ಬೆಂಗಳೂರು: ಕರ್ನಾಟಕದ ಪ್ರಸಿದ್ಧ ನಟ ಕಿಚ್ಚ ಸುದೀಪ್ ಬಹುನಿರೀಕ್ಷಿತ ಸುದ್ದಿಗೋಷ್ಠಿ ನಡೆಸಿದ್ದು, ರಾಜಕಾರಣವನ್ನು ಪ್ರವೇಶಿಸುತ್ತಿಲ್ಲ ಎಂದು ಪದೇಪದೆ ಸ್ಪಷ್ಟಪಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕುಳಿತು ಮಾತನಾಡಿದ ಸುದೀಪ್, ಬಸವರಾಜ ಬೊಮ್ಮಾಯಿ ಮಾಮನ ಪ್ರೀತಿಗಾಗಿ ಆಗಮಿಸಿದ್ದೇನೆ ಎಂದರು.
ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಸುದೀಪ್, ಮಾನ್ಯ ಮುಖ್ಯಮಂತ್ರಿಗಳನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಮಾತ್ರ ನನ್ನೊಟ್ಟಿಗೆ ನಿಂತಿದ್ದರು, ಅವರಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರೂ ಒಬ್ಬರು. ನಾವು ಬೆಳೆದು ಬಂದ ಹಾದಿಯಲ್ಲಿ ಪ್ರತಿ ವಿಷಯದಲ್ಲೂ ಗಾಡ್ ಫಾದರ್ ಯಾರೂ ಇರಲಿಲ್ಲ. ಮಾಮ ಆಗ ತಾನೆ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದರು. ಅವರು ಇಂದು ಸಿಎಂ ಆಗಿದ್ದಾರೆ. ಆ ವ್ಯಕ್ತಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದರು.
ಬಿಜೆಪಿಯ ಎಲ್ಲ ಸಿದ್ಧಾಂತಗಳಿಗೆ ಒಪ್ಪುತ್ತೀರ ಎಂಬ ಪ್ರಶ್ನೆಗೆ, ನನ್ನ ತಂದೆಯ ಸ್ಥಾನದಲ್ಲಿ ಅವರು ಇದ್ದಾರೆ. ನನ್ನ ಅವಶ್ಯಕತೆ ಎಲ್ಲಿ ಇದೆ ಎಂದು ಅವರಿಗೆ ಎನ್ನಿಸುತ್ತದೆಯೋ ಅಲ್ಲಿರುತ್ತೇನೆ. ಯಾವುದೇ ಪಕ್ಷದ ಪರವಾಗಿ ನಿಲ್ಲುತ್ತೇನೆ ಎನ್ನುವುದಾದರೆ ನಾನು ಅದನ್ನೇ ಹೇಳುತ್ತಿದ್ದೆ. ಅದನ್ನು ಹೇಳಿಲ್ಲ ಎಂದರೆ ಹಾಗೆ ಇಲ್ಲ ಎಂದರ್ಥ ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮಿಬ್ಬರ ನಡುವಿನ ಸಂಬಧವನ್ನು ಗೌರವಿಸಿ. ನಾನಿರುವ ಸ್ಥಾನಕ್ಕೆ ಹಾಗೂ ನಾನಿರುವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ನಾನು ನಿಮಗೋಸ್ಕರ ಬೆಂಬಲ ನೀಡುತ್ತೇನೆ, ಏನು ಹೇಳುತ್ತೀರ ಎನ್ನುವುದನ್ನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ನನ್ನ ಜತೆಗೆ ಪಕ್ಷದ ಜತೆಗೂ ಪ್ರಚಾರ ಮಾಡುತ್ತಾರೆ ಎಂದರು.
ಸುದೀಪ್ ಮಾತನಾಡಿ, ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಬೊಮ್ಮಾಯಿ ಅವರು ಹೇಳಿದರೆ ಅದನ್ನು ಮಾಡುತ್ತೇನೆ ಎಂದರು. ಬೇರೆ ಪಕ್ಷದಿಂದ ಆಹ್ವಾನಿಸಿದರೂ ಪ್ರಚಾರ ಮಾಡುತ್ತೀರ ಎಂಬ ಪ್ರಶ್ನೆಗೆ, ನನ್ನ ಜೀವನದಲ್ಲಿ ಬೆಂಬಲವಾಗಿ ನಿಂತವರಾರಾದರೂ ಇದ್ದರೆ ಅವರ ಜತೆಗೆ ನಿಲ್ಲುತ್ತೇನೆ. ನಾನು ಈ ಪಕ್ಷ, ಆ ಪಕ್ಷ ಎಂಬುದಕ್ಕೆ ಬರಲಿಲ್ಲ. ಬೊಮ್ಮಾಯಿ ಅವರು ಈ ಪಕ್ಷ ಅಲ್ಲದೆ ಬೇರೆ ಯಾವ ಪಕ್ಷದಲ್ಲಿ ಇದ್ದಿದ್ದರೂ ನಿಲ್ಲುತ್ತಿದ್ದೆ ಎಂದರು.
ಸುದೀಪ್ ಅವರು ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲ ಎಂಬ ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುದೀಪ್, ಅವರೊಬ್ಬ ಒಳ್ಳೆಯ ನಟ. ಅವರೊಟ್ಟಿಗೆ ಮುಂದಿನ ಸಿನಿಮಾ ಯಾವಾಗ ಮಾಡುವುದು ಎಂದು ಕಾಯುತ್ತಿದ್ದೇನೆ ಎಂದಷ್ಟೆ ಹೇಳಿದರು.
ನಾನು ಯಾವುದೇ ಕಾರಣಕ್ಕೆ ರಾಜಕಾರಣ ಪ್ರವೇಶಿಸುತ್ತಿಲ್ಲ. ಫ್ಯಾನ್‌ಗಳ ಬಗ್ಗೆ ಹೇಳಬೇಕೆಂದರೆ, ನಾನು 27 ವರ್ಷದಿಂದ ಗಳಿಸಿದ್ದೇನೆ. ಅವರು ನನ್ನ ನಿಲುವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು. ಮತ್ತೆ ಮಧ್ಯ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಮಾನವೀಯ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಪ್ರಚಾರಕ್ಕೆ ಹಣ ತೆಗೆದುಕೊಳ್ಳುತ್ತಿದ್ದೀರ ಎಂಬ ಪ್ರಶ್ನೆಗೆ, ನನಗೆ ಸಿನಿಮಾ ಕ್ಷೇತ್ರದಿಂದಲೇ ಸಾಕಷ್ಟು ಹಣ ಬರಬೇಕಿದೆ, ಅದನ್ನು ಕೊಡಿಸಿಬಿಡಿ. ನನಗೆ ಹಣ ದುಡಿಯಲು ಸಾಮರ್ಥ್ಯ ಇಲ್ಲ ಎಂದು ತಿಳಿದಿದ್ದೀರ ಎಂದು ಮರುಪ್ರಶ್ನೆ ಹಾಕಿದರು.
ಸಿಎಂ ಅವರು ರಾಜಕೀಯಕ್ಕೆ ಸ್ಪರ್ಧಿಸಿ ಎಂದು ಕೇಳಿದರೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ, ಚಾನ್ಸೇ ಇಲ್ಲ. ನನಗೆ ಸಾಕಷ್ಟು ಸಿನಿಮಾಗಳಿವೆ. ನಾನು ಅನಿವಾರ್ಯವಾಗಿ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಹಾಗೆ ನಿಲ್ಲಬೇಕು ಎಂದರೆ ಸೂಕ್ತ ರೀತಿಯಲ್ಲೇ ನಿಲುವು ತೆಗೆದುಕೊಳ್ಳುತ್ತೇನೆ ಎಂದರು.
ಬೊಮ್ಮಾಯಿ ಅವರು ಹಾಗೂ ಅವರು ಹೇಳುವವರನ್ನು ಬೆಂಬಲಿಸುತ್ತೇನೆ. ನಾನು ಎಲ್ಲರಿಗೂ ಪ್ರಚಾರ ಮಾಡಲು ಆಗುವುದಿಲ್ಲ. ಬೊಮ್ಮಾಯಿ ಅವರು ತಿಳಿಸುವ ಅಗತ್ಯಕ್ಕೆ ಅನುಗುಣವಾಗಿ ಪ್ರಚಾರ ಮಾಡುತ್ತೇನೆ ಎಂದರು.
ಡಿ.ಕೆ. ಶಿವಕುಮಾರ್ ಅವರು ಆಹ್ವಾನಿಸಿದ ಕುರಿತು ಪ್ರತಿಕ್ರಿಯಿಸಿದ ಸುದೀಪ್, ನಟರನ್ನು ಎಲ್ಲರೂ ಆಹ್ವಾನಿಸುತ್ತಾರೆ. ಆದರೆ ನಾವು ಯಾರ ಕುರಿತು ನಿರ್ಧಾರ ಮಾಡಿದ್ದೇವೆಯೋ ಅದನ್ನು ಹೇಳಲು ಬಂದಿದ್ದೇನೆ ಎಂದರು. ಬಿಜೆಪಿ ಜತೆಗೆ ಪ್ರಚಾರಕ್ಕೆ ಜೋಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಎಲ್ಲ ಯೋಜನೆ, ನಿರ್ಧಾರಗಳನ್ನೂ ಗೌರವಿಸುತ್ತೀರ ಎಂಬ ಪ್ರಶನೆಗೆ, ಸರ್ಕಾರದಿಂದ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ. ಕೆಲವು ಒಳ್ಳೆಯ ಕೆಲಸಗಳು ಆದಾಗ ಅದರ ಕುರಿತು ನನ್ನ ಅಭಿಪ್ರಾಯಗಳಿವೆ. ಎಲ್ಲ ವಿಷಯಗಳ ಕುರಿತೂ ಒಪ್ಪಲು ಸಾಧ್ಯವಿಲ್ಲ. ಮೋದಿಯವರ ಕೆಲವು ನಿರ್ಧಾರಗಳನ್ನು ನಾನು ಗೌರವಿಸುತ್ತೇನೆ. ಆದರೆ ಅದ್ಯಾವುದೂ ಇಲ್ಲಿ ನಾನು ಆಗಮಿಸಲು ಪ್ರಭಾವಿಸುವುದಿಲ್ಲ ಎಂದರು.
ಸರ್ಕಾರದ ವಿರುದ್ಧ 40% ಕಮಿಷನ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಸುದೀಪ್, ಭಾರತದಲ್ಲಿ ಕಾನೂನು ಸದೃಢವಾಗಿದೆ, ಅದು ತನ್ನದೇ ಕೆಲಸ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಈ ದೇಶದಲ್ಲಿ ಪ್ರತಿಯೊಬ್ಬರೂ ಇಲ್ಲಿ ಬದುಕುತ್ತಿರುವುದು, ಕಾನೂನಿನಿಂದಾಗಿ. ಹಾಗೊಂದು ವೇಳೆ ಏನಾದರೂ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು. ಐಟಿ, ಇಡಿ ದಾಳಿಗೆ ಹೆದರಿ ಒತ್ತಡಕ್ಕೆ ಬಂದಿದ್ದೀರ ಎಂಬ ಪ್ರಶ್ನೆಗೆ, ನಾನು ಈಟಿ, ಇಡಿಗೆ ಹೆದರುತ್ತೇನೆ ಎಂದು ನಿಮಗೆ ಎನ್ನಿಸುತ್ತದೆಯೇ? ನಾನು ಒತ್ತಡಕ್ಕೆ ಬಂದಿಲ್ಲ, ಪ್ರೀತಿಗಾಗಿ ಬಂದಿದ್ದೇನೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಸುದ್ದಿಗೋಷ್ಠಿಯನ್ನು ಸಿಎಂ ಬಸವರಾಜ ಬೊಮ್ಮಾಯಿಯಾಗಿ ಆಹ್ವಾನಿಸಿದ್ದೇನೆ. ನಾನು ಎಲ್ಲೆಲ್ಲಿ ಹೇಳುತ್ತೇನೆಯೋ ಅಲ್ಲೆಲ್ಲ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರು ಆಗಮಿಸಿರುವುದು ಪಕ್ಷಕ್ಕೆ ಬಹುದೊಡ್ಡ ಶಕ್ತಿ ನೀಡಿದೆ. ಈಗಾಗಲೆ ರಾಜ್ಯದಲ್ಲಿ ಯುವಕರು ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.