ನವದೆಹಲಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನವ ಜಗಳ ಈಗ ನವದೆಹಲಿಯಲ್ಲಿಯೂ ಆರಂಭವಾಗಿದೆ. ಎಫ್‌ಸಿಐನಿಂದ ಅಕ್ಕಿ ಸಿಗುವುದಿಲ್ಲ ಎನ್ನುವುದು ತಿಳಿದ ನಂತರ ವಿವಿಧ ರಾಜ್ಯಗಳ ಬಳಿ ಕೇಳುತ್ತಿರುವ ಕರ್ನಾಟಕ ಸರ್ಕಾರ ಈಗ ಕೇಂದ್ರ ಸರ್ಕಾರದ ಜತೆಗೆ ಮಾತುಕತೆಗೂ ಮುಂದಾಗಿದೆ. ಆದರೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಮೂರು ದಿನಗಳಿಂದ ಭೇಟಿಗೇ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿರುವ ಪೀಯೂಷ್ ಗೇಯೆಲ್ ಅವರನ್ನು ಕರ್ನಾಟಕದ ಸಕ್ಕರೆ ಮತ್ತು ಜವಳಿ ಸಚಿವ ಡಾ. ಶಿವಾನಂದ ಪಾಟೀಲ್ ಮಂಗಳವಾರವಷ್ಟೆ ಭೇಟಿ ಮಾಡಿದ್ದರು. ಈ ಕುರಿತು ಮಾಧ್ಯಮಗಳ ಜತೆಗೆ ಮಾಹಿತಿಯನ್ನೂ ಹಂಚಿಕೊಂಡಿದ್ದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆ ಚರ್ಚೆ ಮಾಡಿದ್ದೇನೆ. ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ್ ಮುಂದುವರೆಸಿಕೊಂಡು ಹೊಗಲು ಮನವಿ ಮಾಡಿದ್ದೇವೆ. ಬೆಂಗಳೂರು ಹೊರತು ಪಡಿಸಿ ಬಿಜಾಪುರಕ್ಕೂ ಟೆಕ್ಸ್ ಟೈಲ್ ಪಾರ್ಕ್ ನೀಡಲು ಮನವಿ ಮಾಡಿದ್ದೇವೆ. ಅದಕ್ಕೆ ಬೇಕಾದ ನೀರು, ಭೂಮಿ ಎಲ್ಲಾ ಇದೆ. ಕರ್ನಾಟಕಕ್ಕೆ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಸೆಟಪ್ ಮಾಡಲು ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರ ಸಚಿವರು ಸಮ್ಮತಿಸಿದ್ದಾರೆ.
ಟೆಕ್ಸ್ ಟೈಲ್ ಅತಿಹೆಚ್ಚು ಉದ್ಯೊಗ ಸೃಷ್ಟಿಸೊ ಕ್ಷೇತ್ರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಉದ್ಯೋಗಕ್ಕೆ ಪ್ಲಾನ್ ಇದೆ. ಸಂಶೋಧನೆ ಮತ್ತು ಅಭಿವೃದ್ಧಿಯಿಂದ ತುಂಬಾ ಅನುಕೂಲ ಇದೆ. ಅದರಿಂದ ರಾಜ್ಯಕ್ಕೆ ಹೆಚ್ಚಿನ ಲಾಭ ಆಗಲಿದೆ ಎಂದು ಶಿವಾನಂದ ಪಾಟೀಲ್ ಮಂಗಳವಾರ ಹೇಳಿದ್ದರು.
ಆದರೆ ಬುಧವಾರ ಸಂಜೆ ಕೆ.ಎಚ್. ಮುನಿಯಪ್ಪ ಅಸಮಾಧಾನ ಹೊರಹಾಕಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ಕಳೆದ ಮೂರು ದಿನಗಳಿಂದ ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲ. ನಾಳೆ ಬೆಳಿಗ್ಗೆ 10 ಗಂಟೆಗೆ ಕೇಂದ್ರದ ರಾಜ್ಯ ಖಾತೆ ಸಚಿವರು ಭೇಟಿಗೆ ಕಾಲಾವಕಾಶ ನೀಡಿದ್ದರು, ಆದರೆ ಈಗ ಆ ಭೇಟಿಗೂ ಅವಕಾಶ ನಿರಾಕರಿಸಿದ್ದಾರೆ.
ಅವರು ಅಕ್ಕಿ ನೀಡೊ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಜನರಿಗೆ ನೀಡಿರೋ ಭರವಸೆಯಂತೆ ಅಕ್ಕಿ ನೀಡುತ್ತೇವೆ. ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ಛತ್ತೀಸ್‌ಗಢ, ಪಂಜಾಬ್, ರಾಜ್ಯಗಳು ಅಕ್ಕಿ ನೀಡಲು ಮುಂದೆ ಬಂದಿವೆ. ಅಕ್ಕಿಯ ದರದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಬೇಕಾದ ಹಣದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜನರ ಬೇಡಿಕೆಯಂತೆ ಎಂಟು ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ. ರಾಗಿ ಅಥವಾ ಜೋಳ ನೀಡಲಿದ್ದೇವೆ. ಜುಲೈ 1 ರಿಂದ ಅಕ್ಕಿ ನೀಡೊ ಯೋಜನೆ ತಡವಾಗಲಿದೆ. ಅಗಸ್ಟ್ ಒಳಗಾಗಿ ಅಕ್ಕಿ ನೀಡುತ್ತೇವೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಅಕ್ಕಿ ಜಗಳ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ.