ಬೆಂಗಳೂರು, ಕರ್ನಾಟಕ: ನಮ್ಮ ದೇಶದ ಪ್ರಧಾನ ಮಂತ್ರಿ ಕೇವಲ ಪಕ್ಷದ ಪ್ರತಿನಿಧಿಯಲ್ಲ. ಅವರು ಎಲ್ಲ ಪ್ರಜೆಗಳನ್ನು ಪ್ರತಿನಿಧಿಸುವ ಪ್ರಧಾನಿ. ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ವಿಷದ ಹಾವು ಎಂದು ಹೇಳಬಾರದಿತ್ತು. ಮೋದಿ ಅವರಿಗೆ ಖರ್ಗೆ ಅವರು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ(Karnataka Election 2023).
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಇಡಿ ಜಗತ್ತು ನಮ್ಮ ದೇಶದತ್ತ ನೋಡುತ್ತಿದೆ. ಕೆಲವರು ಒಳ್ಳೆ ರೀತಿಯಲ್ಲಿ ನೋಡುತ್ತಾರೆ. ಇನ್ನು ಕೆಲವರು ಆತಂಕದಿಂದ ನಮ್ಮನ್ನು ನೋಡುತ್ತಿದ್ದಾರೆ. ಹೊರದೇಶಕ್ಕೆ ಹೋದಾಗ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ಸಿಗುತ್ತಿದೆ. ಅವರಿಗೆ ಸಿಗುವ ಸ್ವಾಗತ ಕೇವಲ ಮೋದಿಗೆ ಮಾತ್ರ ಸಿಮೀತವಲ್ಲ. ಅದು ಇಡೀ ದೇಶಕ್ಕೆ ಸಿಗುವ ಸ್ವಾಗತ ಎಂದು ಕರಂದ್ಲಾಜೆ ಅವರು ಹೇಳಿದರು.
ದೇಶಕ್ಕೋಸ್ಕರ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಆದರೆ, ರಾಜಕೀಯ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಹೀಗೆ ಹೇಳಬಾರದಿತ್ತು. ಮೋದಿ ವಿಷದ ಹಾವು ಎಂದಿದ್ದಾರೆ. ಈ ವಿಷವನ್ನು ನೆಕ್ಕಿದರೆ ನೀವು ಸಾಯ್ತಿರಿ ಅಂತಾ ಹೇಳಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಖರ್ಗೆ ಅವರು ಆ ರೀತಿಯಾಗಿ ಹೇಳಬಾರದಿತ್ತು. ಅವರ ಮಾತನ್ನು ಕೇವಲ ಕರ್ನಾಟಕ ಅಲ್ಲ, ಇಡೀ ದೇಶವೇ ಗಮನಿಸುತ್ತದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕೆಂದು ಈ ರೀತಿಯ ಕೆಳಮಟ್ಟಕ್ಕೆ ಇಳಿದಿದ್ದಾರೆ.
ಪಡ್ಡೆ ಹುಡುಗರ ಚಪ್ಪಾಳೆಗೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿದ್ದಾರೆ. ತಮ್ಮ ಹೇಳಿಕೆಗಾಗಿ ಮೋದಿ ಅವರಿಗೆ ಖರ್ಗೆ ಕ್ಷಮೆ ಕೇಳಬೇಕು. ಮೋದಿ ಅವರಿಗೆ ಅವಮಾನ ಮಾಡಿರೋದು, ಈ ಮಣ್ಣಿಗೆ ಅವಮಾನ ಮಾಡಿದ ಹಾಗೆ. ಇಂಥವರ ವಿರುದ್ಧ ಕಾಂಗ್ರೆಸ್ ಇಲ್ಲ ಸಲ್ಲದು ಮಾತನಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Karnataka Election : ಮೋದಿ ಅಂದ್ರೆ ವಿಷದ ಹಾವಿದ್ದಂತೆ; ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ ಅಂದರೆ ಬಂದರ್, ತುಘಲಕ್, ಚಾಯ್ ವಾಲಾ ಅಂತೆಲ್ಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡುತ್ತಾರೆ. ಮೋದಿ ಅಂದ್ರೆ ಇಲಿ, ಮೋದಿ ಅಂದ್ರೆ ರಾವಣ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಪ್ರಿಯಾಂಕ್ ಖರ್ಗೆ ಅವರು ಮೋದಿಯನ್ನು ಹಿಟ್ಲರ್ ಅಂತಾ ಹೇಳಿದ್ದರು ಎಂದು ಶೋಭಾ ಹೇಳಿದರು.