Site icon Vistara News

Govt School : ಕಾಸರಗೋಡು ಕನ್ನಡ ಶಾಲೆಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕೇರಳ ಹೈಕೋರ್ಟ್‌ ನಿರ್ದೇಶನ

kasaragodu aduru govt school and kerala high court

ಬೆಂಗಳೂರು: ಗಡಿನಾಡು ಕೇರಳದ ಕಾಸರಗೋಡಿನ ಅಡೂರಿನ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ (Govt School) ಕನ್ನಡ ವಿಷಯಕ್ಕೆ (Kannada Subject) ಮಲಯಾಳಂ ಶಿಕ್ಷಕಿಯನ್ನು ನೇಮಿಸಿ ಅಲ್ಲಿನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್‌ (Kerala High Court) ತಡೆ ನೀಡಿದೆ. ಈ ಮೂಲಕ ಕನ್ನಡ ಭಾಷೆ (Kannada Language) ಮಕ್ಕಳಿಗೆ ಸಂಬಂಧಪಟ್ಟಂತೆ ಶಿಕ್ಷಕರ ನೇಮಕಾತಿ (Recruitment of Teachers) ವಿವಾದಕ್ಕೆ ತೆರೆಬಿದ್ದಿದೆ.

ಕೂಡಲೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಆದೇಶವನ್ನು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಚಿವ ಶಿವರಾಜ್‌ ತಂಗಡಗಿ ಸ್ವಾಗತಿಸಿದ್ದಾರೆ. ಅಲ್ಲದೆ, ಇದೊಂದು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ.

ಜೂನ್‌ 19ರಂದು ಪ್ರತಿಭಟನೆ ಮಾಡಿದ್ದ ಅಡೂರು ಶಾಲೆಯ ವಿದ್ಯಾರ್ಥಿಗಳು

ಕಾಸರಗೋಡಿನ ಅಡೂರು ಶಾಲೆಗೆ ಮಲೆಯಾಳ ಶಿಕ್ಷಕಿ ನೇಮಕದಿಂದಾಗಿ ಸುಮಾರು ಎರಡು ತಿಂಗಳಿಂದ ಕನ್ನಡ ವಿಭಾಗದ ಮಕ್ಕಳಿಗೆ ಸಮಾಜ ವಿಜ್ಞಾನ ಪಾಠವೇ ಇಲ್ಲ ಎಂಬಂತಾಗಿತ್ತು. ಕಳೆದ ವರ್ಷ ಉದುಮ ಮತ್ತು ಹೊಸಕೋಟೆ ಸರ್ಕಾರಿ ಪ್ರೌಢಶಾಲೆಗಳ ಕನ್ನಡ ವಿಭಾಗಗಳಿಗೆ ಮಲಯಾಳ ಭಾಷೆ ಮಾತ್ರ ತಿಳಿದಿರುವ ಸಮಾಜ ವಿಜ್ಞಾನ ಶಿಕ್ಷಕರನ್ನು ನೇಮಿಸಲಾಗಿತ್ತು. ಉದುಮ ಪ್ರೌಢಶಾಲೆಗೆ ಕೂಡ ಇದೇ ರೀತಿ ಶಿಕ್ಷಕಿ ನೇಮಕಗೊಂಡಿದ್ದರು. ಕೇರಳ ಲೋಕಸೇವಾ ಆಯೋಗ ಈ ನೇಮಕಾತಿ ನಡೆಸಿತ್ತು. ಉದುಮ ಹಾಗೂ ಅಡೂರು ಶಾಲೆಗಳಿಗೆ ಮಲಯಾಳ ಭಾಷಿಕ ಶಿಕ್ಷಕರ ನೇಮಕವಾದಾಗ ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ಗಡಿನಾಡಿನ ಕನ್ನಡ ಹೋರಾಟಗಾರರೆಲ್ಲರು ಪ್ರತಿಭಟನೆ ನಡೆಸಿದ್ದರು. ಜತೆಗೆ ಈ ಕುರಿತು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕಸಾಪ ಸಂತಸ

ಕನ್ನಡ ಶಾಲೆಗೆ ಮಲೆಯಾಳಂ ಭಾಷಿಕ ಶಿಕ್ಷಕರಿರುವ ಸ್ಥಾನಕ್ಕೆ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನು ನೇಮಿಸುವಂತೆ ಕೇರಳ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ‌ ಹೇಳಿದ್ದಾರೆ.

ಇದೀಗ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಂ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿರುವುದು ಗಡಿನಾಡ ಕನ್ನಡಿಗರ ಹೋರಾಟಕ್ಕೆ ದಕ್ಕಿದ ಜಯವಾಗಿದೆ. ಅಲ್ಲದೆ, ಪ್ರಾದೇಶಿಕ ಭಾಷೆಗೆ ನ್ಯಾಯಾಲಯ ನೀಡಿದ ಗೌರವವಾಗಿದೆ. ಈ ಮೂಲಕ ಅನೇಕ ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರಕ್ಕೆ, ಕೇರಳ ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕಸೇವಾ ಆಯೋಗಕ್ಕೆ ‌ಛಾಟಿ ಬೀಸಿದಂತಾಗಿದೆ ಎಂದು ಡಾ. ಮಹೇಶ್‌ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Operation Hasta : ಸಿಎಂ, ಡಿಸಿಎಂ ಭೇಟಿ ಮಾಡಿದ ರೇಣುಕಾಚಾರ್ಯ; ದಾವಣಗೆರೆಗೆ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ?

ಕನ್ನಡಿಗರ ಹೋರಾಟಕ್ಕೆ ಸಂದ ಜಯ- ಸಚಿವ ಶಿವರಾಜ್ ತಂಗಡಗಿ

ಕೇರಳ ಹೈಕೋರ್ಟ್‌ ನೀಡಿರುವ ಈ ತೀರ್ಪಿನಿಂದ ಮಾತೃ ಭಾಷಾ ಶಿಕ್ಷಣದ ವಾದಕ್ಕೆ ಕಾನೂನು ಮಾನ್ಯತೆ ದೊರೆತಂತಾಗಿದೆ. ಇದೊಂದು ಐತಿಹಾಸಿಕ ತೀರ್ಪಾಗಿದೆ. ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಸಂದ ಜಯ ಎಂದು ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version