ಬೆಂಗಳೂರು: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ (KG DJ Halli case) ಕೇಸನ್ನು ಕೈಬಿಡುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆಯೇ? ಪ್ರಕರಣದಲ್ಲಿ ಬಂಧಿಯಾಗಿರುವವರು “ಅಮಾಯಕರು” ಎಂಬ ಹೇಳಿಕೆ ಹಿಂದೆ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್‌ಗೆ (Former Mayor Sampath Raj) ಕ್ಲೀನ್‌ಚಿಟ್ ನೀಡುವ ತಂತ್ರದ ಭಾಗವೇ ಎಂಬ ಸಂಶಯ ಇದೀಗ ಮೂಡಿದೆ. ಈ ಎಲ್ಲ ಬೆಳವಣಿಗೆಯನ್ನು ಪುಷ್ಟೀಕರಿಸುವಂತೆ ಈಗ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivasa Murthy) ಸಹ ಗುಡುಗಿದ್ದು, ಶಾಸಕ ತನ್ವೀರ್ ಸೇಠ್ ಅವರಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister DK Shivakumar) ಪತ್ರ ಬರೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿರುವ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಪ್ರಕರಣವನ್ನು ಮರು ಪರಿಶೀಲನೆ ಮಾಡಿ ಅಮಾಯಕರನ್ನು ಬಿಡುಗಡೆ ಮಾಡಲು ಪರಿಶೀಲನೆ ಮಾಡಬೇಕು ಎಂದು ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಇಟ್ಟುಕೊಂಡು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಅವರು ಗೃಹ ಹಾಗೂ ಒಳಾಡಳಿತ ಇಲಾಖೆಗೆ ಸೂಚಿಸಿದ್ದಾರೆ. ಆದರೆ, ಅಮಾಯಕರನ್ನು ಈಗಾಗಲೇ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ, ಈಗ ತಪ್ಪಿತಸ್ಥರನ್ನು ಅಮಾಯಕರು ಎಂದು ಹೇಳಿಸುವುದರ ಹಿಂದೆ ಹುನ್ನಾರ ಇದೆ. ನನ್ನನ್ನು ಸೋಲಿಸಲು ಕಾರಣರಾದವರನ್ನು ಬಿಡುಗಡೆ ಮಾಡಲು ಈ ಸರ್ಕಾರದವರು ಮುಂದಾಗಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಬಿಡುಗಡೆಗೊಳಿಸಲು ಈ ಪ್ಲ್ಯಾನ್ ಮಾಡಿರಬಹುದು ಎಂದು ಆರೋಪಿಸಿದ್ದಾರೆ.
ಇದರ ಮಧ್ಯೆ ಶಾಸಕ ತನ್ವೀರ್ ಸೇಠ್‌ಗೂ ಈ ಪ್ರಕರಣಕ್ಕೂ ಸಂಬಂಧವೇನು? ಸಿಸಿಟಿವಿ ಫೂಟೇಜ್, ಫೋಟೊಗಳನ್ನು ನೋಡಿ ಪೊಲೀಸರು ಆರೋಪಗಳನ್ನು ಸೆರೆ ಹಿಡಿದಿದ್ದಾರೆ. ಎನ್ಐಎದವರು ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ, ಈಗ ತಪ್ಪಿತಸ್ಥರನ್ನು ಬಿಡುಗಡೆ ಮಾಡುವ ಹುನ್ನಾರ ನಡೆಯುತ್ತಿದೆ. ಇಂಥದ್ದಕ್ಕೆ ಅವಕಾಶ ನೀಡಬಾರದು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅಮಾಯಕರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ನ್ಯಾಯಾಲಯದ ತೀರ್ಪು ಬರಲಿ ಎಂದು ಅಖಂಡ ಶ್ರೀನಿವಾಸ ಮೂರ್ತಿ ಕಿಡಿಕಾರಿದ್ದಾರೆ.
ಕೋರ್ಟ್‌ನಲ್ಲಿ ಹೋರಾಟ
ನಾನು ದಲಿತ ಶಾಸಕನಾಗಿದ್ದರೂ ನನಗೆ ರಕ್ಷಣೆ ಕೊಡಲಿಲ್ಲ. ಅಂದು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ತನ್ವೀರ್ ಸೇಠ್ ಪತ್ರದ ಹಿಂದೆ ಹಿರಿಯ ನಾಯಕರು ಇದ್ದಾರೆ. ನಾನು 2018ರಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೆ. ಆದರೆ, ಈ ಬಾರಿ ಪಿತೂರಿ ಮಾಡಿ ನನ್ನನ್ನು ಸೋಲಿಸಿದರು. ಈ ಪ್ರಕರಣವನ್ನು ಹಿಂಪಡೆಯಬಾರದು ಎಂದು ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಸರ್ಕಾರದ ಈ ನಡೆ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇನೆ. ಆರೋಪಿಗಳನ್ನು ಬಿಡುಗಡೆ ಮಾಡುವ ಹುನ್ನಾರವು ಈ ಸರ್ಕಾರದಿಂದ ನಡೆಯುತ್ತಿದೆ ಎಂಬ ಅನುಮಾನವಿದೆ. ಅಂದು ಘಟನೆ ಹೇಗೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.
ಡಿ.ಕೆ. ಶಿವಕುಮಾರ್ ಕೈವಾಡ
2021ರ ಆಗಸ್ಟ್ 11ರಂದು ನಡೆದ ಈ ಗಲಭೆ ವೇಳೆ ಯಾರು ಯಾರು ದೊಂಬಿ ಮಾಡಿದ್ದಾರೆ ಎಂಬುದನ್ನು ಟಿವಿ ಫೂಟೇಜಸ್‌ಗಳನ್ನು ನೋಡಿ ಆರೋಪಿಗಳನ್ನು ಬಂಧಿಸಲಾಗಿತ್ತು. ಎನ್ಐಎ ಸಹ ಆರೋಪಿಗಳ ತನಿಖೆ ನಡೆಸಿದೆ. ತನ್ವೀರ್ ಸೇಠ್ ಕ್ಷೇತ್ರ ಇರುವುದು ಮೈಸೂರಿನಲ್ಲಾಗಿದೆ. ಆದರೆ, ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಾಗಿದೆ. ಈ ಪ್ರಕರಣಕ್ಕೂ ತನ್ವೀರ್‌ಗೂ ಸಂಬಂಧ ಇಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಜಾಕೀರ್ ಬಿಡುಗಡೆಗಾಗಿ ಈ ಪತ್ರವನ್ನು ತಯಾರಿ ಮಾಡಲಾಗಿದೆ. ನಾನು ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ. ಸಂಪತ್ ರಾಜ್ ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಆಪ್ತರಾಗಿರುವುದರಿಂದ ಬಿಡುಗಡೆಗೆ ಮುಂದಾಗಿರಬಹುದು. ಈ ಪತ್ರದ ಹಿಂದೆ ಕೆಪಿಸಿಸಿ ಅಧ್ಯಕ್ಷರು ಇದ್ದಾರೆ. ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ತನ್ವೀರ್ ಸೇಠ್ ಚೆನ್ನಾಗಿದ್ದಾರೆ. ಹೀಗಾಗಿ ಅವರೇ ಪತ್ರ ಬರೆಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: BJP Karnataka : ಒಕ್ಕಲಿಗರಿಗೇ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?
ಇಂದೇ ಕೇಸ್ ವಾಪಸ್‌ಗೆ ನಿರ್ಧಾರ?
ಗುರುವಾರ ಸಂಜೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ವೇಳೆ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಯ ಕೇಸ್ ವಾಪಸ್ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಲ್ಲದಿದ್ದರೆ, ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.