Site icon Vistara News

Kempe gowda | 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತ ಎಂದ ಸಿಎಂ

Kempegowda

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ೧೦೮ ಅಡಿ ಎತ್ತರದ ಕೆಂಪೇಗೌಡರ ಭವ್ಯ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳು ಬಳಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ – Statue of Prosperity ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ ೧೧ರಂದು ಪ್ರಗತಿಯ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅ. ೨೧ರಿಂದ ನವೆಂಬರ್‌ ೭ರವರೆಗೆ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಯಲಿದೆ.

ಎಲ್ಲ ಭೂಮಿಗೂ ಪುಣ್ಯ ಸಿಗಲಿ
ನಮ್ಮ ದೇಶ ಹತ್ತು ಹಲವಾರು ಪ್ರಭುಗಳನ್ನು, ಸಾಮ್ರಾಜ್ಯಗಳನ್ನು ಕಂಡಿದೆ. ಬೇರೆ ರಾಜ್ಯಗಳ ರಾಜರುಗಳಲ್ಲಿ ಹೆಚ್ಚಿನವರು ಯುದ್ಧದಲ್ಲಿ, ಸಾಮ್ರಾಜ್ಯ ವಿಸ್ತರಣೆಯಲ್ಲಿ ಸಮಯ ಕಳೆದರು. ಆದರೆ, ಕರ್ನಾಟಕದ ಇತಿಹಾಸ ವಿಭಿನ್ನವಾಗಿದೆ. ನಮ್ಮ‌ ಪೂರ್ವಜರು ನಾಡು ಕಟ್ಟುವ ಕೆಲಸ ಮಾಡಿದ್ದಾರೆ. ಇರುವ ಜಾಗದಲ್ಲೇ ಉತ್ತಮ ನಗರ ನಿರ್ಮಾಣ ಮಾಡಿದ್ದಾರೆ. ಹೊಯ್ಸಳರು, ಕದಂಬರು, ರಚನಾತ್ಮಕವಾಗಿ ನಾಡು ಕಟ್ಟಿದ್ದಾರೆ. ಪ್ರಗತಿಪರ ಚಿಂತನೆ ಇರುವ ಆಧುನಿಕತೆಯನ್ನು ಮೆರೆದಿದ್ದಾರೆ. ಇಂಥವರ ಸಾಲಿನಲ್ಲಿ ಕೆಂಪೇಗೌಡರು ಅಗ್ರಮಾನ್ಯರಾಗಿ ನಿಲ್ಲುತ್ತಾರೆʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿಹೇಳಿದರು.

ʻʻಕೆಂಪೇಗೌಡರು ಗಡಿ ಗೋಪುರವನ್ನು ನಿರ್ಮಿಸಿದ್ದಾರೆ. ವಾಣಿಜ್ಯ ಚಟುವಟಿಕೆಗೆ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ. ವೃತ್ತಿ ಮತ್ತು ಸಮಾಜದ ಆಧಾರದ ಮೇಲೆ ಪೇಟೆ ನಿರ್ಮಾಣ ಮಾಡಿದ್ದಾರೆ. ಅಂದೇ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟಿದ್ದರು. ಹೊಸ ತಂತ್ರಜ್ಞಾನವನ್ನು ಆವತ್ತೇ ನೀಡಿದ್ದರುʼʼ ಎಂದು ಹೇಳಿದ ಬೊಮ್ಮಾಯಿ, ಒಬ್ಬ ಮುತ್ಸದ್ದಿ ರಾಜ ಹೇಗೆ ಪ್ರಭಾವ ಬೀರಬಲ್ಲ, ಕಾಲ, ಗಡಿಯ ಆಚೆಗೂ ಹೇಗೆ ಬದುಕಬಲ್ಲ ಅನ್ನೋದಕ್ಕೆ ಕೆಂಪೇಗೌಡರೇ ನಿದರ್ಶನ ಎಂದರು.

ಮೃತ್ತಿಗೆ ಸಂಗ್ರಹಿಸುವ ವಾಹನಗಳಿಗೆ ಚಾಲನೆ ನೀಡಲಾಯಿತು

ʻʻಜನಕಲ್ಯಾಣದ ಮೂಲಕವೇ ಇತಿಹಾಸ ನಿರ್ಮಿಸಿದ ಕೆಂಪೇಗೌಡರೆಂಬ ಇತಿಹಾಸ ಪುರುಷನಿಗೆ ನ್ಯಾಯ ಕೊಡಿಸಲು ನಮ್ಮ ನಾಯಕ ಯಡಿಯೂರಪ್ಪ ತೀರ್ಮಾನ ಮಾಡಿದ್ದರ ಫಲವೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಭವ್ಯ ಪ್ರತಿಮೆʼʼ ಎಂದರು ಬೊಮ್ಮಾಯಿ. ಸಮುದಾಯದ ನಾಯಕರಾದ ಅಶ್ವಥ್ ನಾರಾಯಣ, ಅಶೋಕ್, ಸುಧಾಕರ್ ಎಲ್ಲರೂ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಕನ್ನಡ ನಾಡಿನ ಪುಣ್ಯದ ಮಣ್ಣು ಕೆಂಪೇಗೌಡರ ಪಾದ ಸೇರಬೇಕು ಎಂಬ ಕಾರಣಕ್ಕಾಗಿ ಎಲ್ಲ ಕಡೆಯಿಂದ ಮೃತ್ತಿಕೆಯನ್ನು ತರಿಸುತ್ತಿದ್ದೇವೆ. ಇದರಿಂದ ನಾಡಿನ ಎಲ್ಲಾ ಭೂಮಿಗೆ ಪುಣ್ಯ ಸಿಗಲಿ ಅಂತ ಭಾವಿಸುತ್ತೇನೆ ಎಂದರು ಬೊಮ್ಮಾಯಿ.

ಕೆಂಪೇಗೌಡರ ಪ್ರತಿಮೆಗೆ ʻಪ್ರಗತಿಯ ಪ್ರತಿಮೆʼ ಎಂದು ಹೆಸರಿಡಲಾಗಿದೆ. ಅಮೆರಿಕದಲ್ಲಿ ಸ್ಟಾಚ್ಯು ಆಫ್ ಲಿಬರ್ಟಿ‌ ಇದೆ. ಪ್ರಧಾನಿ ಮೋದಿಯವರು ಗುಜರಾತಿನಲ್ಲಿ ವಲ್ಲಬಾಬಾಯಿ ಪಟೇಲರ ಪ್ರತಿಮೆಗೆ ಸ್ಟ್ಯಾಚು ಆಫ್ ಯೂನಿಟಿ (ಏಕತಾ ಪ್ರತಿಮೆ) ಅಂತ ಹೆಸರಿಟ್ಟರು. ಈಗ ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಹೀಗೆ ನಿರ್ಮಾಣವಾಗಿರುವ ಈ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿ ಎಂದರು ಮುಖ್ಯಮಂತ್ರಿ.

ನೋಡಪ್ಪಾ ಇವರೇ ಕೆಂಪೇಗೌಡರು ಅಂತ ತೋರಿಸಬೇಕು
ʻʻಕೆಂಪೇಗೌಡರ ಹೆಸರಿನಲ್ಲಿ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿದೆ. ವಿದೇಶಿಯರು ಬಂದು ಯಾರಪ್ಪಾ ಕೆಂಪೇಗೌಡರು ಅಂತ ಕೇಳಿದರೆ ʻಇವರೇ ನೋಡಪ್ಪ ನಮ್ಮ ಕೆಂಪೇಗೌಡರುʼʼ ಅಂತ ಅವರ ಇತಿಹಾಸ ತಿಳಿಸೋ ಕೆಲಸ ಮಾಡುತ್ತೇವೆ. ಇದರಿಂದ ಬಂದವರು ಅವರಿಗೆ ಕೈಮುಗಿದು ಬರುವ ಕೆಲಸ ಮಾಡುತ್ತೇವೆʼʼ ಎಂದರು.

ಇವತ್ತು ಸೂಕ್ತ ಗೌರವ ಸಿಕ್ಕಿದೆ
ʻʻಕೆಂಪೇಗೌಡರಿಗೆ ಸರಿಯಾದ ಗೌರವ ಕೊಡಬೇಕಾಗಿದ್ದು ನಮ್ಮ ಕರ್ತವ್ಯವಾಗಿತ್ತು. ಈ ಹಿಂದೆ ಕೆಂಪೇಗೌಡರಿಗೆ ಆ ಗೌರವ ಯಾಕೆ ಸಿಕ್ಕಿಲ್ಲ ಅನ್ನುವ ವಿಚಾರ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಇವತ್ತು ಕೆಂಪೇಗೌಡರಿಗೆ ಸರಿಯಾದ, ಸೂಕ್ತವಾದ ಗೌರವ ಸಿಕ್ತಿದೆʼʼ ಎಂದು ಕಾಂಗ್ರೆಸ್‌ ಕಾಲೆಳೆದರು.

ಆದಷ್ಟು ಬೇಗ ವಿಧಾನ ಸೌಧದಲ್ಲೂ ಕೆಂಪೇಗೌಡರ ಪ್ರತಿಮೆ ಬರಲಿ
ವಿಧಾನಸೌಧದ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರ ಭರವಸೆ ಕೊಟ್ಟಿದೆ. ಆದಷ್ಟು ಬೇಗ ವಿಧಾನಸೌಧದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಲಿ ಎಂದು ಆದಿಚುಂಚನಗಿರಿ ಮಠದ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.

ಕೆಂಗಲ್ ಹನುಮಂತಯ್ಯನವರ ಪ್ರತಿಮೆ ವಿಧಾನಸೌಧದ ಪಶ್ಚಿಮ ಭಾಗದಲ್ಲಿದೆ. ಒಂದು ಭಾಗದಲ್ಲಿ ಕೆಂಪೇಗೌಡರದ್ದು, ಮತ್ತೊಂದು ಭಾಗದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಿಸಲಿ ಎಂದು ಬಯಸಿದರು.

ʻʻಇತಿಹಾಸ ಸೃಷ್ಟಿಸಿದವರ ಬಗ್ಗೆ ನಾವು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಬೇಕು. 15ನೇ ಶತಮಾನದಲ್ಲಿ ಕೆಂಪೇಗೌಡರು ಈ ನಾಡಿನಲ್ಲಿ ಸರ್ವಜನಾಂಗದ ಬೆಂಗಳೂರು ಕಟ್ಟಿದ ಸಂದರ್ಭದಲ್ಲಿ ಕೊಲಂಬಸ್ ಅಮೆರಿಕ ಪತ್ತೆ ಮಾಡಲು ಹೊರಟಿದ್ದʼʼ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪ್ರತಿಮೆ ವಿಶೇಷ
ʻʻಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕೊಡುಗೆಯನ್ನು ಈ ನಾಡು ಎಂದಿಗೂ ಮರೆಯಲ್ಲ. ಕೆಂಪೇಗೌಡರು ಹಲವಾರು ಕೆರೆಗಳನ್ನು ನಿರ್ಮಿಸಿದರು. ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿದರು. ಇಂದು ಬೆಂಗಳೂರು ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವಾಗಿದೆʼʼ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ʻʻಜಗತ್ತಿನ ಯಾವ ನಗರದ ವಿಮಾನ ನಿಲ್ದಾಣಗಳಲ್ಲೂ ಆ ನಗರ ನಿರ್ಮಾತೃಗಳ ಪ್ರತಿಮೆ ಇಲ್ಲ. ಬೆಂಗಳೂರಿಗೆ ಅಂತ ವಿಶೇಷತೆ ಒದಗಲಿದೆʼʼ ಎಂದರು.

ಹಳ್ಳಿ ಹಳ್ಳಿಗೆ ಬರಲಿದೆ ಮೃತ್ತಿಕೆ ವಾಹನ
ರಾಜ್ಯದ ಹಳ್ಳಿಹಳ್ಳಿಗಳಿಂದ ಮೃತ್ತಿಕೆ ಸಂಗ್ರಹಿಸಲಾಗುತ್ತಿದೆ. ಈ ರೀತಿ ಮೃತ್ತಿಕೆ ಸಂಗ್ರಹಿಸುವ ವಾಹನಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಕೆಂಪೇಗೌಡರ ಪ್ರತಿಮೆ ಮುಂಭಾಗದಲ್ಲಿ ನಿರ್ಮಾಣವಾಗಲಿರುವ ೨೩ ಎಕರೆ ವಿಶಾಲವಾದ ಥೀಮ್‌ ಪಾರ್ಕ್‌ನಲ್ಲಿ ಈ ಮೃತ್ತಿಕೆಯನ್ನು ಬಳಸಾಗುತ್ತದೆ ಎಂದು ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ʻʻಗ್ರಾಮಗಳಿಗೆ ವಾಹನಗಳು ಬಂದಾಗ ಪುರ್ಣಕುಂಭದೊಂದಿಗ ಸ್ವಾಗತ ಮಾಡಿʼʼ ಎಂದು ಮನವಿ ಮಾಡಿದರು.

ಕೆಂಪೇಗೌಡರಿಗೆ ಮಹತ್ವ ಯಾಕೆಂದರೆ…
ʻʻಕೆಲವರು ಕೆಂಪೇಗೌಡರ ಬಗ್ಗೆ‌ ಹಗುರವಾಗಿ ಮಾತನಾಡುತ್ತಾರೆ. ಅವರೇನು ಚಕ್ರವರ್ತಿನಾ? ಅವರಿಗ್ಯಾಕೆ ಅಷ್ಟೊಂದು ಮಹತ್ವ ಅಂತಾರೆ. ಎಷ್ಟು ದೊಡ್ಡವರು ಅನ್ನೋದು ಮುಖ್ಯವಲ್ಲ. ಎಂಥ ಕೆಲಸ ಮಾಡಿದಾರೆ ಅನ್ನೋದು ಮುಖ್ಯ. ಈ ನೀರು, ಈ ನೆಲ ಕೆಂಪೇಗೌಡರ ಆಶೀರ್ವಾದದಿಂದ ಬಂದಿದೆ. ಪ್ರತಿಯೊಬ್ಬರೂ ಅವರಿಗೆ ನಮನ ಸಲ್ಲಿಸಲೇಬೇಕುʼʼ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ʻʻಕಳೆದ 75 ವರ್ಷಗಳಲ್ಲಿ ಇಂತಹ ಕಾರ್ಯಕ್ರಮ ಯಾಕೆ ಮಾಡಿಲ್ಲ? ಈ 75 ವರ್ಷಗಳಲ್ಲಿ ಕೆಂಪೇಗೌಡರ ಒಂದೂ ಪ್ರತಿಮೆ ಮಾಡಿಲ್ಲ? ಹಲವು ಸರ್ಕಾರಗಳು ಬಂದು ಹೋದರೂ ಕೆಂಪೇಗೌಡರಿಗೆ ಇಂತಹ ಗೌರವ ಸಿಕ್ಕಿಲ್ಲ?ʼʼ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರು, ಬೊಮ್ಮಾಯಿ ಅವರು ಈಗ ಕೆಂಪೇಗೌಡರಿಗೆ ನಿಜವಾದ ಗೌರವ, ನಮನ ಸಲ್ಲಿಸಿದ್ದಾರೆ. ಅವರಿಬ್ಬರಿಗೂ ಒಕ್ಕಲಿಗ ಸಮುದಾಯದ ವತಿಯಿಂದ ನಾನು ಅಭಿನಂದನೆ ಸಲ್ಲಿಸ್ತೇನೆ ಎಂದರು.

Exit mobile version