Site icon Vistara News

Kidnap Case | ಕುಣಿಗಲ್‌ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಕಾಂಕ್ಷಿ ಅಪಹರಣ; ತನಿಖೆ ಚುರುಕು

nadagundi photo

ತುಮಕೂರು: ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷರ ಅವಿಶ್ವಾಸ ನಿರ್ಣಯ ಹಾಗೂ ಹೊಸ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಗ್ರಾಪಂ ಸದಸ್ಯರೊಬ್ಬರನ್ನು ಅಪಹರಣ (Kidnap Case) ಮಾಡಿರುವ ಪ್ರಕರಣ ಎಡೆಯೂರಿನ ಬಳಿ ಗುರುವಾರ ತಡ ರಾತ್ರಿ ನಡೆದಿದೆ.

ಅಪಹರಣಕ್ಕೊಳಗಾಗಿರುವ ಮಂಜುನಾಥ್

ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿಯ ನಿಡಸಾಲೆ ಗ್ರಾಮದ ವಾಸಿ ಮಂಜುನಾಥ್ ಅಪಹರಣಕ್ಕೆ ಒಳಗಾದ ಗ್ರಾಪಂ ಸದಸ್ಯರು. ಇವರು ನಿಡಸಾಲೆ ಗ್ರಾ.ಪಂ. ಸದಸ್ಯರಾಗಿದ್ದು, ಎಡೆಯೂರಿನ ಹೋಟೆಲ್ ಬಳಿ ಊಟ ಮುಗಿಸಿ ಅವರು ನಿಂತಿದ್ದಾಗ ಅಪಹರಣ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುರುವಾರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ನಿರ್ಧರಿಸಲಾಗಿತ್ತು. ಅವಿಶ್ವಾಸ ಗೊತ್ತುವಳಿ ಬಳಿಕ ಗ್ರಾ.ಪಂ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಸ್ಪರ್ಧೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೆಲ ಸದಸ್ಯರ ಜತೆ ಪ್ರವಾಸಕ್ಕೆ ಹೋಗಿದ್ದರು.

ಇದನ್ನೂ ಓದಿ | JDS ಪಕ್ಷದ ಕೆಲಸವನ್ನು ನಿರ್ಲಕ್ಷ್ಯ ಮಾಡುವ ಪದಾಧಿಕಾರಿಗಳಿಗೆ ಕುಮಾರಸ್ವಾಮಿ ಎಚ್ಚರಿಕೆ

ಗುರುವಾರ ರಾತ್ರಿ ಪ್ರವಾಸ ಮುಗಿಸಿ ಬರುವಾಗ ಎಡೆಯೂರಿನ ಧಾರ್ಣಿಕ ಹೋಟೆಲ್‌ಗೆ ಹೋಗಿ ಊಟ ಮಾಡಿದ್ದರು. ಬಳಿಕ ಹೊರಗೆ ಬಂದು ನಿಂತಿದ್ದ ಮಂಜುನಾಥ್‌ ಬಳಿ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಮಂಜುನಾಥ್‌ರನ್ನು ಅಪಹರಿಸಿದ್ದಾರೆ. ಈ ಸಂಬಂಧ ಇನ್ನೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಕುಮಾರ್ ದೂರು ನೀಡಿದ್ದು, ಕುಣಿಗಲ್‌ ತಾಲೂಕಿನ ಅಮೃತ್ತೂರು ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಪ್ರತಿಭಟನೆ
ಕಿಡ್ನಾಪ್ ಆಗಿರುವ ಮಂಜುನಾಥ್ ಅವರನ್ನು ಶೀಘ್ರವೇ ಹುಡುಕಿಕೊಡಿ ಎಂದು ನಿಡಸಾಲೆ ಗ್ರಾಪಂ ಸದಸ್ಯರ ಒಂದು ಗುಂಪಿನವರು ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

ಅನುಮಾನ ಮೂಡಿಸಿದ ವಿಡಿಯೊ
ಅಪಹೃತ ಗ್ರಾಪಂ‌ ಸದಸ್ಯ ಮಂಜುನಾಥ್ ಅವರ 11 ಸೆಕೆಂಡ್‌ವುಳ್ಳ ವಿಡಿಯೊವನ್ನು ಹರಿಬಿಡಲಾಗಿದ್ದು, “ನನಗೆ ರಾಜಕೀಯ ಜೀವನ ಬೇಸರ ತಂದಿದೆ. ನಾನಾಗಿ ನಾನು ಬಂದಿದ್ದೇನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ” ಎಂದು ಹೇಳಿದ್ದಾರೆ. ಹೀಗಾಗಿ ಈ ವಿಡಿಯೊವನ್ನು ಬಲವಂತವಾಗಿ ಮಾಡಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ v/s ಕಾಂಗ್ರೆಸ್ ಜಟಾಪಟಿ

ಗ್ರಾ.ಪಂ ಸದಸ್ಯನ‌ ಅಪಹರಣ ಪ್ರಕರಣ ದಾಖಲಾಗಿದ್ದರೂ ಅವಿಶ್ವಾಸ ಗೊತ್ತುವಳಿ ಸಭೆ ನಡೆಸಲಾಗಿದ್ದು, ಕಾಂಗ್ರೆಸ್‌ನವರ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಗರಾಜಯ್ಯ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್‌ ಕುಣಿಗಲ್‌ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಕನಕಪುರ ಮಾಡಲು ಹೊರಟಿದ್ದಾರೆ. ಸ್ವಾಭಿಮಾನಿ ಕುಣಿಗಲ್ ಜನತೆ ಈ ಗೂಂಡಾಗಿರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಜಗದೀಶ್ ನಾಗರಾಜಯ್ಯ ಎಚ್ಚರಿಕೆ ನೀಡಿದರು.

ಅಪಹರಣವಾದ ಮಂಜುನಾಥ್‌ನಿಂದ ಗನ್‌ಪಾಯಿಂಟ್‌‌‌ನಲ್ಲಿ ಹೇಳಿಕೆ ಕೊಡಿಸಿದಂತಿದೆ. ಆ ವಿಡಿಯೊ ನೋಡಿದರೆ ತುಂಬಾ ಭಯದ ವಾತಾವರಣದಲ್ಲಿ ಹೇಳಿಕೆ ನೀಡಿದಂತಿದೆ. ಬಲವಂತವಾಗಿ ಥಳಿಸಿ ಕಾರಿನಲ್ಲಿ ಅಪಹರಣ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ತುಮಕೂರು ಪಾಲಿಕೆ ಸಿಬ್ಬಂದಿಗೆ ಬ್ಲ್ಯಾಕ್‌ಮೇಲ್‌: ಬಿಗ್‌ ಬಾಸ್‌ ಖ್ಯಾತಿಯ ಮಂಜು ಪಾವಗಡ ಸೋದರನಿಗೆ ತೀವ್ರ ಥಳಿತ

Exit mobile version