Site icon Vistara News

Kidnaping Case: ಮೈಸೂರಿನಲ್ಲಿ ಉದ್ಯಮಿ ಕಿಡ್ನಾಪ್‌ ಮಾಡುವುದಕ್ಕೆ ದೇವರಿಗೆ ಹರಕೆ, ಬಂದ ಹಣದಲ್ಲಿ ಹುಂಡಿಗೆ ಕಾಣಿಕೆ!

Kidnapped

ಮೈಸೂರು: ಅಂದುಕೊಂಡ ಕೆಲಸ ಆಗಲೆಂದು ದೇವರಲ್ಲಿ ಪ್ರಾರ್ಥಿಸಿ, ಹರಕೆ ಕಟ್ಟಿಕೊಳ್ಳುವುದು ಮಾಮೂಲಿ. ಆದರೆ ಕಿಡ್ನ್ಯಾಪ್‌ ಮಾಡುವುದಕ್ಕೂ ಹರಕೆ ಕಟ್ಟಿಕೊಂಡು, ಅವರಿಂದ ಪೀಕಿದ ಹಣವನ್ನೂ ಹುಂಡಿಗೆ ಹಾಕಿದ ವಿಲಕ್ಷಣ ಘಟನೆ ಮೈಸೂರಿನಲ್ಲಿ ನಡೆದಿದೆ. ಉದ್ಯಮಿಯನ್ನು ಅಪಹರಣ (Kidnaping Case) ಮಾಡಿದ್ದ ಖರ್ತನಾಕ್‌ ಗ್ಯಾಂಗ್‌ವೊಂದು ಕಾಣಿಕೆಯಾಗಿ 55 ಸಾವಿರ ರೂ. ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫೆ.6ರಂದು ಉದ್ಯಮಿಯ ಕಿಡ್ನಾಪ್ ಆಗಿತ್ತು. ಒಂದೇ ವಾರದಲ್ಲಿ ಪ್ರಕರಣ ಭೇದಿಸಿರುವ ಮೈಸೂರು ಪೊಲೀಸರು, 10 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 21 ಲಕ್ಷ ರೂ. ಹಣ, ಎರಡು ಕಾರು, ಮೂರು ಬೈಕ್, 5 ಡ್ರಾಗರ್, 2 ಲಾಂಗ್, 11 ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧನವಾಗಿರುವ 10 ಆರೋಪಿಗಳ ಪೈಕಿ ಕಿಂಗ್​ಪಿನ್​ ಮಂಡ್ಯ ಮೂಲದವನು. 20ನೇ ವಯಸ್ಸಿನಲ್ಲೇ ಕೊಲೆ ಮಾಡಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಕೊಲೆ ಯತ್ನ, ಹಲ್ಲೆ, ಬೆದರಿಕೆ, ದರೋಡೆ ಹೀಗೆ ಹತ್ತಾರು ಕೇಸ್​ಗಳಲ್ಲಿ ಬೇಕಾಗಿದ್ದ ದುಷ್ಕರ್ಮಿಗಳೆಲ್ಲ ಸೇರಿಕೊಂಡು ನಂಜನಗೂಡು ಮೂಲದ ಉದ್ಯಮಿ ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಹಾಗೂ ಪುತ್ರ ಹರ್ಷ ನನ್ನು ಕಿಡ್ನಾಪ್ ಮಾಡಿದ್ದರು.

ಬಳಿಕ ಅವರದ್ದೇ ಫೋನ್​ನಿಂದ ಕರೆ ಮಾಡಿಸಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. 35 ಲಕ್ಷ ರೂ. ಪಡೆದುಕೊಂಡು ಒಂದು ಗಂಟೆ ನಂತರ ಬಿಟ್ಟು ಕಳುಹಿಸಿದ್ದರು. ಈ ಪೈಕಿ 55 ಸಾವಿರ ರೂ.ಗಳನ್ನು ದೇವರ ಹುಂಡಿಗೆ ಹಾಕಿದ್ದಾರೆ. ತನಿಖೆ ವೇಳೆ ಈ ವಿಚಾರವನ್ನು ಆರೋಪಿಗಳೇ ಬಾಯಿ ಬಿಟ್ಟಿದ್ದಾರೆ ಎಂದು ಮೈಸೂರು ಎಸ್‌ಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಜಸ್ಟ್‌ ಗುರಾಯಿಸಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ; ಬಿಡಿಸಲು ಹೋದ ಐವರಿಗೆ ಗಂಭೀರ ಗಾಯ

ಮೂರು ತಂಡಗಳನ್ನು ರಚಿಸಿದ್ದ ಪೊಲೀಸರು

ಕಿಡ್ನ್ಯಾಪ್​ ನಡೆದ ಕ್ಷಣದಲ್ಲೇ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂಜನಗೂಡು ಡಿವೈಎಸ್‌ಪಿ ಗೋವಿಂದರಾಜು, ಇನ್ಸ್​ಪೆಕ್ಟರ್ ಶಿವನಂಜಶೆಟ್ಟಿ ನೇತೃತ್ವದಲ್ಲಿ ಮೂರು ತಂಡ ರಚಿಸಿ ಉದ್ಯಮಿ ಹಾಗೂ ಆತನ ಪುತ್ರನನ್ನು ರಕ್ಷಿಸಲು ಕ್ರಮ ವಹಿಸಲಾಗಿತ್ತು. ಇದೀಗ 10 ಆರೋಪಿಗಳ ಬಂಧನವಾಗಿದ್ದು, ಒಬ್ಬ ತಲೆ ಮರೆಸಿಕೊಂಡಿದ್ದಾನೆ. ಸದ್ಯ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕಿಡ್ನ್ಯಾಪ್​ ಮಾಡಿ, ಹೆದರಿಸಿ ಬೆದರಿಸಿ ಹಣ ಪಡೆದು ಅದರಲ್ಲಿ ದೇವರಿಗೂ ಪಾಲು ನೀಡಿರುವ ವಿಲಕ್ಷಣ ಘಟನೆಗೆ ಮೈಸೂರು ಸಾಕ್ಷಿ ಆಗಿದೆ.

Exit mobile version