Site icon Vistara News

Kiccha Sudeepa: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಿಚ್ಚ ಸುದೀಪ್‌ ಮೆಚ್ಚುಗೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಹೇಳಿದ್ದೇನು?

Kichcha Sudeep Sent Notice To Producer Kumar

Actor Kichcha Sudeep Sent Notice To Producer Kumar Who Made Allegations Against Actor

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿಗಳಿಗೆ ಕಿಚ್ಚ ಸುದೀಪ್‌ ತೆರೆ ಎಳೆದಿದ್ದಾರೆ. ತಾವು ರಾಜಕೀಯ ಸೇರುತ್ತಿಲ್ಲ, ಆದರೆ ವೈಯಕ್ತಿಕ ಸಂಬಂಧದ ಆಧಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಹಾಗಾದರೆ ಬೊಮ್ಮಾಯಿ ಅವರನ್ನು ಬೆಂಬಲಿಸುವ ಮೂಲಕ ಆ ಪಕ್ಷದ ಸರ್ಕಾರದ ಎಲ್ಲ ನಿರ್ಧಾರಗಳನ್ನೂ ಬೆಂಬಲಿಸುತ್ತೀರ ಎಂಬ ಪ್ರಶ್ನೆಗೆ ಸುದೀಪ್‌ ಉತ್ತರಿಸಿದ್ದಾರೆ.

ಇವುಗಳೆಲ್ಲವೂ ವೈಯಕ್ತಿಕ ದೃಷ್ಟಿಕೋನವನ್ನು ಒಳಗೊಂಡಿರುತ್ತವೆ. ಒಬ್ಬ ನಾಗರಿಕನಾಗಿ ಅನೇಕ ಸಿದ್ಧಾಂತಗಳನ್ನು ಒಪ್ಪುತ್ತೇನೆ. ಸರ್ಕಾರದಿಂದ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ. ಕೆಲವು ಒಳ್ಳೆಯ ಕೆಲಸಗಳು ಆದಾಗ ಅದರ ಕುರಿತು ನನ್ನ ಅಭಿಪ್ರಾಯಗಳಿವೆ. ಎಲ್ಲ ವಿಷಯಗಳ ಕುರಿತೂ ಒಪ್ಪಲು ಸಾಧ್ಯವಿಲ್ಲ. ನಾನು ಭಾರತದಲ್ಲಿದ್ದೇನೆ, ನಾನು ತೆರಿಗೆ ನೀಡುತ್ತಿದ್ದೇನೆ, ಕೆಲವು ಬೆಳವಣಿಗೆಗಳನ್ನು ನೋಡುತ್ತಿದ್ದೇನೆ.

ಎಲ್ಲವನ್ನೂ ಒಪ್ಪಲು ಸಾಧ್ಯವಿಲ್ಲವಾದರೂ ಕೆಲವು ವಿಚಾರಗಳಿಗೆ ಒಪ್ಪಿಗೆ ಆಗುತ್ತದೆ. ಇದರಿಂದಾಗಿ ಭಾರತವು ಮುನ್ನಡೆಯುತ್ತಿದೆ ಎನ್ನಿಸುತ್ತದೆ. ಒಬ್ಬ ನಾಯಕನಾಗಿ ನಾನು ಮೋದಿಯವರನ್ನು ಒಪ್ಪುತ್ತೇನೆ. ಹಾಗೆಯೇ ಮೋದಿಯವರ ಕೆಲವು ನಿರ್ಧಾರಗಳನ್ನು ನಾನು ಒಬ್ಬ ಭಾರತೀಯನಾಗಿ ಗೌರವಿಸುತ್ತೇನೆ. ಆದರೆ ಅದ್ಯಾವುದೂ ಇಲ್ಲಿ ನಾನು ಆಗಮಿಸಲು ಪ್ರಭಾವಿಸುವುದಿಲ್ಲ. ಆದರೆ ಇಲ್ಲಿಗೆ ಆಗಮಿಸಿರುವುದು ವೈಯಕ್ತಿಕ ಸಂಬಂಧದ ಆಧಾರದಲ್ಲಿ ಎಂದರು.

ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪದ ಕುರಿತು ಪ್ರತಿಕ್ರಿಯಿಸಿದ ಸುದೀಪ್‌, ನನಗೆ ಗೊತ್ತಿರುವ ವಿಚಾರದಲ್ಲಿ ಮಾತನಾಡಬಹುದು. ಭಾರತದಲ್ಲಿ ಕಾನೂನು ಸದೃಢವಾಗಿದೆ, ಅದು ತನ್ನದೇ ಕೆಲಸ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಈ ದೇಶದಲ್ಲಿ ಪ್ರತಿಯೊಬ್ಬರೂ ಇಲ್ಲಿ ಬದುಕುತ್ತಿರುವುದು, ಕಾನೂನಿನ ಮೇಲಿನ ನಂಬಿಕೆಯಿಂದಾಗಿ. ಕಾನೂನಿನಿಂದಾಗಿಯೇ ನಾವು ಇಂದು ಬದುಕುತ್ತಿದ್ದೇವೆ. ನಾವು ಆರೋಪಗಳಿಗೆ ಉತ್ತರಿಸಲು ಆಗುವುದಿಲ್ಲ. ಹಾಗೊಂದು ವೇಳೆ ಏನಾದರೂ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಇದೆಲ್ಲವನ್ನೂ ಬದಿಗಿಟ್ಟು ಬೆಂಬಲ ನೀಡಲು ಸಾಕಷ್ಟು ಉತ್ತಮ ಅಂಶಗಳಿವೆ ಎಂದರು.

ಐಟಿ, ಇಡಿ ದಾಳಿಗೆ ಹೆದರಿ ಒತ್ತಡಕ್ಕೆ ಬಂದಿದ್ದೀರ ಎಂಬ ಪ್ರಶ್ನೆಗೆ, ನಾನು ಈಟಿ, ಇಡಿಗೆ ಹೆದರುತ್ತೇನೆ ಎಂದು ನಿಮಗೆ ಎನ್ನಿಸುತ್ತದೆಯೇ? ನಾನು ಒತ್ತಡಕ್ಕೆ ಬಂದಿಲ್ಲ, ಪ್ರೀತಿಗಾಗಿ ಬಂದಿದ್ದೇನೆ ಎಂದರು.

ಇದನ್ನೂ ಓದಿ: Kiccha Sudeepa: ಸಿಎಂ ಬೊಮ್ಮಾಯಿ ಮಾಮನನ್ನು ಬೆಂಬಲಿಸುವೆ; ಬಿಜೆಪಿ ಸೇರುವುದಿಲ್ಲ ಎಂದ ಕಿಚ್ಚ ಸುದೀಪ್‌

Exit mobile version