ಬೆಂಗಳೂರು: ಕೆಲಸಗಾರರನ್ನೂ ಮನೆ ಮಕ್ಕಳಂತೆ ನೋಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಬಹಳ ಅಪರೂಪ. ಜೀತದಾಳುಗಳಂತೆ ನಡೆಸಿಕೊಳ್ಳುವ ಮಾಲೀಕರ ಪೈಕಿ ಆ ಫ್ಯಾಕ್ಟರಿ ಮಾಲೀಕ ತನ್ನ ಕೆಲಸಗಾರರನ್ನು ಎಂದಿಗೂ ನಿರ್ಲಕ್ಷ್ಯ ಮಾಡಿರಲಿಲ್ಲ. ಆದರೆ ಹೊಟ್ಟೆ-ಬಟ್ಟೆ ಕಟ್ಟಿಕೊಂಡ ಆ ನಂಬಿಕೆ ದ್ರೋಹಿಗಳು, ಸಿರಿವಂತಿಕೆಯ ಹಿಂದೆ ಬಿದ್ದು ಜೈಲು ದಾರಿ ಹಿಡಿದಿದ್ದಾರೆ. ತನ್ನನ್ನು ಯಾರೋ ಕಿಡ್ನ್ಯಾಪ್ (Kidnapping Case) ಮಾಡಿದ್ದಾರೆ ಎಂದು ಸ್ನೇಹಿತರಿಂದಲೇ ಕರೆ ಮಾಡಿಸಿ 2 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿ ಎಲ್ಲರೂ ಜೈಲುಪಾಲಾಗಿದ್ದಾರೆ.
ಫ್ಯಾಕ್ಟರಿ ಮಾಲೀಕ ಮೊಹಮ್ಮದ್ ಆಸೀಫ್ ಹಬೀಬ್ ಎಂಬುವವರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಆರ್.ಟಿ ನಗರ ಪೊಲೀಸರು ನೂರುಲ್ಲ ಹುಸೇನ್ , ಅಬೂಬಕರ್ ಹಾಗೂ ಆಲಿ ರೇಜಾ ಎಂಬುವವರನನ್ನು ಬಂಧಿಸಿದ್ದಾರೆ.
ಬಿಹಾರ ಮೂಲದ ನೂರುಲ್ಲಾ ಎಂಬಾತ ಮೊಹಮ್ಮದ್ ಅಸೀಫ್ ಅವರ ಬಳಿ ಕಳೆದ 8 ವರ್ಷದಿಂದ ಕೆಲಸ ಮಾಡಿಕೊಂಡಿದ್ದ. ಮೊಹಮ್ಮದ್ ಅಸೀಫ್ ಹಾಗೂ ಅವರ ತಂದೆ ಈ ನೂರುಲ್ಲಾನನ್ನು ಬೇಟಾ (ಮಗನೇ) ಎಂದೇ ಕರೆಯುತ್ತಿದ್ದರು. ಅದೂ ಅಲ್ಲದೆ ಅವರದ್ದೇ ಮನೆಯಲ್ಲಿ ಆತನಿಗೆ ಆಶ್ರಯ ನೀಡಿದ್ದರು. ಇಷ್ಟೆಲ್ಲಾ ಸೌಕಾರ್ಯದೊಂದಿಗೆ ಚೆನ್ನಾಗಿ ನೋಡಿಕೊಂಡರೂ ನಿಯತ್ತಿಲ್ಲದ ನೂರುಲ್ಲ ಹಣದಾಸೆಗೆ ಬಿದ್ದಿದ್ದ.
ಇದನ್ನೂ ಓದಿ: Tumkur News : ಮನೆಯಲ್ಲಿ ನೇತಾಡುತ್ತಿದ್ದ ದಂಪತಿ ಶವ! ಕೈ ಹಿಡಿದವಳ ವೇಲೇ ಕುಣಿಕೆ
ನನ್ನ ಸಾಯಿಸಿ ಬಿಡ್ತಾರೆ, ಅಕೌಂಟ್‌ಗೆ ಹಣ ಹಾಕಿ.. ಕಾಪಾಡಿ
ಈ ನೂರುಲ್ಲ ತನ್ನ ಮಾಲೀಕ ಮೊಹಮ್ಮದ್ ಅಸೀಫ್‌ಗೆ ಫೋನ್ ಮಾಡಿ ನನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ. 2 ಲಕ್ಷ ರೂ. ಕೊಟ್ಟರೆ ಬಿಟ್ಟು ಬಿಡುತ್ತಾರೆ, ಇಲ್ಲವಾದರೆ ಕೊಂದು ಹಾಕುತ್ತಾರೆ ಎಂದಿದ್ದ. ಇದರಿಂದ ಸಹಜವಾಗಿಯೇ ಬೆದರಿದ ಮಾಲೀಕ ಮತ್ತೆ ಮತ್ತೆ ಕರೆ ಮಾಡಿ ನೂರುಲ್ಲಗೆ ಧೈರ್ಯ ತುಂಬಿದ್ದರು. ಮಾತ್ರವಲ್ಲ 8 ವರ್ಷದಿಂದ ಜತೆಗೆ ಇದ್ದವನ ಪ್ರಾಣಕ್ಕೆ ಕುತ್ತು ಬಂದರೆ ಎಂದು ಹಣದ ಕುರಿತು ಚಿಂತಿಸದೇ ಕಿಡ್ನ್ಯಾರ್ಪ್‌ಗಳ ಅಕೌಂಟ್ ನಂಬರ್ ಕೇಳಿದ್ದರು.
ಈ ವೇಳೆ ನೂರುಲ್ಲ ಕಿಡ್ನ್ಯಾರ್ಪ್‌ಸ್ ನಿನ್ನ ಅಕೌಂಟ್‌ಗೆ ಹಾಕಿಸಿಕೋ ಎನ್ನುತ್ತಿದ್ದಾರೆ ಎಂದಿದ್ದ. ಇದರಿಂದ ಮೊಹಮ್ಮದ್ ಅಸೀಪ್ ಅನುಮಾನ ಬಂದು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದರು. ಅಲರ್ಟ್ ಆದ ಪೊಲೀಸರು ನೂರುಲ್ಲಾನ ಮೊಬೈಲ್ ಟ್ರಾಕ್ ಮಾಡಿಸಿದಾಗ ಮಂಡ್ಯದ ಪಾರ್ಕ್ ಒಂದರಲ್ಲಿ ನಂಬರ್ ಬ್ಲಿಂಕ್ ಆಗಿದೆ .
ತಕ್ಷಣ ಮಂಡ್ಯ ಪೊಲೀಸರಿಗೆ ತಿಳಿಸಿದಾಗ ಈ ಮೂವರು ಪಾರ್ಕ್‌ನಲ್ಲಿ ಕೂತು ಕರೆ ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದ ಮಂಡ್ಯ ಪೊಲೀಸರು, ಆರ್.ಟಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಳಗಿನ ಜಾವ ಓಲಾ ಕಾರಿನಲ್ಲಿ ಮಂಡ್ಯಕ್ಕೆ ತೆರಳಿ ಅಲ್ಲಿಂದ ಈ ಕಿಡ್ನ್ಯಾಪ್ ಡ್ರಾಮಾ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಒಂದು ವೇಳೆ ಅಕೌಂಟ್‌ಗೆ ಹಣ ಹಾಕಿದ್ದರೆ, ಮಾಲೀಕನಿಗೆ ಅನುಮಾನ ಬಾರದಂತೆ ವಾಪಸ್ ಮನೆ ಸೇರುವುದು ಅವರ ಪ್ಲಾನ್ ಆಗಿತ್ತು. ಆದರೆ ಟೈಂ ಅನ್ನೋದು ಕೈ ಕೊಟ್ಟರೆ ಯಾರು ಹೇಗೆಲ್ಲ ಸಿಕ್ಕಿ ಬೀಳುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಸದ್ಯ ಈ ಸಂಬಂಧ ಆರ್.ಟಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ