ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ರಾತ್ರಿ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್ (Kiccha Sudeep) ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿರುವ ಬೆನ್ನಲ್ಲೇ ಡಿಕೆಶಿ ಸ್ಪಷ್ಟೀಕರಣ ನೀಡಿದ್ದು, ತಾವು ಸುದೀಪ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿಯೇ ಇಲ್ಲ ಎಂದು ಹೇಳಿದ್ದಾರೆ.
ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೇಟಿ ವೇಳೆ ನಾವು ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ. ಚಿತ್ರರಂಗದ ಸಮಸ್ಯೆ ಕುರಿತು ಪ್ರಣಾಳಿಕೆ ಮಾಡಲು ಚರ್ಚೆ ಮಾಡಿದ್ದೇವೆ. ಅಂಬರೀಷ್, ಪುನೀತ್, ವಿಷ್ಣುವರ್ಧನ್ ರೀತಿ ಸುದೀಪ್ ಸಹ ಉತ್ತಮ ನಾಯಕ ನಟ. ಕಾಂಗ್ರೆಸ್ ಪರ ಪ್ರಚಾರಕ್ಕೆ ಬನ್ನಿ ಎಂದು ಸಹ ಕರೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: Pathan Movie: ಶಾರುಖ್ ಖಾನ್ ಭಾರತದ ಟಾಮ್ ಕ್ರೂಸ್ ಎಂದ ಪತ್ರಕರ್ತನಿಗೆ ಬೆಂಡೆತ್ತಿದ ಅಭಿಮಾನಿಗಳು!
ನಾನು ರಾಜಕೀಯಕ್ಕೆ ಆಹ್ವಾನ ನೀಡಿಲ್ಲ. ಅನೇಕ ವಿಚಾರವಾಗಿ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ. ಕೊರೊನಾ ವೇಳೆಯಲ್ಲಿ ಚಿತ್ರರಂಗದ ಸಹಾಯಕ್ಕೆ ಸರ್ಕಾರ ಬಂದಿಲ್ಲ ಎಂಬ ವಿಷಯವೂ ಈ ವೇಳೆ ಪ್ರಸ್ತಾಪಕ್ಕೆ ಬಂದಿದೆ. ಇನ್ನು ಮೊದಲಿನಿಂದಲೂ ಅವರು ನಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿರುತ್ತಾರೆ. ಅವರು ನನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದರು.
ಪರಮೇಶ್ವರ್ ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ. ಬೆಂಗಳೂರು ಟ್ರಾಫಿಕ್ ಹಾಗೂ ಕುಡಿಯುವ ನೀರಿನ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರ ಜತೆ ಚರ್ಚೆ ಮಾಡಿದ್ದೇವಷ್ಟೇ. ಅವರು ರಾಜೀನಾಮೆ ಏಕೆ ಕೊಡುತ್ತಾರೆ? ಪರಮೇಶ್ವರ್ ಅಂತಹ ಶಿಸ್ತಿನ ಸಿಪಾಯಿ ಈ ರಾಜ್ಯದಲ್ಲಿ ಯಾರೂ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Budget 2023 : ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಗರಿಷ್ಠ ಅನುದಾನ ನೀಡಲಾಗಿದೆ: ಅರುಣ್ ಸಿಂಗ್
ಕೆ.ಎಚ್ ಮುನಿಯಪ್ಪ ಅವರಿಗೆ ಪಕ್ಷದೊಳಗೆ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿ ಕುಚೇಷ್ಟೆ ಮಾಡಿಕೊಂಡು ಬೋಗಸ್ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ದಿನಕ್ಕೆ ಒಂದು ವಿಡಿಯೊ ಹಾಕೋದು, ಪತ್ರ ಹಾಕೋದು ಮಾಡಿ ಬಿಜೆಪಿ ಜನರನ್ನು ಮಿಸ್ ಗೈಡ್ ಮಾಡುತ್ತಿದ್ದಾರೆ. ಅದು ಸಿದ್ದರಾಮಯ್ಯ ಅವರ ಸಹಿ ಅಲ್ಲ, ಈ ಬಗ್ಗೆ ಸಿದ್ದರಾಮಯ್ಯನವರೇ ದೂರು ದಾಖಲು ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.