ಬೆಂಗಳೂರು: ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದ ರೂಪುರೇಷೆ ಕುರಿತು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಉನ್ನತ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ಶ್ರೀಗಳನ್ನು ಭೇಟಿ ಮಾಡಿದ ಸಚಿವರು, ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಚಿಂತನೆ ಮತ್ತು ಆಶಯಗಳನ್ನು ಹಂಚಿಕೊಂಡರು. ಶ್ರೀಗಳ ಜತೆ ಸುಮಾರು ಎರಡು ತಾಸು ವಿಚಾರ ವಿನಿಮಯ ನಡೆಸಿದ ಸಚಿವರು, ಕಾರ್ಯಕ್ರಮದ ಯಶಸ್ಸಿಗೆ ಮಾರ್ಗದರ್ಶನ ಕೋರಿ, ಕಾರ್ಯಕ್ರಮಕ್ಕೆ ಜನರನ್ನು ಸಮಾಗಮಗೊಳಿಸುವ ಕುರಿತು ಚರ್ಚಿಸಿದರು.
ಇದನ್ನೂ ಓದಿ | SCST ಮೀಸಲು| ಒಕ್ಕಲಿಗರಿಂದಲೂ ಮೀಸಲು ಹೆಚ್ಚಳ ಬೇಡಿಕೆ: 4%ನಿಂದ 12ಕ್ಕೆ ಏರಿಸಿ ಎಂದ ನಿರ್ಮಲಾನಂದನಾಥ ಶ್ರೀ
ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು, ಕಾರ್ಯಕ್ರಮದ ಯಶಸ್ಸಿಗೆ ಮಠ ಮತ್ತು ಸಮಾಜದ ವತಿಯಿಂದ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮೊದಲು ಸಚಿವರು 20ಕ್ಕೂ ಹೆಚ್ಚು ಪ್ರಮುಖ ಒಕ್ಕಲಿಗ ಸಂಘಟನೆಗಳ ಪ್ರಮುಖರ ಜತೆಯೂ ಕಾರ್ಯಕ್ರಮ ಕುರಿತು ಸಭೆ ನಡೆಸಿದರು.
ಅ.21 ರಂದು ರಥಗಳಿಗೆ ಚಾಲನೆ
ನ.11ರ ಕಾರ್ಯಕ್ರಮದ ಅಂಗವಾಗಿ ನಾಡಿನೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ನಡೆಯಲಿದೆ. ಇದಕ್ಕೆ ಸಿದ್ಧವಾಗಿರುವ ವಿಶೇಷ ರಥಗಳಿಗೆ ಅ.21ರಂದು ವಿಧಾನಸೌಧದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಂಡು ಸಾಮೂಹಿಕ ಸಂಭ್ರಮದಂತೆ ಆಚರಿಸಬೇಕು ಎಂದರು.
ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ
ಇದಕ್ಕೂ ಮೊದಲು ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆ ಅಂಗವಾಗಿ ರಾಜ್ಯಾದ್ಯಂತ ನಡೆಯಲಿರುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಯಶಸ್ಸಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಇದನ್ನೂ ಓದಿ | Bharat Jodo | ಯಾತ್ರೆ ಮುಗಿದ ಮೇಲೆ ಜೋಡೆತ್ತುಗಳು ಒಂದಾಗಿ ಉಳಿಯಲಿವೆಯೇ?