Site icon Vistara News

Ram Mandir: ರಾಮ ಮಂದಿರ ಉದ್ಘಾಟನೆ; ವಿಮಾನದಲ್ಲಿ ರಾಮನ ಜಪ ಮಾಡಿದ ಕೆ.ಎಚ್.‌ ಮುನಿಯಪ್ಪ!

KH Muniyappa flight

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ಅದ್ಧೂರಿಯಾಗಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಲಿದೆ. ಈ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್‌ ನಿರ್ಧಾರ ಮಾಡಿದ್ದಲ್ಲದೆ, ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಆದರೆ, ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ ಅವರು ಮಾತ್ರ ಭಗವಾನ್‌ ಶ್ರೀರಾಮನ ಸ್ಮರಣೆ ಮಾಡುತ್ತಿದ್ದಾರೆ. ಅವರು ವಿಮಾನದಲ್ಲಿ ಪ್ರಯಾಣ ಮಾಡುವಾಗಲೂ ಪುಸ್ತಕದಲ್ಲಿ “ಶ್ರೀರಾಮ.. ಶ್ರೀರಾಮ” ಎಂದು ಬರೆಯುತ್ತಿರುವುದು ಈಗ ವೈರಲ್‌ ಆಗಿದೆ.

ಕೆ.ಎಚ್.‌ ಮುನಿಯಪ್ಪ ಅವರು ಕಾರ್ಯದ ನಿಮಿತ್ತ ನವ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ವಿಮಾನದಲ್ಲಿ ಕುಳಿತುಕೊಂಡೇ ಶ್ರೀರಾಮ ಸ್ಮರಣೆ ಮಾಡಿದ್ದಾರೆ. ಅಲ್ಲದೆ, ಅದಕ್ಕಾಗಿಯೇ ಒಂದು ನೋಟ್‌ಬುಕ್‌ ಅನ್ನು ಇಟ್ಟುಕೊಂಡಿದ್ದು, ಅದರಲ್ಲಿ “ಶ್ರೀರಾಮ.. ಶ್ರೀರಾಮ..” ಎಂದು ಬರೆದಿದ್ದಾರೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಅಂದಹಾಗೆ ಎಐಸಿಸಿ ಸಭೆ ನಿಮಿತ್ತ ದೆಹಲಿಯತ್ತ ಅವರು ಪ್ರಯಾಣ ಬೆಳೆಸುತ್ತಿದ್ದರು.

ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್‌ ತನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದೆ. ಸಿಎಂ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್‌ ನಾಯಕರು ಪಕ್ಷದ ಹೈಕಮಾಂಡ್‌ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಇದು ತಮ್ಮ ವೈಯಕ್ತಿಕ ಇಚ್ಛೆ ಎಂಬಂತೆ ಸಚಿವ ಕೆ.ಎಚ್.‌ ಮುನಿಯಪ್ಪ ಶ್ರೀರಾಮನ ಜಪ ಮಾಡಿರುವುದು ಹಲವರು ಮೆಚ್ಚುಗೆಗೂ ಪಾತ್ರವಾಗಿದೆ.

ಮಂದಿರ ಉದ್ಘಾಟನೆ ದಿನ ದೇವಸ್ಥಾನಗಳಲ್ಲಿ ಪೂಜೆ ಮಾಡಲು ನಾನು ಹೇಳಿಲ್ಲ: ಸಿದ್ದರಾಮಯ್ಯ

ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಜ್ಯದಲ್ಲಿ ಸರ್ಕಾರ ವತಿಯಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ನಾನು ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ? ಶ್ರೀರಾಮಚಂದ್ರ ಇಲ್ಲಿ ಇಲ್ಲವೇ? ನಮ್ಮಲ್ಲಿರುವ ಶ್ರೀರಾಮನಿಗೆ ಬೆಲೆ ಇಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿಯೂ ಪೂಜೆ ನಡೆಯಲಿದೆ ಎಂದು ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರೂ ಶ್ರೀರಾಮಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ. ಶ್ರೀರಾಮಚಂದ್ರನನ್ನು ದೊಡ್ಡ ಮಟ್ಟದ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.

ನಾವೆಲ್ಲರೂ ಶ್ರೀ ರಾಮಚಂದ್ರರಾಮನ ಭಕ್ತರೇ ಆಗಿದ್ದೇವೆ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧಿ ಇಲ್ಲ. ರಾಮಮಂದಿರ ಉದ್ಘಾಟನೆಯ ಬಗ್ಗೆ ಪಕ್ಷದ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಗೆ ಬಾರದಿರುವ ಕಾಂಗ್ರೆಸ್‌ ನಿರ್ಧಾರ ಅಕ್ಷಮ್ಯ ಅಪರಾಧ: ಬಿ.ಎಸ್.‌ ಯಡಿಯೂರಪ್ಪ

ನಾವು ರಾಮಚಂದ್ರನನ್ನು ಪೂಜಿಸಿ, ಭಜಿಸಿ, ರಾಮಮಂದಿರವನ್ನು ಕಟ್ಟಿದ್ದೇವೆ. ದೇವರ ಹೆಸರಲ್ಲಿ ರಾಜಕೀಯಕ್ಕೆ ವಿರೋಧವಾಗಿದ್ದೇವೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version