರ್ಣಗೊಂಡ ಮೇಲೆ, ಅವರ ಸೋದರಮಾವನ ಮಗಳಾದ ಚೆನ್ನಾಂಬೆಯೊಂದಿಗೆ ವಿವಾಹವಾಯಿತು.

ಇದೇ ಸಮಯದಲ್ಲಿ ಯುವರಾಜ ನಾಗಿಯೂ ಅಭಿಷೇಚನಗೊಂಡರು. ನಾಡಿನ ಆಡಳಿತದಲ್ಲಿ ತಂದೆಯೊಂದಿಗೆ ತೊಡಗಿಸಿಕೊಳ್ಳುವ ಕೆಂಪೇಗೌಡರಿಗೆ ರಾಜ್ಯಾಡಳಿತದ ಪಟ್ಟುಗಳು ಕರಗತವಾಯಿತು. ಈ ಹೊತ್ತಿನಲ್ಲಿ ಮುಪ್ಪಿನಲ್ಲಿದ್ದ ಕೆಂಪನಂಜೇಗೌಡರು, ಮಗನಿಗೆ ನಾಡಪ್ರಭುವಿನ ಪಟ್ಟ ಕಟ್ಟುತ್ತಾರೆ- ಎನ್ನುವಲ್ಲಿಗೆ, ʻನಾಡಪ್ರಭುʼ ಎಂಬ ಪಟ್ಟ ಕೆಂಪೇಗೌಡರಿಗೆ ವಂಶಪಾರಂಪರ್ಯವಾಗಿ ಬಂದಿದ್ದು! ಆದರೆ ಅಷ್ಟೇ ಅಲ್ಲ.

ಸಮಾಜ ಸುಧಾರಕ ನಾಡಪ್ರಭು

ಮೊದಲನೇ ಕೆಂಪೇಗೌಡರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಜಯನಗರದಲ್ಲಿ ಕೃಷ್ಣದೇವರಾಯರು ತೀರಿಕೊಂಡಿದ್ದರು. ಆ ರಾಜ್ಯಕ್ಕೆ ಸಾಮಂತರಾಗಿದ್ದ ಅನೇಕರು ತಮ್ಮನ್ನು ಸ್ವತಂತ್ರ ಎಂದು ಘೋಷಿಸಿಕೊಂಡಿದ್ದರು. ಗಡಿಯಲ್ಲಿ ಬಹಮನಿ ಸುಲ್ತಾನರಿಂದ ಕಿರುಕುಳ ಹೆಚ್ಚಿತ್ತು. ತಮ್ಮನ್ನು ಸ್ವತಂತ್ರ ಎಂದು ಘೋಷಿಸಿಕೊಳ್ಳಲು ಮನಸ್ಸು ಮಾಡದ ಕೆಂಪೇಗೌಡರು, ಸೋದರರಾದ ಸೋಮೇಗೌಡ ಮತ್ತು ಬಸವೇಗೌಡರೊಂದಿಗೆ ಸೇರಿ ವಿಜಯನಗರದ ಪರವಾಗಿ ಯುದ್ಧ ಮಾಡುತ್ತಾರೆ; ರಾಜ್ಯ ಅಖಂಡವಾಗಿರುವುದಕ್ಕೆ ಶ್ರಮಿಸುತ್ತಾರೆ. ಸಣ್ಣ ಪಾಳಯಪಟ್ಟೊಂದು ಸುರಕ್ಷಿತವಾಗಿರುವುದಕ್ಕೆ ಎದುರಾಗುವ ತೊಡಕುಗಳು ಹಲವಾರು. ಪದೇ ಪದೆ ಯುದ್ಧ ಎದುರಾದರೆ ಜೀವಹಾನಿ, ಧನಹಾನಿ, ಮಾನಹಾನಿಗಳೇ ಬದುಕಾಗುತ್ತವೆ. ಅಭಿವೃದ್ಧಿ ಕನ್ನಡಿ ಗಂಟಾಗುತ್ತದೆ.

ಬದಲಿಗೆ ದೊಡ್ಡದೊಂದು ಸಾಮ್ರಾಜ್ಯದ ಛತ್ರಛಾಯೆಯಲ್ಲಿ ಸುರಕ್ಷಿತವಾಗಿ ಬದುಕುವುದಕ್ಕೆ ಹಲವು ದಾರಿಗಳು ದೊರೆಯಬಹುದು. ಹಾಗಾಗಿ ತಮ್ಮ ಪ್ರಜೆಗಳ ಹಿತದೃಷ್ಟಿಯಿಂದ ವಿಜಯನಗರ ಇರುವವರೆಗೂ ಅದರ ಸಾಮಂತರಾಗಿಯೇ ಕೆಂಪೇಗೌಡರು ಉಳಿಯುತ್ತಾರೆ. ಶೌರ್ಯಕ್ಕೆ ಹೆಸರಾದ ಆವತಿ ವಂಶದಲ್ಲಿ ಹುಟ್ಟಿಯೂ, ತಮ್ಮ ನಾಡನ್ನು ಯುದ್ಧಕ್ಕೆ ದೂಡದೆ, ಶಾಂತಿ-ಅಭಿವೃದ್ಧಿಯನ್ನು ಸಾಧಿಸಿದ ಕಾರಣಕ್ಕಾಗಿಯೇ ಇರಬಹುದು- ಕೆಂಪೇಗೌಡರ ಆಳ್ವಿಕೆಯ ದಿನಗಳಿಗೆ ಸೇರಿದ ಮಹಾಸತಿ ಕಲ್ಲು ಮತ್ತು ವೀರಗಲ್ಲುಗಳು ಬೆಂಗಳೂರಿನ ಪ್ರದೇಶದಲ್ಲಿ ದೊರಕಿಲ್ಲ ಎನ್ನಲಾಗುತ್ತದೆ. ಇದಿಷ್ಟೇ ಅಲ್ಲ, ತಮ್ಮ ಕುಲದಲ್ಲಿ ಚಾಲ್ತಿಯಲ್ಲಿದ್ದ ವಿವಾಹ ವಯಸ್ಕ ಹೆಣ್ಣು ಮಕ್ಕಳ ಬೆರಳುಗಳನ್ನು ಕತ್ತರಿಸುವ ಕ್ರೂರ ಸಂಪ್ರದಾಯವೊಂದಕ್ಕೆ ಕೆಂಪೇಗೌಡರು ಅಂತ್ಯ ಹಾಡಿದ ಉಲ್ಲೇಖವಿದೆ. ಹಾಗಾಗಿ ಸಮಾಜ ಸುಧಾರಣೆಯೂ ಅವರ ಆಚರಣೆಯಲ್ಲಿತ್ತು.

ಕೃಷ್ಣದೇವರಾಯರ ಕಾಲದ ಸಮೃದ್ಧಿಯನ್ನು ಬಾಲ್ಯದಲ್ಲೇ ಕಂಡಿದ್ದ ಕೆಂಪೇಗೌಡರಿಗೆ ತಮ್ಮಲ್ಲೂ ಅಂತಹದ್ದೇ ರಾಜಧಾನಿ ನಿರ್ಮಿಸಬೇಕು ಎಂಬ ಕನಸಿತ್ತು. ನಗರ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನರಸುತ್ತಾ, ಯಲಹಂಕದಿಂದ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾಗ ಅವರಿಗೊಂದು ವಿಚಿತ್ರ ಕಾಣಿಸಿತು. ಪುಟ್ಟ ಮೊಲವೊಂದು ಬೇಟೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಪುಟ್ಟ ಮೊಲಕ್ಕೇ ಇಷ್ಟು ಧೈರ್ಯವಿರಬೇಕಾದರೆ ಇದೊಂದು ವೀರಭೂಮಿಯೇ ಇರಬೇಕು ಎಂದುಕೊಂಡ ಕೆಂಪೇಗೌಡರು, ಹಸಿರು ಕಾನನದಿಂದ ಕೂಡಿದ ಅದೇ ಸ್ಥಳದಲ್ಲಿ ರಾಜಧಾನಿ ಕಟ್ಟಲು ಯೋಚಿಸಿದರು. ಆ ಪ್ರದೇಶದ ಮುಖ್ಯ ನದಿಯಾಗಿದ್ದ ಅರ್ಕಾವತಿಗೆ ಸುತ್ತಲಿನ ಹಲವಾರು ತೊರೆಗಳು ಬಂದು ಸೇರುತ್ತಿದ್ದುದರಿಂದ ನೀರಾವರಿಗೂ ಈ ಭೂಮಿ ಯೋಗ್ಯ ಎಂಬುದು ಅವರ ಅನಿಸಿಕೆಯಾಗಿತ್ತು.

ಇದಕ್ಕೀಗ ಅಪಾರ ಪ್ರಮಾಣದಲ್ಲಿ ಜನ-ಧನ ಒದಗಿಬರಬೇಕಿತ್ತು. 1532ರಲ್ಲಿ ಯಲಹಂಕ, ವರ್ತೂರು, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು ಮುಂತಾದ ಹಲವು ಹೋಬಳಿಗಳನ್ನು ವಿಜಯನಗರ ಸಾಮ್ರಾಜ್ಯವು ಕೆಂಪೇಗೌಡರ ಪಾಳೆಯಗಾರಿಕೆಗೆ ಬಿಟ್ಟುಕೊಟ್ಟಿತ್ತು. ಆದರೆ ಅಲ್ಲಿ ಸಂಗ್ರಹವಾಗುವ ಕಂದಾಯದಲ್ಲಿ ಒಂದಂಶವನ್ನು ಇರಿಸಿಕೊಂಡು ಉಳಿದಿದ್ದನ್ನು ಸಾಮ್ರಾಜ್ಯಕ್ಕೆ ಒಪ್ಪಿಸಬೇಕಿತ್ತು. ಹಾಗಾಗಿ, ಅರಸರ ಸನ್ನಿಧಾನಕ್ಕೆ ಧನಸಹಾಯ ಕೋರಿ ಅರಿಕೆಯನ್ನು ಕಳುಹಿಸುವ ಕೆಂಪೇಗೌಡರು, ಪ್ರಜೆಗಳಿಂದಲೂ ನೆರವು ಕೋರುತ್ತಾರೆ. ಈ ಎಲ್ಲಾ ಕಡೆಗಳಲ್ಲಿ ಪೂರಕವಾಗಿಯೇ ಅವರಿಗೆ ಪ್ರತಿಕ್ರಿಯೆ ದೊರೆಯುತ್ತದೆ. ನಗರ ನಿರ್ಮಾಣಕ್ಕಾಗಿ ಎಷ್ಟೆಷ್ಟು ಪೇಟೆ-ಕೋಟೆಗಳು, ಎಲ್ಲೆಲ್ಲಿ ಕೆರೆ-ಉದ್ಯಾನಗಳು, ಗುಡಿ-ಗುಂಡಾರಗಳು ಎಲ್ಲವನ್ನೂ ಒಳಗೊಂಡ ವಿಸ್ತೃತವಾದ ನೀಲನಕ್ಷೆ ಸಿದ್ಧಗೊಳ್ಳುತ್ತದೆ.

ಉದ್ಯಾನ ನಗರ ನಿರ್ಮಾಣ

ಆರ್ಥಿಕ, ಕೃಷಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಯಾವುದೇ ನಾಡಿನ ಆಧಾರ ಸ್ತಂಭಗಳು ಎಂಬುದನ್ನು ಅರಿತಿದ್ದ ಕೆಂಪೇಗೌಡರು, ಅದಕ್ಕೆ ತಕ್ಕಂತೆಯೇ ರಾಜಧಾನಿಯನ್ನು ಕಟ್ಟಲು ಯೋಜಿಸಿದ್ದರು. ರಾಜಧಾನಿಗೆ ನವದ್ವಾರಗಳು ಬೇಕು ಎಂಬ ಉದ್ದೇಶದಿಂದ ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಸೊಂಡೆಕೊಪ್ಪ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೇಕಲ್‌ನಲ್ಲಿ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ, ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ ಮತ್ತು ಕನಕಪುರಗಳಲ್ಲಿ ಐದು ಕಿರುದ್ವಾರಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರು ಕೋಟೆ, ಮಾಗಡಿ ಕೋಟೆ, ಸಾವನದುರ್ಗ ಕೋಟೆ, ಹುತ್ರಿ ದುರ್ಗ, ಹುಲಿಯೂರು ದುರ್ಗದ ಕೋಟೆ ಸೇರಿದಂತೆ, ನಾಡಿನ ಆಯಕಟ್ಟಿನ ಸ್ಥಳಗಳಲ್ಲಿ ಏಳು ಕೋಟೆಗಳನ್ನು ನಿರ್ಮಿಸಲಾಗಿತ್ತು. ಊರಿನ ನಾಲ್ಕೂ ದಿಕ್ಕುಗಳಲ್ಲಿ ಕಾವಲು ಗೋಪುರಗಳನ್ನು ನಿಲ್ಲಿಸಲಾಗಿತ್ತು.

ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ಎಂದಿಗೂ ತೊಂದರೆಯಾಗದಂತೆ ನಾಡಿನೆಲ್ಲೆಡೆ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದರು. ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಗಿಡ್ಡಪ್ಪನ ಕೆರೆ, ಸಂಪಂಗಿರಾಮ ಕೆರೆ, ಚೆನ್ನಮ್ಮನ ಕೆರೆ, ಯಡಿಯೂರು ಕೆರೆ, ಕಾರಂಜಿ ಕೆರೆ, ಹಲಸೂರು ಕೆರೆ, ಕೆಂಪಾಪುರ ಕೆರೆ… ಒಂದೇ ಎರಡೇ? ನಗರ ಎಷ್ಟೇ ಬೆಳೆದರೂ ಜನಬಳಕೆಯ ನೀರಿಗೆ ಕೊರತೆಯಾಗಕೂಡದು ಎಂಬುದು ಅವರ ಯೋಜನೆಯಲ್ಲಿ ಸ್ಪಷ್ಟವಾಗಿತ್ತು. ಅಂದಿನ ಕಾಲಕ್ಕೆ ತಕ್ಕಂತೆ ಎಲ್ಲಾ ದೇವಾಲಯಗಳ ಬಳಿಯಲ್ಲಿಯೂ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು.

ನಗರಗಳಲ್ಲಿ ಈಗಿರುವಂಥ ವಿಸ್ತರಣೆಗಳು, ಬಡಾವಣೆಗಳು ಬೇರೆಯದೇ ರೀತಿಯಲ್ಲಿ ಅಂದಿನ ಕಾಲದಲ್ಲೂ ಇದ್ದವು ಎಂದರೆ ತಪ್ಪಾಗಲಾರದು. ವಾಣಿಜ್ಯ ಚಟುವಟಿಕೆಗಳು ಸಾಂಗವಾಗಿ ನೆರವೇರುವ ದೃಷ್ಟಿಯಿಂದ ವೃತ್ತಿಯಾಧರಿತ ಪೇಟೆಗಳನ್ನು ನಿರ್ಮಾಣ ಮಾಡಲಾಗಿತ್ತು. ಉದಾ, ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ಅಂಚೆಪೇಟೆ, ತರಗುಪೇಟೆ, ಬಳೇಪೇಟೆ, ಮೇದರ ಪೇಟೆ, ಮಡಿವಾಳ ಪೇಟೆ, ಮುತ್ಯಾಲ ಪೇಟೆ, ಉಪ್ಪಾರ ಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ- ಮುಂತಾದ ಹಲವಾರು ಪೇಟೆ-ಉಪಪೇಟೆಗಳನ್ನು ನಿರ್ಮಿಸಿ ವರ್ತಕರಿಗೆ ಮತ್ತು ಕುಶಲಕರ್ಮಿಗಳಿಗೆ ಉತ್ತೇಜನ ನೀಡಲಾಗಿತ್ತು. ನಾಡಿನಲ್ಲಿ ಸಂಪತ್ತಿನ ಕ್ರೋಢೀಕರಣಕ್ಕೆ ಪ್ರಭುಗಳು ಕೈಗೊಂಡ ಅತ್ತ್ಯುತ್ತಮ ಕ್ರಮವಿದು.  

ದೇವಾಲಯಗಳ ನಿರ್ಮಾಣ

ರಾಜಧಾನಿಯ ಸುತ್ತಲು ಹಲವು ದೇವಾಲಯಗಳನ್ನು ನಿರ್ಮಿಸಿ, ಹಲವಾರು ಹಳೆಯ ಗುಡಿಗಳ ಜೀರ್ಣೋದ್ಧಾರ ಮಾಡಿಸಿದ್ದರು ಕೆಂಪೇಗೌಡರು. ಬೆಂಗಳೂರಿನ ದೊಡ್ಡ ಬಸವನ ಗುಡಿ ಮತ್ತು ಅಲ್ಲಿನ ಏಕಶಿಲೆಯ ನಂದಿ ಅವರು ನಿರ್ಮಿಸಿದ ಭವ್ಯತೆಗಳಲ್ಲಿ ಒಂದು. ಪ್ರತಿವರ್ಷ ಇಲ್ಲಿ ನಡೆಯುವ ಕಡಲೆಕಾಯಿ ಪರಿಷೆಯು ಕೃಷಿ ಸಮೃದ್ಧಿಗೂ ಧಾರ್ಮಿಕ ಚಟುವಟಿಕೆಗಳಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ, ಆಂಜನೇಯ ದೇಗುಲ, ನಗರ ದೇವತೆ ಅಣ್ಣಮ್ಮ ದೇವಾಲಯಗಳು ಈ ಕಾಲದಲ್ಲೇ ನಿರ್ಮಾಣಗೊಂಡವು. ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿತು. ಇವುಗಳಲ್ಲದೆ, ಕೋಟೆಯ ಸುತ್ತಮುತ್ತ ದೇವಾಲಯಗಳನ್ನು ಕಟ್ಟಿಸುವುದು ಅಂದಿನ ಪ್ರಭುಗಳ ಪರಿಪಾಠವಾಗಿತ್ತು.

ಶಿಲ್ಪಕಲೆಗೆ ನಾಡಪ್ರಭುಗಳ ಕೊಡುಗೆಯೋ ಎಂಬಂತೆ, ಗಿರಿಜಾ ಕಲ್ಯಾಣ ಮತ್ತು ರಾಮಾಯಣ ಕಥನಗಳ ಸಾಲುಗಳನ್ನು ಕೋಟೆ ವೆಂಕಟರಮಣ, ಹಲಸೂರಿನ ಸೋಮೇಶ್ವರ ಮತ್ತು ಶಿವಗಂಗೆಯ ಕಲ್ಯಾಣಿಯ ಗೋಡೆಗಳ ಮೇಲೆ ಇಂದಿಗೂ ಕಾಣಬಹುದು. ಸುಸಜ್ಜಿತ ರಸ್ತೆ ಮಾರ್ಗಗಳು, ಸಾಲು ಮರಗಳು, ಉದ್ದಗಲಕ್ಕೂ ಉದ್ಯಾನವನಗಳು, ಕುಡಿಯಲು ಮತ್ತು ಕೃಷಿಗೆ ಸಮೃದ್ಧವಾದ ನೀರಾವರಿ ವ್ಯವಸ್ಥೆ, ನಾಡಿನ ರಕ್ಷಣೆಗೆ ಕೋಟೆ, ಕಾವಲುಗೋಪುರ ಹಾಗೂ ದ್ವಾರಗಳು, ಸುಸ್ಥಿರ ಆರ್ಥಿಕತೆಗಾಗಿ ವಾಣಿಜ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಕಲೆ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಇಂಬು- ಇವನ್ನೆಲ್ಲಾ ಮಾಡಿದವರು ಯಾವುದೋ ಸಾಮ್ರಾಜ್ಯದ ಅರಸನಲ್ಲ; ಸಾಮಂತ ನಾಡೊಂದರ ಪಾಳೆಯಗಾರ.

ಇದನ್ನೂ ಓದಿ : Kempegowda Jayanti: ಕೆಂಪೇಗೌಡ ಜಯಂತಿಗೆ ರಾಜ್ಯಮಟ್ಟದ 2 ಕಾರ್ಯಕ್ರಮ: ಹಾಸನದಲ್ಲೊಂದು, ಬೆಂಗಳೂರಲ್ಲೊಂದು

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಯಾವ ಸಿಂಹಾಸನ, ಅರಸೊತ್ತಿಗೆಯ ಹಂಗಿಲ್ಲದೆಯೇ ಜನಮನದ ಅರಸನಾಗಿದ್ದವರು- ನಿಜವಾದ ಅರ್ಥದಲ್ಲಿ ʻನಾಡಪ್ರಭುʼ! ಬೆಂಗಳೂರಿನ ಇಂದಿನ ಸ್ಥಿತಿ ಏನೇ ಇದ್ದರೂ, ಭವ್ಯ ಮತ್ತು ಉದಾತ್ತ ಧ್ಯೇಯೋದ್ದೇಶಗಳ ಜೊತೆಗೆ ಅತ್ಯಂತ ವ್ಯವಸ್ಥಿತ ಬೆಂಗಳೂರನ್ನು ಕಟ್ಟಿದ್ದ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಲೇಬೇಕಾದ ಹೊತ್ತಿದು. ನಾಡು ಪ್ರಭು ಕೆಂಪೇಗೌಡರನ್ನು ಸ್ಮರಿಸೋಣ, ನಮಿಸೋಣ.

Exit mobile version