Site icon Vistara News

ಕೆಜಿ ಹಳ್ಳಿ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಳಕೆ ಆಗಿದ್ದು PEN WEAPON! ಬೆಂಗಳೂರಿಗೇ ಇದು ಹೊಸ ಪರಿಚಯ!

KG Halli Murder accused

ಬೆಂಗಳೂರು: ಕೆ.ಜಿ. ಹಳ್ಳಿಯಲ್ಲಿರುವ ಪ್ರಾವಿನ್ಸ್‌ ಕಾಲೇಜಿನ ಆವರಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಿದ್ಯಾರ್ಥಿ ಕೊಲೆ ಪ್ರಕರಣ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದೆ. ಒಂದು ಕಡೆ ತಮಾಷೆ ಮಾಡಿದರು ಎಂಬ ಸಣ್ಣ ಕಾರಣವನ್ನು ಇಟ್ಟುಕೊಂಡು ವಿದ್ಯಾರ್ಥಿಯೊಬ್ಬ ರೌಡಿ ಗುಂಪು ಕಟ್ಟಿಕೊಂಡು ಬಂದು ಒಂದು ಕೊಲೆ ಮಾಡಿಸುವಷ್ಟರ ಮಟ್ಟಿಗೆ ಕಾಲೇಜು ಪರಿಸರ ಭಯಾನಕವಾಗಿರುವುದು ಆತಂಕ ಮೂಡಿಸಿದರೆ, ಇನ್ನೊಂದು ಕಡೆ ಕೊಲೆಗೆ ಬಳಸಿದ ಆಯುಧವನ್ನು ನೋಡಿ ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ!

ಬೆಂಗಳೂರಿನ ಪ್ರಾವಿನ್ಸ್‌ ಕಾಲೇಜಿನಲ್ಲಿ ಆಗಸ್ಟ್‌ ೧೧ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದರಲ್ಲಿ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಗಳ ಡ್ಯಾನ್ಸ್‌ ಪ್ರೋಗ್ರಾಂ ನಡೆಯುತ್ತಿತ್ತು. ಅಲ್ಲಿ ಡ್ಯಾನ್ಸ್‌ ಮಾಡುತ್ತಿದ್ದವನು ಸಾದ್‌ ಎಂಬ ವಿದ್ಯಾರ್ಥಿ. ಈ ನೃತ್ಯದ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮಾಷೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಸಾದ್‌ ಕೆರಳಿ ಕೆಂಡವಾಗಿದ್ದ. ತನ್ನನ್ನು ರ‍್ಯಾಗ್‌ ಮಾಡಿದ್ದಾರೆ ಎಂಬ ಅಂಶದಿಂದ ಆತ ಸಿಟ್ಟುಗೊಂಡಿದ್ದ. ಆವತ್ತೇ ಫಸ್ಟ್‌ ಬಿಕಾಂ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ನಡುವೆ ವಾಗ್ಯುದ್ಧ ನಡೆದಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಇದರಿಂದ ಇನ್ನಷ್ಟು ಸಿಟ್ಟಾದ ಸಾದ್‌ ʻನಾಳೆ ನೋಡಿಕೊಳ್ಳುತ್ತೇನೆʼ ಎಂದು ಹೋಗಿದ್ದ.

ತೆರೆದಾಗ ಚೂರಿ
ಮುಚ್ಚಿದ್ದಾಗ ಪೆನ್ನು!

ಮರುದಿನ ಏಳು ಜನರ ತಂಡವನ್ನು ಕಟ್ಟಿಕೊಂಡು ಬಂದಿದ್ದ ಸಾದ್‌ ಮತ್ತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ. ಎರಡು ತಂಡಗಳು ಪರಸ್ಪರ ಮಾತಿನ ಜಗಳ ಮಾಡಿಕೊಂಡವು. ಅಶ್ಲೀಲ ಮಾತುಗಳ ವಿನಿಮಯವಾಗಿದೆ. ಕೊನೆಗೆ ಎರಡೂ ತಂಡಗಳು ಕೈ ಕೈ ಮಿಲಾಯಿಸಿಕೊಂಡಿವೆ. ಆಗ ಹೊರಗೆ ಬಂದಿದ್ದೇ ಅದೊಂದು ಆಯುಧ!

ಆವತ್ತು ಸಾದ್‌ನ ಜತೆಗೆ ಬಂದವರು ಸಫಾನ್ ಉಲ್ಲಾಖಾನ್, ಜೈನುಲ್ಲಾಖಾನ್, ಸೈಯದ್ ಫೈಸಲ್, ಅನಾಸ್ ಖಾನ್, ಜೈದ್ ಖಾನ್. ಸಾದ್‌ ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ ಎಂದು ಅರ್ಬಾಜ್‌ ಎಂಬ ಹುಡುಗ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದ. ಆದರೆ, ಆಡಳಿತ ಮಂಡಳಿಗೆ ಈ ಪ್ರಕರಣ ಇಷ್ಟೊಂದು ವಿಕೋಪಕ್ಕೆ ತಿರುಗುತ್ತದೆ ಎನ್ನುವ ಕಲ್ಪನೆ ಇರಲಿಲ್ಲ ಅನಿಸುತ್ತದೆ. ಅವರೂ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡದೆ ತಾವೇ ಮ್ಯಾನೇಜ್‌ ಮಾಡಲು ಮುಂದಾಗಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿದೆ. ಅದೊಂದು ಅಪರೂಪದ ಆಯುಧ ಅರ್ಬಾಜ್‌ನ ಹೊಟ್ಟೆಯನ್ನೇ ಸೀಳಿ ಹಾಕಿದೆ. ಆರೋಪಿಗಳು ಅರ್ಬಾಜ್‌ನ ಎದೆಯ ಭಾಗಕ್ಕೆ ಒಮ್ಮೆ, ಹೊಟ್ಟೆಯ ಭಾಗಕ್ಕೆ ಎರಡು ಬಾರಿ ಇರಿದು ಪರಾರಿಯಾಗಿದ್ದಾರೆ. ಪೊಲೀಸರು ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಸಾದ್‌ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆಗ ಅವರಿಗೆ ಸಾದ್‌ನ ಕೈಯಲ್ಲಿ ವಿಶೇಷವಾದ ಆಯುಧವೊಂದು ಸಿಕ್ಕಿದೆ. ಅದು ಪೆನ್‌ ವೆಪನ್‌! ಹೀಗೊಂದು ಮಾಹಿತಿಯನ್ನು ನೀಡಿದವರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌.

ಬೆಂಗಳೂರಿನಲ್ಲೇ ಮೊದಲ ಬಾರಿ ಬಳಕೆಯಾದ ಆಯುಧ
ಅದರ ಹೆಸರು ಪೆನ್‌ ವೆಪನ್‌. ನೋಡಿದರೆ ಅದು ಪಕ್ಕಾ ಒಂದು ಸಾಮಾನ್ಯ ಪೆನ್‌ನಂತೆ ಕಾಣುತ್ತದೆ. ಅಷ್ಟೇ ಗಾತ್ರ, ಅಷ್ಟೇ ಉದ್ದ. ಕಿಸೆಯಲ್ಲಿ ಇಟ್ಟುಕೊಂಡರೆ ಪೆನ್ನೆ. ಆದರೆ, ಒಳಗೆ ತೆಗೆದು ನೋಡಿದರೆ ಅದು ಚೂಪಾದ ಚೂರಿ. ಅತ್ಯಂತ ಹರಿತವಾಗಿರುವ ಇದರು ಯಾವುದೇ ದೊಡ್ಡ ಅಪಾಯಕಾರಿ ಆಯುಧಕ್ಕಿಂತಲೂ ಭಯಾನಕವಾಗಿದೆ.

ಪೆನ್‌ ಮಾದರಿಯ ಚೂರಿಗಳು ಕ್ರಿಮಿನಲ್‌ಗಳಿಂದ ಬಳಕೆಯಾಗಿವೆ. ಅದರ ಗಾತ್ರ ದೊಡ್ಡದಿತ್ತು. ಆದರೆ, ಇಲ್ಲಿ ಬಳಕೆಯಾಗಿರುವುದು ಪೆನ್ನಿನಷ್ಟೇ ಸಣ್ಣ ಆಯುಧ. ಬೆಂಗಳೂರಿನ ಕ್ರೈಂ ಇತಿಹಾಸದಲ್ಲಿ ಯಾರು ಕೂಡಾ ಇದನ್ನು ಬಳಸಿದ ಇತಿಹಾಸವಿಲ್ಲ ಎಂದು ಹೇಳುತ್ತಾರೆ ಪೊಲೀಸರು. ಅಂದರೆ, ಇದನ್ನು ಬಳಸಿ ಕೊಲೆ ಮಾಡಿದ ಉದಾಹರಣೆ ಕಂಡುಬಂದಿಲ್ಲ.

ಫೆಬ್ರವರಿಯಲ್ಲೇ ತರಿಸಿಕೊಂಡಿದ್ದ ಸಾದ್‌
ನಿಜವೆಂದರೆ, ಈ ಆಯುಧ ಇದ್ದಿದ್ದು ಬಿಕಾಂ ವಿದ್ಯಾರ್ಥಿನಿ ಸಾದ್‌ನ ಕೈಯಲ್ಲೇ. ಅದನ್ನು ಹೊಂದಿದ್ದವನೂ ಅವನೆ. ಈ ಪೆನ್ನನ್ನು ಸಾದ್‌ ಮೊದಲ ಬಾರಿ ನೋಡಿದ್ದು ಆನ್‌ಲೈನ್‌ನಲ್ಲಿ. ಅದು ಎಲ್ಲಿ ಸಿಗುತ್ತದೆ ಎಂದು ಹುಡುಕಿದಾಗ ದಾರಿ ತೋರಿಸಿದ್ದು ದಿಲ್ಲಿಗೆ. ಸಾದ್‌ ಆನ್‌ಲೈನ್‌ನಲ್ಲೇ ಅದನ್ನು ಅದನ್ನು ತರಿಸಿ ಇಟ್ಟುಕೊಂಡಿದ್ದ. ನೋಡಲು ಚೆನ್ನಾಗಿದೆ, ವಿಭಿನ್ನವಾಗಿದೆ ಅಂತ ತರಿಸಿಕೊಂಡೆ ಎಂದು ಈಗ ಹೇಳುತ್ತಿದ್ದಾನೆ.

ಪೆನ್‌ ವೆಪನ್‌ ಬೇಕು ಅನಿಸಿದ್ದೇಕೆ?
ಅಷ್ಟಕ್ಕೂ ಸಾದ್‌ ತರಿಸಿಕೊಂಡಿದ್ದು ಬರೆಯುವ ಪೆನ್ನನ್ನು ಅಲ್ಲ. ಪೆನ್ನಿನಂತೆ ಕಾಣುವ ಆಯುಧವನ್ನು. ಆತನಿಗೆ ಈ ಪೆನ್ನು ಯಾಕೆ ಚೆನ್ನಾಗಿದೆ ಅನಿಸಿತು. ಇದೇ ವರ್ಷದ ಫೆಬ್ರವರಿಯಲ್ಲಿ ತರಿಸಿಕೊಂಡ ಆತನ ನಿಜವಾದ ಉದ್ದೇಶ ಬೇರೇನಾದರೂ ಇತ್ತೇ? ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಖಾಸುಮ್ಮನೆ ಯಾರಾದರೂ ಶಸ್ತ್ರಾಸ್ತ್ರಗಳನ್ನು ತಂದಿಟ್ಟುಕೊಳ್ಳುವುದಿಲ್ಲ. ಕಾಲೇಜಿನಲ್ಲಿ ಶೋಕಿ ಮಾಡುವುದಕ್ಕಾಗಿ, ಎಲ್ಲರ ಮುಂದೆ ತೋರಿಸುವುದಕ್ಕಾಗಿ, ಮೊದಲೇ ನೋಡಲು ಹೀರೊನಂತಿರುವ ತನಗೆ ಇನ್ನಷ್ಟು ಕಳೆಗಟ್ಟಿಸುವುದಕ್ಕಾಗಿ ಹೀಗೆ ಮಾಡಿದನೇ ಅಥವಾ ೧೯ ವರ್ಷದ ಹುಡುಗನ ತಲೆಯಲ್ಲಿ ಇನ್ನೂ ಏನಾದರೂ ಇತ್ತೇ ಎನ್ನುವ ಬಗ್ಗೆ ವಿಚಾರಣೆ ಮುಂದುವರಿದಿದೆ. ಇದರ ಜತೆಗೆ ಆತನ ಕೃತ್ಯಕ್ಕೆ ಸಹಾಯ ಮಾಡಿದ ವಿದ್ಯಾರ್ಥಿಗಳೇ ಆಗಿರುವ ನಾಲ್ವರು ಮತ್ತು ಹೊರಗಿನ ಗೆಳೆಯರಾದ ಇಬ್ಬರ ಹಿನ್ನೆಲೆಯನ್ನೂ ಪೊಲೀಸರು ಹುಡುಕುತ್ತಿದ್ದಾರೆ. ಕಾಣೆಯಾಗಿರುವ ಒಬ್ಬನ ಹುಡುಕಾಟ ನಡೆದಿದೆ. ಕಾಲೇಜು ಆಡಳಿತ ಮಂಡಳಿಗೂ ಬಿಸಿ ತಟ್ಟಿದೆ. ಇಷ್ಟರ ಮಧ್ಯೆ ಕಣ್ಣೀರು ಹಾಕುತ್ತಿರುವುದು ಅರ್ಬಾಜ್‌ ಕುಟುಂಬ. ಕಾಲೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಮುಗಿದು ಹೋಗಬೇಕಾಗಿದ್ದ ಒಂದು ಕಾಲೆಳೆಯುವ ಆಟ, ಪ್ರಾಣವನ್ನೇ ಕಿತ್ತುಕೊಂಡಿದೆ ಎಂದರೆ ನಂಬುವುದೇ ಕಷ್ಟ ಎನ್ನುತ್ತಾರೆ ಸಾರ್ವಜನಿಕರು.

ಇದನ್ನೂ ಓದಿ| Student Execution | ಕಾಲೇಜಿನಲ್ಲಿ ರ‍್ಯಾಗಿಂಗ್‌ ಮಾಡಿದ್ದಕ್ಕೆ ಕೊಲೆ; ಆರೋಪಿಗಳ ಸೆರೆ

Exit mobile version