ಶಿವಮೊಗ್ಗ: ಜ್ವರದಿಂದ ಬಳಲುತ್ತಿದ್ದ ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟು ವಿನಯ್ ಸೀಬಿನಕೆರೆ ಮೃತಪಟ್ಟಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆಯ ವಿನಯ್ ಅವರು ಕೆಲವು ದಿನಗಳಿಂದ ಅಧಿಕ ಜ್ವರದಿಂದ ಬಳಲುತ್ತಿದ್ದರು. ಮೊದಲು ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರೀಡಾಪಟುವನ್ನು ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಕೊನೆಯ ಉಸಿರೆಳೆದಿದ್ದಾರೆ.
ವಿನಯ್ ಸೀಬಿನಕೆರೆ ಅವರು ಖೋಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾಗಿದ್ದರು. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಖೋಖೋ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು.