ಡಾ. ಜಿ.ವಿ. ಗೋಪಾಲ್
ನಾಡಪ್ರಭು ಕೆಂಪೇಗೌಡರು ವಿಶ್ವ ವಿಖ್ಯಾತ ಬೆಂಗಳೂರು ನಗರ ನಿರ್ಮಾಪಕ, ಸಾವಿರಾರು ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ನಾವ್ಯಾರು ಮರೆಯಲಾಗದ ನನಸುಗಾರ, ಕೋಟೆ ಪೇಟೆಗಳ ನಿರ್ಮಾಣದ ಸಾಕಾರ, ಕರುನಾಡಿನ ಹೆಮ್ಮೆಯ ಕುವರ, ಕೆಂಪೇಗೌಡ.
ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳು ಆಳಿವೆ. ಆದರೆ ಕೆಂಪೇಗೌಡರು ಈಗಲೂ ನಾಡಿನ ಚರಿತ್ರೆಯಲ್ಲಿ ಮತ್ತು ಜನಮಾನಸದಲ್ಲಿ ಉಳಿದಿದ್ದಾರೆ. ನಾಡಪ್ರಭು ಸ್ಥಳೀಯವಾಗಿ ಜನರ ಮಧ್ಯೆ ಇದ್ದು ಜನಕಲ್ಯಾಣ ಕಾರ್ಯ ಕೈಗೊಂಡ ಚಾರಿತ್ರಿಕ ಪುರುಷ ಕೆಂಪೇಗೌಡರ 514ನೇ ಜಯಂತಿ ಆಚರಣೆಯ ಈ ಸುಸಂಧರ್ಭದಲ್ಲಿ (Kempe Gowda Jayanti 2023) ಅವರ ಕಾರ್ಯ ಮತ್ತು ಸಾಧನೆಗಳನ್ನು ನೆನೆಯುವ ಮೂಲಕ ಅವರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
1510ರ ಜೂನ್-27ರಲ್ಲಿ ಜನಿಸಿದ ಕೆಂಪೆಗೌಡರು ಕೆಂಪನಂಜೇಗೌಡ ಮತ್ತು ಲಿಂಗಮಾಂಬೆಯವರ ನಾಲ್ವರು ಸುಮತ್ರರಲ್ಲಿ ಇವರು ಮೊದಲನೆಯವರು. ಆದ್ದರಿಂದ ಇವರನ್ನು ಹಿರಿಯ ಕೆಂಪೇಗೌಡ ಎಂತಲೂ ಕರೆಯುತ್ತೇವೆ. ಉಳಿದವರು ಕ್ರಮವಾಗಿ ವೀರೇಗೌಡ, ಬಸವೇಗೌಡ ಹಾಗೂ ಕೆಂಪಸೋಮೇಗೌಡ, ತಂದೆ ಕೆಂಪನಂಜೇಗೌಡ ವಿಜಯನಗರ ಸಾಮ್ರಾಜ್ಯದ ನಿಷ್ಟಾವಂತ ಸಾಮಂತ, ಯಲಹಂಕದ ಈ ಪ್ರಭುಗಳು ಭೈರವನ ಆರಾಧಕ ಪಾಳೇಗಾರರೆಂದು ಪ್ರಸಿದ್ದರಾಗಿದ್ದರು. ಕೆಂಪಮ್ಮ ಇವರ ಮನೆ ದೇವತೆ ಹಾಗೆ ಭೈರವನ ಆರಾಧಕರೂ ಆಗಿದ್ದರು.
ಹಾಗಾಗಿ ಈ ಮನೆತನದವರೆಲ್ಲರೂ ಕೆಂಪೇಗೌಡ ಎಂಬ ಹೆಸರನ್ನು ಇಟ್ಟುಕೊಂಡರು. ಒಂದನೇ ಕೆಂಪೇಗೌಡರು 1531ರಲ್ಲಿ ಪಟ್ಟಾಭಿಷಕ್ತರಾಗಿ 1569ರವರೆಗೆ ಸುಮಾರು 38 ವರ್ಷಗಳು ಆಡಳಿತ ನಡೆಸಿ ಇಹಲೋಕ ತ್ಯಜಿಸಿದ್ದರೂ ತಮ್ಮ ಸಾಧನೆಗಳಿಂದ ಈಗಲೂ ಚಿರಸ್ಮರಣೀಯರಾಗಿದ್ದಾರೆ.
ಹಂಪೆಯೇ ಸ್ಫೂರ್ತಿ!
ಕೆಂಪೇಗೌಡರು ಹೆಸರುಘಟ್ಟದ ಗುರುಕುಲದಲ್ಲಿ ಎಂಟು ವರ್ಷ ವಿದ್ಯಾಭ್ಯಾಸ ಮುಗಿಸಿ ಮಾಧವ ಭಟ್ಟರೆಂಬ ಗುರುಗಳ ಬಳಿ ಕಲಿತು ಸಂಸ್ಕಾರ ಮತ್ತು ಸಾಂಸ್ಕೃತಿಕ ಅನ್ಯನ್ಯತೆಯ ವ್ಯಕ್ತಿತ್ವ ಹೊಂದಿದ್ದರು. 1531 ರಿಂದ 1569ರವರೆಗೆ ಯಲಹಂಕದ ಮಹಾನಾಡ ಪ್ರಭುವಾದರು. ನಂತರ ಇವರ ಪುತ್ರ 2ನೇ ಕೆಂಪೇಗೌಡ (ಮಾಗಡಿ ಕೆಂಪೇಗೌಡ), ಮೂರನೇ ಕೆಂಪೇಗೌಡ ನಂತರ ಗಿಡ್ಡೆಗೌಡ ಮೊದಲಾದವರು ಆಳ್ವಿಕೆ ನಡೆಸಿದರು.
ಆದರೆ ಯಲಹಂಕ ಮಹಾನಾಡು ಹೆಚ್ಚು ಪ್ರಸಿದ್ದಿಗೆ ಬಂದದ್ದು ಹಿರಿಯ ಕೆಂಪೇಗೌಡರ ಕಾಲದಲ್ಲಿ ಪಟ್ಟಾಭಿಷಕ್ತರಾಗಿ ಚೆನ್ನಾಮಾಂಬೆಯವರೊಡನೆ ವಿವಾಹವಾದ ಇವರು ತಮ್ಮ ತಂದೆಯೊಡನೆ 1515ರಲ್ಲಿ ಹಂಪೆಯಲ್ಲಿ ಮೊಟ್ಟಮೊದಲು ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಆರಂಭವಾದ ವಿಜಯದಶಮಿ ಉತ್ಸವ ನೋಡಲು ಹೋಗಿದ್ದ ಕೆಂಪೇಗೌಡರ ಮನಸ್ಸಿನಲ್ಲಿ ಅದಾಗಲೇ ಅಂತರಾಷ್ಟ್ರೀಯ ಸಾಂಸ್ಕೃತಿಕ, ವಾಣಿಜ್ಯ ಖ್ಯಾತಿ ಹೊಂದಿದ್ದ ಹಂಪೆಯಂತಹ ನಗರವನ್ನು ನಿರ್ಮಿಸುವ ಮನದಾಸೆಯ ಫಲವಾಗಿ 1537ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯ ಸಕಲ ಸಂಪ್ರದಾಯಗಳಂತೆ ಆರಂಭವಾಯಿತು.
ಶ್ರೀ ಕೃಷ್ಣದೇವರಾಯನ ನಂತರ ಅಧಿಕಾರಕ್ಕೆ ಬಂದ ಅಚ್ಯುತರಾಯರು 30,000 ಪಗೋಡ ಕಂದಾಯ ಬರುತ್ತಿದ್ದ ಹಳೇ ಬೆಂಗಳೂರು, ವರ್ತೂರು, ಬೇಗೂರು, ಹಲಸೂರು, ಕೆಂಗೇರಿ ತಲಘಟ್ಟಪುರ, ಜಿಗಣಿ, ಕುಂಬಳಗೂಡು, ಕಾನಳ್ಳಿ, ಬಾಣಾವರ ಹೆಸರುಘಟ್ಟ ಮುಂತಾದ ಹೋಬಳಿಗಳ ಆದಾಯವನ್ನು ಹೊಸನಗರ ನಿರ್ಮಿಸಲು ಮತ್ತು ಕೆರೆಕಟ್ಟೆ ಕಟ್ಟಲು ಅಚ್ಯುತರಾಯರು ಉಧಾರವಾಗಿ ನೀಡಿದರು.
ಹೊನ್ನಾರು ಬೆಂಗಳೂರು ನಿರ್ಮಾಣಕ್ಕೆ ಹಾದಿ
ಸಿರಿವಂತಿಕೆಯ ಹಂಪೆಯಂತಹ ವೈಭವಯುತ ನಗರ ನಿರ್ಮಾಣದ ಕನಸು ಹೊತ್ತಿದ್ದ ಕೆಂಪೇಗೌಡರು ವೃಷಭಾವತಿ ಮತ್ತು ಆರ್ಕಾವತಿ ನದಿಗಳಿಗೆ ಸೇರುತ್ತಿದ್ದ ತೊರೆಗಳು ಹರಿಯುವ ಪ್ರದೇಶ ಸಮುದ್ರಮಟ್ಟದಿಂದ 3000 ಅಡಿ ಎತ್ತರದ ಜಾಗ, ಉತ್ತಮ ಪರಿಸರ, ಫಲವತ್ತಾದ ಮಣ್ಣು ಇರುವ ಸ್ಥಳವನ್ನು ಆಯ್ಕೆಮಾಡಿದರು. ಅದು ಈಗಿನ ಯಲಹಂಕಕ್ಕೆ 10 ಮೈಲಿ ದೂರದಲ್ಲಿತ್ತು, ಚಿಕ್ಕಪೇಟೆ ಮತ್ತು ದೊಡ್ಡಪೇಟೆ ರಸ್ತೆಗಳು ಕೂಡುವ ಸ್ಥಳದಿಂದ ಭೂಮಿ ಪೂಜೆ-ವೇದ ಘೋಷಗಳೊಂದಿಗೆ 4 ಜನ ರೈತರು ನೇಗಿಲು ಕಟ್ಟಿದ ನಾಲ್ಕು ಜೊತೆ ಬಿಳಿ ಎತ್ತುಗಳು ನಾಲ್ಕು ದಿಕ್ಕಿಗೆ ಗೆರೆ ಎಳೆಯುತ್ತಾ ಸಾಗಲಾಗಿ ಪೂರ್ವ-ಪಶ್ಚಿಮದ ಸಾಲನ್ನು ಚಿಕ್ಕಪೇಟೆಯಾಗಿ ಉತ್ತರ-ದಕ್ಷಿಣ ಗೆರೆಯನ್ನು ದೊಡ್ಡಪೇಟೆ (ಈಗಿನ ಅವಿನ್ಯೂ ರಸ್ತೆ)ಯಾಗಿ ನಿರ್ಮಿಸಲಾಯಿತು.
ಎತ್ತುಗಳು ಪೂರ್ವದಲ್ಲಿ ಹಲಸೂರು ಗೇಟ್, ಪಶ್ಚಿಮದಲ್ಲಿ ಅರಳೇಪೇಟೆ ಉತ್ತರಕ್ಕೆ ಯಲಹಂಕ ದಕ್ಷಿಣಕ್ಕೆ ಲಾಲ್ ಬಾಗ್ ವರೆಗೆ ಸಾಗಿ ನಿಂತ ಸ್ಥಳಗಳು ಬೆಂಗಳೂರಿನ ಗಡಿಯಾದವು. ಅಲ್ಲಿ ಕಾವಲು ಕೋಟೆಗಳನ್ನು ಮಧ್ಯದಲ್ಲಿ ಕೋಟೆ ನಿರ್ಮಾಣ ಆರಂಭವಾಯಿತು. ನಾಲ್ಕು ದಿಕ್ಕಿಗೆ ನಾಲ್ಕು ಮಹಾದ್ವಾರ ಮತ್ತು ಐದು ಕಿರು ದ್ವಾರಗಳನ್ನೊಳಗೊಂಡ ಕೋಟೆ ನಿರ್ಮಾಣ ಆರಂಭವಾಯಿತು. ಈಗಿನ ವಿಕ್ಟೋರಿಯಾ ಆಸ್ಪತ್ರೆ ಇರುವಲ್ಲಿ ದಕ್ಷಿಣ ದಿಕ್ಕಿಗೆ ಮುಖ್ಯದ್ದಾ ನಿಲ್ಲಿಸಲು ತೀಮಾ ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿ ಭೈರವೇಶ್ವರನನ್ನು ನೆನೆದು ದೈತ್ಯಾಕಾರದ ಬಾಗಿಲು ನಿಲ್ಲಿಸುತ್ತಾರೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬಾಗಿಲು ಬಿದ್ದಿರುವುದನ್ನು ಕಂಡು ಏಂತವಾದ ಕೆಂಪೇಗೌಡರು ಜ್ಯೋತಿಷಿಗಳ ಬಳಿ ಕೇಳಿದಾಗ ಗರ್ಭಿಣಿಯೊಬ್ಬಳ ಬಲಿಯ ಅವಶ್ಯಕತೆಯನ್ನು ಹೇಳಿದಾಗ ಗೌಡರು ಕಂಗಾಲಾಗಿದ್ದರು.
ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೆಂಪೇಗೌಡರ ಮಗ ದೊಡ್ಡವೀರಪ್ಪಗೌಡರ ಪತ್ನಿ ಮಹಾನ್ ಸಾದ್ವಿ ಲಕ್ಷ್ಮೀದೇವಿ ಕಡು ಕತ್ತಲಿನಲ್ಲಿ ಮನೆದೇವರನ್ನು ನೆನೆದು ಕೋಟೆಬಾಗಿಲು ನಿಲ್ಲಲೆಂದು ಪ್ರಾರ್ಥಿಸಿ ಕುಡುಗೋಲಿನಿಂದ ಕೋಟೆಬಾಗಿಲಿಗೆ ಹಾರವಾದರು. ಮಾರನೆ ದಿನ ಬಂದು ನೋಡಿದಾಗ ಕೋಟೆ ಬಾಗಿಲು ನಿಂತಿತ್ತು. ಒಂದು ಕಡೆ ಸಂತೋಷ ಮತ್ತೊಂದು ಕಡೆ ಆಕ್ರಂಧನ ಮುಗಿಲು ಮುಟ್ಟುತ್ತದೆ. ತ್ಯಾಗ ಬಲಿದಾನ ಮಾಡಿದ ಲಕ್ಷ್ಮೀದೇವಿಯ ಮೃತ ದೇಹವನ್ನು ತವರಿನವರ ಬಯಕೆಯಂತೆ ಕೋರಮಂಗಲದಲ್ಲಿ ಅಂತ್ಯಸಂಸ್ಕಾರ ಮಾಡಿ, ನಾಡಿನ ಪ್ರಜೆಗಳ ಹಿತಕ್ಕಾಗಿ ಬಲಿದಾನ ಮಾಡಿದ ಲಕ್ಷ್ಮೀದೇವಿ ಸಮಾಧಿ ಸ್ಥಳದಲ್ಲಿ ಲಕ್ಷ್ಮೀದೇವಿ ಗುಡಿ ನಿರ್ಮಿಸಿದರು.
ನಗರದ ಭಾಗ್ಯದೇವತೆ ಲಕ್ಷ್ಮೀದೇವಿ ನಗರಕ್ಕೆ ಹಸಿದು ಬಂದವರಿಗೆ ಅನ್ನ ನೀರು ನೀಡು ತಾಯೆ ಎಂದು ಬೇಡಿ ಕೊಳ್ಳಲಾಯಿತು. ಇಂತಹ ತ್ಯಾಗ ಬಲಿದಾನದ ದಂತಕತೆಯಾಗಿದ್ದ ಲಕ್ಷ್ಮೀದೇವಿ ಪ್ರತಿಮೆಯನ್ನು ಮೇಯರ್ ಜಿ. ಪದ್ಮಾವತಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದೆ ಪ್ರತಿಷ್ಠಾಪಿಸಿ ಕೋಟೆ ಮತ್ತು ನಗರ ನಿರ್ಮಾಣದಲ್ಲಿ ಲಕ್ಷ್ಮೀದೇವಿಯವರ ಬಲಿದಾನವನ್ನು ಮುಂದಿನ ಪೀಳಿಗೆಗೆ ಇತಿಹಾಸವಾಗಿಸಿದ್ದಾರೆ.
ಕೋಟೆಯೊಂದಿಗೆ ಪೇಟೆಗಳ ನಿರ್ಮಾಣ
ಕೆಂಪೇಗೌಡರ ದೃಷ್ಟಿಯಲ್ಲಿ ನಾಡು ಎಂದರೆ ಬರೀ ಕಲ್ಲು ಮಣ್ಣುಗಳಲ್ಲ. ಎಲ್ಲಾ ವರ್ಗದ ಜನಸಮುದಾಯ ಎನ್ನುವ ಬಹುತ್ವ ದೂರದೃಷ್ಟಿ ಅವರಲ್ಲಿತ್ತು, ವಾರದ ಏಳು ದಿನಗಳು ನಗರದಲ್ಲಿ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ನಡೆಯಬೇಕು. ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯನ್ನು ವಿಸ್ತರಿಸಿ ರೈತರು ಬೆಳೆದ ಬೆಳೆಗಳನ್ನು ನಗರದಲ್ಲಿ ಮಾರಾಟ ಮಾಡಲು ಅನೇಕ ಪೇಟೆಗಳಿಗೆ ಅಸ್ತಿಭಾರ ಹಾಕಿದರು.
ಎಲ್ಲಾ ಸಮುದಾಯದವರು ವೃತ್ತಿಗಳಿಗೆ ತಕ್ಕಂತೆ ವ್ಯವಹರಿಸಲು ದೊಡ್ಡಪೇಟೆ (ಸಗಟು ಮಾರುಕಟ್ಟೆ) ಚಿಕ್ಕಪೇಟೆ (ಚಿಲ್ಲರೆ ಮಾರುಕಟ್ಟೆ), ಅಕ್ಕಿಪೇಟೆ, ರಾಗಿಪೇಟೆ, ಅರಳೆಪೇಟೆ, ತರಗುಪೇಟೆ, ಗಾಣಿಗರ ಪೇಟೆ, ಉಪ್ಪಾರಪೇಟೆ, ಕುಂಬಾರಪೇಟೆ, ತಿಗಳರ ಪೇಟೆ, ನಗರ್ತಪೇಟೆ, ಬಳೆಪೇಟೆ, ಮುತ್ಯಾಲಪೇಟೆ, ಗೊಲ್ಲರಪೇಟೆ ಮುಂತಾದ ಸಮುದಾಯ ಆಧಾರಿತ ಪೇಟೆಗಳನ್ನು ನಿರ್ಮಿಸಿ ಎಲ್ಲಾ ದಿಕ್ಕುಗಳಿಂದ ವರ್ತಕರನ್ನು ಆಹ್ವಾನಿಸಿ ಬೆಂಗಳೂರನ್ನು ವಿಜಯನಗರದ ರಾಜಧಾನಿ ಹಂಪೆಯಂತೆ ವಾಣಿಜ್ಯ ವ್ಯಾಪಾರಗಳ ಕೇಂದ್ರವಾಗಿಸಿ ಬಹುತ್ವ ಸಮ ಸಮಾಜದ ನಗರ ನಿರ್ಮಿಸಿದ ಬ್ಯಾಗಿ ಒಕ್ಕಲು ಹಿನ್ನಲೆಯುಳ್ಳ ಕಂಡಗೌಡರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.
ಕೆರೆಕಟ್ಟೆಗಳ ನಿರ್ಮಾಣ
ಒಕ್ಕಲು ಮನೆಯಲ್ಲಿ ಹುಟ್ಟಿ ಬಂದ ಕೆಂಪೇಗೌಡರಿಗೆ ಕೃಷಿಪ್ರಧಾನ ಆರ್ಥಿಕ ವ್ಯವಸ್ಥೆಗೆ ಮತ್ತು ನಗರಕ್ಕೆ ನೀರು ಅತಿ ತಿಳಿದಿದ್ದ ಅವರು ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಕೆಂಪಾಂಬುದಿ ಕೆರೆ, ಧರ್ಮಾಂಬುದಿ ಕೆರೆ, ಸಂಪಂಗಿರಾಮನ ಕೆರೆ, ಚೆನ್ನಮ್ಮನಕೆರೆ, ಹಲಸೂರು ಕೆರೆ, ಕಾರಂಜಿ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಸಿದ್ದಿಕಟ್ಟೆಕೆರೆ ಮುಂತಾದ ಸರಣಿ ಕೆರೆಗಳನ್ನು ನಿರ್ಮಿಸಿ ಮಳೆಕೊಯ್ತು ರೀತಿ ನೀರು ಸಂಗ್ರಹದ ವ್ಯವಸ್ಥೆ ಮಾಡಿದ್ದರು. ಹಾಗೆ ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಬಳಿ ಮಣ್ಣಣೆ ನಿರ್ಮಿಸಿದ್ದಿರು. ಆದ್ದರಿಂದ ಇವರನ್ನು ಸಾವಿರ ಕೆರೆಗಳ ಸರದಾರನೆಂದರೆ ಅತಿಶಯೋಕ್ತಿಯಾಗಲಾರದು.
ಗುಡಿಗೋಪುರಗಳ ನಿರ್ಮಾಣ ಕಾರ್ಯ
1ನೇ ಕೆಂಪೇಗೌಡ/ಹಿರಿಯ ಕೆಂಪೇಗೌಡರು ದೈವ ಭಕ್ತರಾದ್ದರಿಂದ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಗವಿಗಂಗಾಧರೇಶ್ವರ, ದೊಡ್ಡಬಸವಣ್ಣ, ಜಲಕಂಠೇಶ್ವರ, ಹಲಸೂರಿನ ಸೋಮೇಶ್ವರ, ಗಣಪತಿ, ಆಂಜನೇಯ, ನಂಧೀಶ್ವರ, ಮಲ್ಲಿಕಾರ್ಜುನ ಶಿವಗಂಗೆಯ ದೇವಾಲಯದ ಪ್ರತಿಮೆಗಳು ಅಲ್ಲದೆ ನೆಲಪಟ್ಟಣ(ಮಾಗಡಿ) ಸಾವನದುರ್ಗ ಹುತ್ರಿದುರ್ಗ, ಹುಲಿಯೂರುದುರ್ಗ ಇನ್ನೂ ಮುಂತಾದ ಕಡೆ, ಕೆರೆಕಟ್ಟೆ, ಅಗ್ರಹಾರ ದೇವಾಲಯಗಳನ್ನು 1ನೇ ಕೆಂಪೇಗೌಡ, 2ನೇ ಕೆಂಪೇಗೌಡ 3ನೇ ಕೆಂಪೇಗೌಡರು ನಿರ್ಮಿಸಿದ್ದಾರೆ.
ವಿದೇಶಿಯರ ದೃಷ್ಟಿಯಲ್ಲಿ ವಿಜಯನಗರದ ರಾಜಧಾನಿ ಹಂಪೆ ಹೇಗೆ 60 ಮೈಲಿ ಸುತ್ತಳತೆ, ಕಡಿದಾದ ಬೆಟ್ಟಗುಡ್ಡಗಳ ಮಧ್ಯೆ ಕೋಟೆಕೊತ್ತಲಗಳಿಂದ ಕೂಡಿತ್ತೋ ಹಾಗೆ ಯಲಹಂಕ ನಾಡಪ್ರಭುಗಳ ಬೆಂಗಳೂರಿನ ಕೋಟೆಯ ಸುತ್ತ 60 ಮೈಲಿ ವ್ಯಾಪ್ತಿಯಲ್ಲಿ ನಾಡಪ್ರಭುಗಳು ಗಿರಿದುರ್ಗಗಳನ್ನು ದೇವಾಲಯಗಳನ್ನು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಉದಾಹರಣೆಗೆ ಮಾಗಡಿ, ಸಾವನದುರ್ಗ, ಹುಲಿಯೂರುದುರ್ಗ, ಹುತ್ರಿದುರ್ಗ, ಶಿವಗಂಗೆ ಬೆಟ್ಟಗಳಲ್ಲಿರುವ ಸ್ಮಾರಕಗಳೆ ಸಾಕ್ಷಿಯಾಗಿವೆ. ಅವು ಸಹ ಬೆಂಗಳೂರಿನಷ್ಟೆ ಐತಿಹಾಸಿಕ & ಸಾಂಸ್ಕೃತಿಕ ಮಹತ್ವ ಪಡೆಯುವಲ್ಲಿ ಒಕ್ಕಲು ಕುಲದ ಯಲಹಂಕ ನಾಡಪ್ರಭುಗಳು ಕಾರಣರಾಗಿದ್ದಾರೆ.
ಮಾಗಡಿ-ಕುಣಿಗಲ್‌ನ ಹಿರಿಮೆ ಹೆಚ್ಚಿತು!
ನಾಡಪ್ರಭುಗಳ ಚರಿತ್ರೆಯಲ್ಲಿ ಒಂದು ಮಾತಿದೆ ಅಂದರೆ “ಕುಂತು ಕುಣಿಗಲ್ ಗೆದ್ದ-ನಿಂತು ಮಾಗಡಿ ಗೆದ್ದ” ಎಂದು ಅಂದರೆ ಕೆಂಪೇಗೌಡರ ಕಾಲಕ್ಕೆ ಯಲಹಂಕ ಪ್ರಭುಗಳ ನಾಡು ಕೃಷ್ಣಗಿರಿಯಿಂದ-ನುಗ್ಗೆಹಳ್ಳಿವರೆಗೆ ಹಿಂದೂಪುರದಿಂದ ಕಾವೇರಿವರೆಗೆ ವ್ಯಾಪಿಸಿದ್ದು, ಇದರಲ್ಲಿ ಮಾಗಡಿ 2ನೇ ಕಂಡೇಗೌಡನ ಕಾಲಕ್ಕೆ ರಾಜಧಾನಿಯೂ ಆಗಿತ್ತು, ಹಾಗೇ ಹಿರಿಯ ಕೆಂಪೇಗೌಡರ ಕಾಲಕ್ಕೆ ಕುಣಿಗಲ್ ಸೀಮೆಯಲ್ಲಿ ಬರುವ ಹುತ್ರಿದುರ್ಗ-ಹುಲಿಯೂರು ದುರ್ಗಗಳು ಸೇನಾನೆಲೆ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಕೇಂದ್ರಗಳಾಗಿದ್ದವು.
ಸರಿಸುಮಾರು 3000 ವರ್ಷಗಳಷ್ಟು ಪುರಾತನ ಶಿಲಾ ಸಮಾಧಿಗಳನ್ನು ಹೊಂದಿರುವ ಇಲ್ಲೆ ಕೆಂಪೇಗೌಡರು ನಾಡರಕ್ಷಣೆಗಾಗಿ ನಿರ್ಮಿಸಿರುವ ಕೋಟೆ ಇದೆ. ಇದೊಂದು ಅದ್ಭುತ ಸ್ಥಳ. ಇಲ್ಲಿ ಟಂಕಶಾಲೆ, ಲೋಹಗಳಿಂದ ಯುದ್ಧಕ್ಕೆ ಬೇಕಾದ ಆಯುಧಗಳನ್ನು ತಯಾರಿಸುತ್ತಿದ್ದ ಕುರುಹುಗಳಿವೆ. ವನ್ಯ ಜೀವಿಗಳಾದ ಕರಡಿ, ಚಿರತೆ, ನವಿಲು, ನರಿ, ತೋಳ, ಉಡ, ಗೌಜುಗ ಪ್ರಭೇದದ ಪ್ರಾಣಿಗಳಿವೆ. ಹಾಗೆ ಸಾವನದುರ್ಗ-ಹುತ್ರಿದುರ್ಗ-ಶಿವಗಂಗೆ-ದೇವರಾಯನ ದುರ್ಗ ಬೆಟ್ಟ ಸಾಲುಗಳು ಆನೇ ದಾರಿಗಳೆಂದು ಪ್ರಸಿದ್ದಿ ಪಡೆದಿವೆ. ಹೀಗೆ ಕೆಂಪೇಗೌಡರು ಕುಣಿಗಲ್ ಹೆಟ್ಟೂರು, ರಾಮದುರ್ಗ, ಹುತ್ತಿದುರ್ಗ, ಹುಲಿಯೂರು ದುರ್ಗ, ಗುಡದಾರನಹಳ್ಳಿ, ಮಾಗಡಿ, ತಿಪ್ಪಗೊಂಡನಹಳ್ಳಿದರೆಗೆ ಸುರಕ್ಷಿತ ಬೆಟ್ಟಗುಡ್ಡಗಳಿಂದ ಸುತ್ತುಮದ ಮತ್ತು ನೈಸರ್ಗಿಕ ಜಲಮೂಲಗಳಾದ ಹಳ್ಳ ತೊರೆಗಳಿದ್ದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನಾಡಪ್ರಭುವಾಗಿ ಆಳಿದ್ದಾರೆ.
ಅವರಿಗೆ ಈ ಭಾಗ ಹಂಪೆಯಷ್ಟೆ ಆಯಕಟ್ಟಿನ ಪ್ರದೇಶವೆಂಬ ಒಳನೋಟ ಮತ್ತು ವಿಶಾಲಜ್ಞಾನವಿತ್ತು, ಆದರೆ ತಾವು ಕಟ್ಟಿದ್ದ ನಾಡು ಈ ರೀತಿ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡು ಪರಂಪರೆ, ಪ್ರಾಚೀನತೆ, ಸಂಸ್ಕೃತಿಗಳೊಡನೆ ವಿಶ್ವದರ್ಚೆ ಸೀಮೆಯಾಗಬಲ್ಲದು ಎಂಬ ದೂರದೃಷ್ಟಿ ಕೆಂಪೇಗೌಡರಲ್ಲಿ ಇತ್ತು. ಹಾಗಾಗಿ ಬೆಂಗಳೂರು ರಾಜ್ಯದ ಮತ್ತು ದೇಶದ ಮೂಲೆಮೂಲೆಗಳಿಂದ ಜಗತ್ತಿನ ನಾನಾ ಕಡೆಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ. ಆದರೆ ಇಲ್ಲಿ ಯಾರಿಗೂ ಅನ್ನ ನೀರು ಉದ್ಯೋಗ ವಸತಿ ಸಾರಿಗೆಯ ಕೊರತೆ ಇಲ್ಲ. ಅಂತಹ ಸಮೃದ್ಧ ಪ್ರದೇಶವಾಗಿದೆ. ಸರ್ವ ಜನಾಂಗದ ನೆಲೆಯಾಗಿದೆ. ಜ್ಞಾನದ ಕೇಂದ್ರವಾಗಿದೆ. ಸುಂದರವಾದ ಪ್ರಾಕೃತಿಕ ಕೌತುಕಗಳು ಈ ಸೀಮೆಯಲ್ಲಿವೆ. ಇವು ಬೆಂಗಳೂರನ್ನು ನಿರ್ಮಿಸಿ ಆಳಿದ ಕೆಂಪೇಗೌಡರಿಗೂ ಇಲ್ಲಿ ಬಾಳಿದ ಬಾಳುತ್ತಿರುವ ಜನರು ಪಡೆದಿರುವ ಪ್ರಕೃತಿಯ ಭಾಗ್ಯ ಸೀಮೆ ಎನ್ನಬಹುದು.
ಸಂಕಷ್ಟ ಎದುರಿಸಿದ್ದ ಕೆಂಪೇಗೌಡ
ಚರಿತ್ರೆಯಲ್ಲಿ ನಾವು ನೋಡಿ ಕಲಿಯಬೇಕಾಗಿರುವುದು ಮಹಾನ್ ವೃತ್ತಿಗಳೆಲ್ಲರೂ ಒಂದಲ್ಲ ಒಂದು ಕಷ್ಟ ನೋವು, ಅಪಮಾನ, ನಿಂಧನೆಗೊಳಗಾಗಿದ್ದವರ, ಅವೆಲ್ಲವನ್ನು ದಾಟಿ ಬಾಳಿ ತಮ್ಮ ಸಮಾಜಕ್ಕೆ ಬೆಳಕಾದವರು ಚರಿತ್ರೆಯಲ್ಲಿ ಅಜರಾಮರಾಗಿದ್ದಾರೆ. ಹಾಗೆ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಗೂ ಬಂದಿತ್ತು. ಯಲಹಂಕದ ಸಿರಿ ಕೋಟೆ ಕಟ್ಟೆ, ಕಟ್ಟಡಗಳ ವೈಬೋಗ ಕಂಡು ಸಹಿಸದಾದ ಚನ್ನಪಟ್ಟಣದ ಕುಹಕಿಜಗದೇವರಾಯ, ಕೆಂಪೇಗೌಡರು ಬೈರವ ನಾಣ್ಯಗಳನ್ನು ಮುದ್ರಿಸಿ ಹವಣಿಸುತ್ತಿದ್ದಾನೆ ಸ್ವತಂತ್ರನಾಗಲು ಹವಣಿಸುತ್ತಿದ್ದಾನೆಂದು ದೊರೆ ಸದಾಶಿವರಾಯ ಮತ್ತು ಅಧಿಕಾರ ನಡೆಸುತ್ತಿದ್ದ ರಾಮರಾಯರಲ್ಲಿ ಚಾಡಿಹೇಳಿದನು. ಆಗ 1ನೇ ಕೆಂಪೇಗೌಡರನ್ನು ಆನೆಗೊಂದಿ ಸೆರೆಯಲ್ಲಿಡಲಾಯಿತು.
ಇಷ್ಟಾದರೂ ಕೆಂಪೇಗೌಡನ ವಂಶಸ್ಥರು ವಿಜಯನಗರಕ್ಕೆ ನಿಷ್ಟಾವಂತ ಪ್ರಜಾವಾತ್ಸಲ್ಯಕರಾಗಿ ನಡೆದು ಕೊಳ್ಳುತ್ತಿದ್ದರು. ಕುತಂತ್ರಿಗಳ ಸಾಮಂತಾಧಿಪತಿಗಳಾಗಿ, ತಿಳಿದು ಕೆಂಪೇಗೌಡರು ಬಿಡುಗಡೆಯಾದರು. ಕಾರವಾಸದಿಂದ ಬೆಂಗಳೂರಿಗೆ ಹಿಂತಿರುಗಿದ ಗೌಡರು ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜನರು ಜಯಘೋಷ ಕೂಗಿದರು. ಕೆಂಪೇಗೌಡರನ್ನು ಬೆಳ್ಳಿ ಉಯ್ಯಾಲೆ ಮೇಲೆ ಕೂರಿಸಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆ ಸ್ಥಳ ಉಯ್ಯಾಲೆ ಕಾವಲು ಎಂದು ಹೆಸರಾಗಿ ನಂತರ ವಯ್ಯಾಲಿಕಾವಲ್ ಆಗಿ ಕರೆಯಲ್ಪಡುತ್ತಿದೆ. ಇಂತಹ ಕೆಂಪೇಗೌಡರು 1569ರಲ್ಲಿ ಕುಣಿಗಲ್ ನಿಂದ ಹಿಂತಿರುಗುವಾಗ ಮರಣ ಹೊಂದಿದರೆಂದು ತಿಳಿದು ಬರುತ್ತದೆ.
ನಂತರ ಬೆಂಗಳೂರಿನ ಸಿರಿ ಸಂಪತ್ತು, ಜಲ-ನೆಲಗಳು ಧಾರ್ಮಿಕ ಉತ್ಸವಗಳು, ತಂಪಾದ ಹವಾಮಾನ ಸುಭೀಕ್ಷೆ ವಾತಾವರಣ, ವ್ಯಾಪಾರ, ಉದ್ಯೋಗದ ನೆಲೆ 1638ರ ವೇಳೆಗೆ ಬಿಜಾಪುರದ ಸೇನಾನಿ ರಣದುಲ್ಲಾಖಾನನ ವಶವಾಗಿ ಶಿವಾಜಿಯ ತಂದೆ ಷಹಾಜಿಯ ಜಹಾಂಗೀರ್ ಆಯಿತು. ನಂತರ 1ನೇ ಕೆಂಪೇಗೌಡನ ನಂತರದವರು ಮಾಗಡಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕುಣಿಗಲ್ ಸೀಮೆಗೆ ಹೊರಳಿದರು. ಹೀಗಾಗಿ ಸ್ಥಾಪನೆಯಾದ ಶತಮಾನದ ಅಂತರದಲ್ಲಿ ಬೆಂಗಳೂರು ನಗರ ತನ್ನ ಭವ್ಯತೆ, ಸಿರಿವಂತಿಕೆಯಿಂದ ಅನ್ಯರ ವಶವಾಯಿತು.
ಆದರೆ ಕೆಂಪೇಗೌಡರು ಕಟ್ಟಿದ್ದ ಬಹುಜನ ಸಂಸ್ಕೃತಿಯ ಭವ್ಯನಗರ ಎಂದು ತನ್ನ ಭವ್ಯತೆ ಮತ್ತು ಮಹತ್ವವನ್ನು ಕಳೆದುಕೊಂಡಿಲ್ಲ. ರಾಜ್ಯದ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರವಾಗಿರುವ ನಗರ ಶ್ರೀಮಂತ ನಗರವಾಗಿದೆ. ಪ್ರಗತಿಯದಾಪುಗಾಲು ಇಡುತ್ತಾ ಜಗತ್ತಿನ ಜನಮನ ಸೂರೆಗೊಳ್ಳುತ್ತಿದೆ.
ಇದನ್ನೂ ಓದಿ : Kempegowda Jayanti | ಬೆಂಗಳೂರನ್ನು ದೇಗುಲಗಳ ನಗರವನ್ನಾಗಿಸಿದ ಕೆಂಪೇಗೌಡ
ಇಂತಹ ನಗರದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11-11-2022ರಂದು 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅದರ ಹೆಸರು `ಪ್ರಗತಿ ಪ್ರತಿಮೆ’ (Statue of Prosperity). ಇದರ ಪಕ್ಕದಲ್ಲಿಯೇ ಥೀಮ್ ಪಾರ್ಕ್ ಕೂಡ ನಿರ್ಮಿಸಲಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. 22,000 ಹಳ್ಳಿ, ಪಟ್ಟಣ ನಗರಗಳಿಂದ ತಂದ ಮಣ್ಣನ್ನು ಥೀಮ್ ಪಾರ್ಕ್‌ನಲ್ಲಿ ಬಳಸಲಾಗಿದೆ.
“ಕೆರೆಯಂ ಕಟ್ಟಿಸು”, “ಬಾವಿಯಂ ತೋಡಿಸು”, “ದೇವಗಾರಂ ನಿರ್ಮಿಸು” ಎಂಬ ನಾಣ್ಣುಡಿಯಂತೆ ಎಲ್ಲವನ್ನು ಮಾಡಿದ್ದ ʻಗಂಡಭೇರುಂಡ’ ಎಂಬ ಬಿರುದು ಹೊಂದಿದ್ದ ಕೆಂಪೇಗೌಡರ ಜಯಂತಿ ಸಂದಂರ್ಭದಲ್ಲಿ ಅವರಿಗೆ ನಮ್ಮೆಲ್ಲರ ನಮನಗಳು ಮುಂದೆ ನಾವೆಲ್ಲರೂ ಕೆಂಪೇಗೌಡರ ದೂರದರ್ಶಿತ್ವ ಮತ್ತು ಬಹುತ್ವದ ಮನೋ ಧರ್ಮದೊಂದಿಗೆ ಬದುಕುತ್ತಾ ನಾಡಿನ ಖ್ಯಾತಿಯನ್ನು ಎತ್ತಿ ಹಿಡಿಯೋಣ.
– ಲೇಖಕರು ಇತಿಹಾಸ ಉಪನ್ಯಾಸಕರು, ತುಮಕೂರು