Site icon Vistara News

KG, DJ Halli Case: ತನ್ವೀರ್‌ ಸೇಠ್‌ ಪತ್ರಕ್ಕೆ ಸಿ.ಎಂ ಇಬ್ರಾಹಿಂ ಬೆಂಬಲ ; ತುಂಬ ಜನ ಅಮಾಯಕರು ಒಳಗಿದ್ದಾರೆ ಎಂದ JDS ಅಧ್ಯಕ್ಷ

CM Ibrahim

ಬೆಂಗಳೂರು: 2019ರಲ್ಲಿ ನಡೆದ ಬೆಂಗಳೂರಿನ ಕೆಜಿ ಹಳ್ಳಿ, ಡಿ.ಜಿ ಹಳ್ಳಿ ಗಲಭೆಯಲ್ಲಿ (KG, DJ Halli Case) ಕೆಲವು ಅಮಾಯಕರು ಜೈಲಿನಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮೈಸೂರಿನ ಶಾಸಕ ತನ್ವೀರ್‌ ಸೇಠ್‌ (Tanvir sait letter) ಅವರು ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಬೆಂಬಲಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಜಿ ಹಳ್ಳಿ-ಡಿಜೆ ಹಳ್ಳಿ ಮತ್ತು ಹುಬ್ಬಳ್ಳಿ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ʻʻಇದು ಮತೀಯ ಗಲಭೆಯಲ್ಲ ಎಂದು ಅವತ್ತೇ ರಿಪೋರ್ಟ್ ಬಂತು. ಪೊಲೀಸ್‌ ಸ್ಟೇಷನ್‌ಗೆ ಬೆಂಕಿ ಹಚ್ಚಿದವರು ಯಾರು ಎಂದರೆ ಅದೊಂದು ಡ್ರಗ್‌ ಮಾಫಿಯಾ. ಎರಡು ತಂಡಗಳು ಡ್ರಗ್ ಮಾಫಿಯಾ ನಡೆಸುತ್ತಿದ್ದವು. ಡ್ರಗ್ ಮಾರಾಟ ಮಾಡಲಾಗದವರು ಸ್ಟೇಷನ್ ಬೆಂಕಿ ಹಚ್ಚಿದರುʼʼ ಎಂದು ಘಟನೆಯ ಬಗ್ಗೆ ಹೊಸ ಆಯಾಮ ನೀಡಿದರು.

ʻʻಅಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಎನ್ಐಎಗೆ ಕೊಟ್ಟಿತು. ಎನ್‌ಐಎ ತನಿಖೆಗೆ ಕೊಟ್ಟಿದ್ದು ಯಾಕೆ? ಯಾವುದಾದ್ರೂ ಕೊಲೆ ನಡೆದಿತ್ತಾ?ʼʼ ಎಂದು ಪ್ರಶ್ನಿಸಿದ ಇಬ್ರಾಹಿಂ ಅವರು ಹುಬ್ಬಳ್ಳಿಯಲ್ಲೂ ಇದೇ ರೀತಿ ಆಯಿತು. ಅಲ್ಲಿ ಎಸ್‌ಪಿಗೆ ಧಿಕ್ಕಾರ ಕೂಗಿದರು ಎಂಬ ಕಾರಣಕ್ಕೆ ಎನ್‌ಐಎ ತನಿಖೆಗೆ ಒಪ್ಪಿಸಲಾಯಿತು. ಅವರು ಕಂಡವರನ್ನು ಬಂಧಿಸಿದರುʼʼ ಎಂದು ಇಬ್ರಾಹಿಂ ಹೇಳಿದರು.

ʻʻಎರಡೂ ಕಡೆಗಳಲ್ಲಿ ಅಮಾಯಕರನ್ನು ಒಳಗೆ ಹಾಕಿದ್ದಾರೆ. ತಪ್ಪು ಮಾಡಿದವರು ಇದ್ದರೆ ಅವರನ್ನು ಗಲ್ಲಿಗೆ ಹಾಕಿʼʼ ಎಂದು ಹೇಳಿದ ಅವರು, ʻʻಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದವರು ನಿಜಕ್ಕೂ ಗಲಾಟೆಯಲ್ಲಿ ಭಾಗವಹಿಸಿದ್ದರಾ ಎಂದು ಯಾರೂ ನೋಡುವುದಿಲ್ಲ. ಅಲ್ಲಿ ನೂರಕ್ಕೆ ನೂರರಷ್ಟು ಅಮಾಯಕರನ್ನು ವಶಕ್ಕೆ ಪಡೆದಿದ್ದಾರೆʼʼ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಕೆ.ಜಿ. ಹಳ್ಳಿ ಮತ್ತು ಡಿಜೆ ಹಳ್ಳಿ ಹಾಗೂ ಹುಬ್ಬಳ್ಳಿ ಎರಡೂ ಪ್ರಕರಣಗಳನ್ನು ಎನ್‌ಐಎ ಬೇಡ, ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಸತ್ಯಾಂಶ ಹೊರಗೆ ತನ್ನಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಸರ್ಕಾರ ಉರುಳಿಸುವುದು ಬರೀ ಊಹೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಿಂಗಪುರದಲ್ಲಿ ಕುಳಿತುಕೊಂಡು ಸರ್ಕಾರ ಉರುಳಿಸುವ ಯತ್ನ ಮಾಡುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆ ಕೇವಲ ಊಹಾತ್ಮಕ ಎಂದರು ಇಬ್ರಾಹಿಂ. ʻʻಕುಮಾರಸ್ವಾಮಿ ಅವರು ಕುಟುಂಬದ ಜೊತೆಗೆ ಹೋಗಿದ್ದಾರೆ. ಇವರಿಗೆ ಸರ್ಕಾರದ ಮೇಲೆ ಗಮನ ಕೇಂದ್ರೀಕರಿಸಲು ಆಗುತ್ತಿಲ್ಲ. ಹೀಗಾಗಿ ಊಹಾತ್ಮಕ ಕಥೆ ಹೇಳುತ್ತಿದ್ದಾರೆ. ಯಾರೂ ಸರ್ಕಾರ ಉರುಳಿಸುತ್ತಿಲ್ಲ. ಇದೆಲ್ಲ ಹುರುಳಿಲ್ಲದ ಮಾತುʼʼ ಎಂದು ಸಿ.ಎಂ ಇಬ್ರಾಹಿಂ ನುಡಿದರು.

ಬಿಜೆಪಿ ಜತೆ ಹೋಗ್ತೀವಿ ಅಂದೋರ್ಯಾರು?

ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ದಾರಿದ್ರ್ಯ ಬಿಜೆಪಿಗೆ ಬಂದಿಲ್ಲ ಎಂಬ ಮಾಜಿ ಸಚಿವ ಸುನಿಲ್‌ ಕುಮಾರ್‌ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ʻʻಅವರ ಜೊತೆ ಹೋಗ್ತೀವಿ ಅಂತ ಯಾರು ಹೇಳಿದ್ದು? ನಾವು ಯಾರ ಜೊತೆ ಕೂಡ ಹೋಗಲ್ಲ. ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆʼʼ ಎಂದು ನುಡಿದ ಇಬ್ರಾಹಿಂ, ʻʻಶಾಸಕಾಂಗದಲ್ಲಿ ವಿಪಕ್ಷವಾಗಿ ಕೆಲಸ ಮಾಡುವುದರಲ್ಲಿ ಬಿಜೆಪಿ ಜತೆ ಪರಸ್ಪರ ಸಹಕರಿಸುತ್ತೇವೆ ಎಂದು ಹೇಳಿದ್ದೇವೆʼʼ ಎಂದು ಸ್ಪಷ್ಟಪಡಿಸಿದರು. ʻʻಇಷ್ಟು ದೊಡ್ಡ ಪಕ್ಷವಾಗಿ ನಿಮಗೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಇನ್ನು ನಮಗೆ ಬುದ್ಧಿ ಹೇಳ್ತೀರಾʼʼ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: HD Kumaraswamy : ಬಿಜೆಪಿ ಕಡೆ JDS ನಡೆ; ಇನ್ನೊಂದು ಹೆಜ್ಜೆ ಇಟ್ಟ HDK, ಬೊಮ್ಮಾಯಿ ಜತೆ ಜಂಟಿ ಸುದ್ದಿಗೋಷ್ಠಿ

ಉಡುಪಿ ಕೇಸ್‌ ಬಿಜೆಪಿಗರಿಗೆ ವೋಟ್‌ ಬ್ಯಾಂಕ್‌

ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಶೂಟಿಂಗ್‌ ಮಾಡಲಾಗಿದೆ ಎಂಬ ಪ್ರಕರಣದ ಪ್ರತಿಭಟನೆ ವಿಚಾರ ಪ್ರಸ್ತಾಪಿಸಿದ ಅವರು, ಬಿಜೆಪಿಗರಿಗೆ ಇದು ವೋಟ್ ಬ್ಯಾಂಕ್ ಎಂದರು. ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಅವರಿಗೆ ಲೋಕಸಭಾ ವಿಷಯ. ಮಣಿಪುರದಲ್ಲಿ ಸುಡುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್‌ ಆಗುತ್ತಿದೆ. ನೀವು ಇಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಅನ್ನುತ್ತೀರಿ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಎಚ್ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ; ಸುನೀಲ್ ಕುಮಾರ್! ಸೋತರೂ ಬುದ್ಧಿ ಬಂದಿಲ್ಲ ಎಂದ ಶರವಣ

Exit mobile version