ಬೆಂಗಳೂರು: ಮತದಾರರ ಮಾಹಿತಿ ಕಳವು ಮತ್ತು ಮಾರಾಟ ಮಾಡಿದ (voter data) ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ನ ಸಹೋದರ ಕೆಂಪೇಗೌಡ ಅರೆಸ್ಟ್ ಆಗಿದ್ದಾನೆ. ಮೂರು ದಿನದ ಹಿಂದೆ ಚಿಲುಮೆ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಈ ಇಬ್ಬರು ಸಹೋದರರು ನಾಪತ್ತೆಯಾಗಿದ್ದರು. ಪೊಲೀಸರು ಅವರ ಬಂಧನಕ್ಕಾಗಿ ನಾನಾ ತಂತ್ರಗಳನ್ನು ಹೆಣೆದರೂ ತಪ್ಪಿಸಿಕೊಂಡಿದ್ದರು ಸೋದರರು. ಈ ಪೈಕಿ ತಮ್ಮ ಕೆಂಪೇಗೌಡನನ್ನು ಪೊಲೀಸರು ಸಾಹಸಿಕ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಕಿ.ಮೀ. ಚೇಸ್ ಮಾಡಿ ಬಂಧಿಸಿದ್ದಾರೆ.
ಚಿಲುಮೆ ಸಂಸ್ಥೆಯ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಈತ ಶನಿವಾರ ಹಗಲಿಡೀ ತನ್ನ ತಾಣಗಳನ್ನು ಬದಲಾಯಿಸುತ್ತಿದ್ದ. ಪೊಲೀಸರು ಗುಪ್ತವಾಗಿಯೇ ಆತನ ಜಾಡನ್ನು ತಿಳಿದು ಬೆನ್ನಟ್ಟುತ್ತಿದ್ದರು. ಅಂತಿಮವಾಗಿ ಆತ ಶಿಡ್ಲಘಟ್ಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಅಣ್ಣ, ಪ್ರಧಾನ ಆರೋಪಿ ರವಿಕುಮಾರ್‌ಗಾಗಿನ ಹುಡುಕಾಟ ಈಗ ಇನ್ನಷ್ಟು ತೀವ್ರಗೊಳ್ಳಲಿದೆ.
ಭಾರಿ ಹುಡುಕಾಟ, ಪ್ರಯತ್ನ ಮತ್ತು ಚೇಸ್
ಹಗರಣದ ಕಿಂಗ್ ಕೃಷ್ಣಪ್ಪ ರವಿಕುಮಾರ್‌ನ ಸೋದರನಾಗಿರುವ ಕೆಂಪೇ ಗೌಡನ ಬಂಧನದ ಕಥೆ ರೋಚಕವಾಗಿದೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ರವಿ ಕುಮಾರ್ ಮತ್ತು ಕೆಂಪೇ ಗೌಡ ಸ್ವಲ್ಪ ಕಾಲ ಜತೆಗಿದ್ದಂತೆ ಕಂಡುಬಂದಿದೆ. ಆದರೆ, ಬಳಿಕ ಒಟ್ಟಿಗಿದ್ದರೆ ಸಿಕ್ಕಿಬೀಳುತ್ತೇವೆ ಎಂದು ಬೇರೆ ಬೇರೆ ರೂಟ್‌ನಲ್ಲಿ ಹೋಗಿ ಅಡಗಿಕೊಂಡಿದ್ದಾರೆ. ಆದರೂ ಅವರಿಬ್ಬರ ಮಧ್ಯೆ ಸಂಪರ್ಕವಿತ್ತು ಎನ್ನುವುದು ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ.
ಕೆಂಪೇಗೌಡನ ಸಿಡಿಆರ್ ಪರಿಶೀಲನೆ ನಡೆಸಿದರೂ ಪೊಲೀಸರಿಗೆ ಯಾವುದೇ ಕ್ಲೂ ಸಿಗಲಿಲ್ಲ. ಹೀಗಾಗಿ ಪೊಲೀಸರು ಒತ್ತಡ ಹೇರುವ ಉದ್ದೇಶದಿಂದ ಪತ್ನಿ ಶ್ರುತಿಯನ್ನು ಕರೆದುಕೊಂಡು ಬಂದಿದ್ದರು. ಟಿ ಬೇಗೂರಿನ ತೋಟದ ಮನೆಯಲ್ಲಿ ದಾಖಲೆಗಳನ್ನು ಇಟ್ಟ ಬಗ್ಗೆ ಮಾಹಿತಿ ಪಡೆದು ಆಕೆಯನ್ನು, ಆಕೆಯ ಪುಟ್ಟ ಮಗುವಿನ ಜತೆಗೇ ಕರೆದುಕೊಂಡು ಹೋಗಿದ್ದರು. ಈ ದೃಶ್ಯಗಳನ್ನು ನೋಡಿಯಾದರೂ ಆತ ಬಂದಾನು ಎನ್ನುವುದು ಪೊಲೀಸರ ಲೆಕ್ಕಾಚಾರ ಆಗಿತ್ತು.
ಆದರೆ, ಕೆಂಪೇ ಗೌಡ ಇಂಥ ಪಟ್ಟುಗಳಿಗೆ ಕರಗಲಿಲ್ಲ. ಜತೆಗೆ ಪತ್ನಿ ಶ್ರುತಿ ಕೂಡಾ ನನಗೇನೂ ಗೊತ್ತೇ ಇಲ್ಲ ಎಂಬಂತೆ ಮಾತನಾಡಿದ್ದರು. ಆದರೂ ಕೆಂಪೇ ಗೌಡ ತನ್ನ ಆಪ್ತ ಸ್ನೇಹಿತನ ಮನೆಗೆ ಹೋಗಿರಬಹುದು ಎಂಬ ಸಣ್ಣ ಸುಳಿವನ್ನು ಆಕೆ ಬಿಟ್ಟುಕೊಟ್ಟಿದ್ದರು. ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಆತನ ಆಪ್ತ ಸ್ನೇಹಿತನ ನಂಬರ್ ಪಡೆದುಕೊಂಡು ಬೆನ್ನಟ್ಟಲು ಶುರು ಮಾಡಿದರು.
ಆಪ್ತ ಸ್ನೇಹಿತನನ್ನು ಹುಡುಕಿಕೊಂಡು ಪೊಲೀಸರು ನೆಲಮಂಗಲಕ್ಕೆ ಹೋಗಿದ್ದರು. ಅಲ್ಲಿ ಗೆಳೆಯನಿದ್ದ. ಆದರೆ, ಕೆಂಪೇ ಗೌಡ ಇರಲಿಲ್ಲ. ಕೆಂಪೇಗೌಡ ಕಾರನ್ನು ಅಲ್ಲಿ ಬಿಟ್ಟು ಓಡಿ ಹೋಗಿದ್ದ. ಆಪ್ತ ಗೆಳೆಯನನ್ನೇ ಗುರಾಣಿಯಾಗಿಟ್ಟುಕೊಂಡು ಹೊರಟ ಪೊಲೀಸರಿಗೆ ಕೆಂಪೇಗೌಡ ಇನ್ನೊಬ್ಬ ಸ್ನೇಹಿತನ ಮನೆಯಲ್ಲಿ ಇರುವ ಬಗ್ಗೆ ಕ್ಲೂ ಸಿಕ್ಕಿತು.
ಆ ಮನೆ ಇದ್ದಿದ್ದು ತುಮಕೂರು ತಾಲೂಕಿನ ಗುಬ್ಬಿಯಲ್ಲಿ. ಪೊಲೀಸರು ಅಲ್ಲಿಗೆ ಧಾವಿಸಿದರಾದರೂ ಚಾಣಾಕ್ಷ ಕೆಂಪೇ ಗೌಡ ಅಲ್ಲಿಂದಲೂ ಪರಾರಿಯಾಗಿದ್ದ. ಆತನನ್ನು ಬೆನ್ನಟ್ಟಿ ತುಮಕೂರು ಮಾರ್ಗವಾಗಿ ಡಾಬಸ್ ಪೇಟೆಗೆ ಬಂದರು. ಆಗ ಅವರಿಗೆ ಸಿಕ್ಕಿದ ಮಾಹಿತಿ ಕೆಂಪೇಗೌಡ ಡಾಬಸ್ ಪೇಟೆಯಲ್ಲಿದ್ದಾನೆ ಎಂದು!
ಅಲ್ಲಿ ಸ್ನೇಹಿತರು ಆತನನ್ನು ಬಚ್ಚಿಟ್ಟಿದ್ದರು. ಇತ್ತ ಪೊಲೀಸರು ಮನೆಯತ್ತ ಧಾವಿಸಿ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಕೆಂಪೇಗೌಡ ಅಲ್ಲಿಂದಲೂ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಈ ಬಾರಿ ಅವನ ಪ್ರಯತ್ನ ಫಲಿಸಲಿಲ್ಲ. ಸುಮಾರು ಒಂದು ಕಿಮೀ. ದೂರಕ್ಕೆ ಚೇಸ್ ಮಾಡಿದ ಪೊಲೀಸರು ಆತನನ್ನು ಹಿಡಿದೇ ಬಿಟ್ಟಿದ್ದಾರೆ.
ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಚೈತನ್ಯ ಹಾಗೂ ವಿವೇಕ ನಗರ ಇನ್ಸ್ ಪೆಕ್ಟರ್ ಶಾಂತಕುಮಾರ್ ನೇತೃತ್ವದ ತಂಡ ಈ ಸಾಹಸಿಕ ಕಾರ್ಯಾಚರಣೆಯನ್ನು ನಡೆಸಿತ್ತು. ಈ ನಡುವೆ ಪರಾರಿಯಾಗುವ ಮುನ್ನ ಕೆಂಪೇಗೌಡ ನೆಲಮಂಗಲದಲ್ಲಿ ತನ್ನ ಮೊಬೈಲನ್ನು ನೆಲಕ್ಕೆ ಹೊಡೆದಿದ್ದ. ಈಗ ಪೊಲೀಸರು ಆ ಮೊಬೈಲಿನ ಚೂರುಗಳನ್ನು ಜೋಡಿಸುತ್ತಿದ್ದಾರೆ.
ಈಗ ಕೆಂಪೇಗೌಡನ ಪತ್ನಿ ಶ್ರುತಿ ಮಾತ್ರವಲ್ಲ ರವಿಕುಮಾರ್ ಪತ್ನಿ ಐಶ್ವರ್ಯ ಕೂಡಾ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಐಶ್ವರ್ಯ ನೀಡುವ ಒಂದು ಕ್ಲೂ ರವಿಕುಮಾರ್‌ನನ್ನೂ ಪೊಲೀಸ್ ಬಲೆಗೆ ಬೀಳಿಸಲಿದೆ. ಹಾಗಂತ ಪೊಲೀಸರು ಅದೊಂದನ್ನೇ ಕಾಯುತ್ತಿಲ್ಲ. ಬೇರೆ ಬೇರೆ ಮೂಲಗಳಿಂದ ಹುಡುಕಾಟ ಜೋರಾಗಿದೆ.
ಇದನ್ನೂ ಓದಿ | Voter data | ಮಾವನ ಮನೆಯಲ್ಲಿ ದಾಖಲೆ ಬಚ್ಚಿಟ್ಟು ಪರಾರಿ ಆದ ರವಿಕುಮಾರ್ ನಿಜಕ್ಕೂ ಯಾರು? ಇಲ್ಲಿದೆ ಸಮಗ್ರ ವಿವರ