ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವಕರಿಬ್ಬರ ಅಪಹರಣ ಪ್ರಕರಣಕ್ಕೆ (Kidnapping Case) ತಿರುವು ಸಿಕ್ಕಿದ್ದು, ಆತನ ಜತೆಗೆ ಇದ್ದವಳೇ ಕಿಡ್ನ್ಯಾಪ್ ಮಾಡಿಸುವ ಮೂಲಕ ಸುಲಿಗೆಗೆ ಇಳಿದಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕಾಲ್ ಗರ್ಲ್ ಆಗಿ ಬಂದವಳು ಕಿಡ್ನ್ಯಾಪರ್ ಆದ ಕಥೆ ಇದಾಗಿದೆ. ಅತಿಯಾಸೆಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನದೇ ಗಿರಾಕಿಯನ್ನು ನಾಟಕವಾಡಿ ಅಪಹರಿಸಿ ಈಗ ಸಿಕ್ಕಿಬಿದ್ದಿದ್ದಾಳೆ.
ಪ್ರಿಯಾ, ತಿರುಮಲೇಶ್, ನವೀನ್, ಕೆಂಪರಾಜ್, ಮುಖೇಶ ಹಾಗೂ ಮಂಜುನಾಥ್, ಭರತ್ ಮತ್ತು ದಲ್ಪೀರ್ ಸಾಹುದ್ ಎಂಬವರ ಗ್ಯಾಂಗ್ ರಜನಿಕಾಂತ್ ಹಾಗೂ ಮಂಜುನಾಥ್ ಎಂಬಾತನನ್ನು ಕಿಡ್ನ್ಯಾಪ್ ಮಾಡಿತ್ತು. ಐದು ಲಕ್ಷ ಕೊಡದಿದ್ದರೆ ಹೆಣವೂ ಸಿಗುವುದಿಲ್ಲ ಎಂದು ಧಮ್ಕಿ ಬೇರೆ ಹಾಕಿದ್ದರು. ರಜನಿಕಾಂತ್ ಜತೆ ಯುವತಿ ಕೂಡ ಕಿಡ್ನ್ಯಾಪ್ ಆಗಿದ್ದಾರೆಂದು ನಂಬಿ ಪೊಲೀಸರು ನಿರಂತರ ಹುಡುಕಾಟ ನಡೆಸಿದಾಗ ಮಂಡ್ಯದ ಬಳಿ ಸಿಕ್ಕಿಬಿದ್ದರು. ವಿಚಾರಣೆ ನಡೆಸಿದಾಗ ಸಿಕ್ಕಿಬಿದ್ದವರು ಬೊಟ್ಟು ಮಾಡಿ ತೋರಿಸಿದ್ದು ಒಬ್ಬ ಯುವತಿಯ ಕಡೆಗೆ.
ಹುಡುಗಿಯರನ್ನು ಬುಕ್ ಮಾಡಿ ಕರೆದೊಯ್ದಿದ್ದ ಯುವಕರು
ಮಂಜುನಾಥ್ ಎಂಬಾತ ಆ್ಯಪ್ ಆಧಾರಿತ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಆಪ್ತ ಸ್ನೇಹಿತನಾಗಿದ್ದವನು ರಜನಿಕಾಂತ್. ಈ ರಜನಿಕಾಂತ್ ಹಾಗೂ ಮಂಜುನಾಥ್ ಇಬ್ಬರು ಸೇರಿ ಕಾಲ್ ಗರ್ಲ್‌ನ್ನು ಬುಕ್ ಮಾಡಿದ್ದರು. ಆಕೆಗೆ ಪಿಕಪ್ ಪಾಯಿಂಟ್ ತಿಳಿಸಿ ಟೈಮಿಂಗ್ ಹೇಳಿದ್ದರು.
ಇದಕ್ಕೂ ಮುನ್ನ ಇಬ್ಬರು ಬಾರ್‌ವೊಂದರಲ್ಲಿ ಕಂಠ ಪೂರ್ತಿ ಕುಡಿದು ತಮ್ಮದೇ ಕ್ಯಾಬ್‌ನಲ್ಲಿ ಕೆಂಗೇರಿಗೆ ಹೋಗಿ ಯುವತಿಯನ್ನು ಪಿಕ್ ಮಾಡಿದ್ದಾರೆ. ರಜನಿಕಾಂತ್‌ನ ಮನೆ ಬಳಿ ಇರುವ ದೇವರಚಿಕ್ಕನಹಳ್ಳಿಗೆ ಬಂದು ಓಯೋ ರೂಂನಲ್ಲಿ ಕಾಲ ಕಳೆದಿದ್ದಾರೆ. ತಡರಾತ್ರಿ 1.30ರ ಬಳಿಕ ಯುವತಿಯನ್ನು ಡ್ರಾಪ್ ಮಾಡುವ ಸಲುವಾಗಿ ಕ್ಯಾಬ್‌ನಲ್ಲಿ ದೇವರಚಿಕ್ಕನಹಳ್ಳಿ ಬಳಿ ತೆರಳುತ್ತಿದ್ದಂತೆ ಬೈಕ್‌ನಲ್ಲಿ ಬಂದ ನಾಲ್ವರು ಕಾರನ್ನು ಅಡ್ಡ ಹಾಕಿದ್ದಾರೆ.
ಗಾಡಿಗೆ ಡಿಕ್ಕಿ ಹೊಡೆದಿದ್ದಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡಿದ್ದಾರೆ. ಈ ಮಧ್ಯೆ ಮಂಜುನಾಥ್ ಕೋಳಿಫಾರಂ ಸರ್ಕಲ್ ಬಳಿ ಕಾರಿನಿಂದ ಜಿಗಿದು ಓಡಿ ಹೋಗಿದ್ದಾನೆ. ದಾರಿಯಲ್ಲಿ ಸಿಕ್ಕ ಇನ್ನೋವಾ ಕಾರ್ ಡ್ರೈವರ್ ಬಳಿ ಮೊಬೈಲ್ ತೆಗೆದುಕೊಂಡು ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾನೆ.
ಇತ್ತ ಮಂಜುನಾಥ್ ಜಿಗಿಯುತ್ತಿದ್ದಂತೆ ಕ್ಯಾಬ್‌ನಲ್ಲಿದ್ದವರು ರಜನಿಕಾಂತ್ ಹಾಗೂ ಯುವತಿಯನ್ನು ಕೂರಿಸಿಕೊಂಡು ಪರಾರಿ ಆಗಿದ್ದಾರೆ. ಅನ್ಯಾಯವಾಗಿ ತನ್ನ ಸ್ನೇಹಿತನ ಜತೆ ಯುವತಿ ಕೂಡ ಕಿಡ್ನ್ಯಾಪ್ ಆಗಿದ್ದಾಳಲ್ಲ ಎಂದು ಮಂಜುನಾಥ್ ಕೊರಗುತ್ತಿದ್ದ. ಆದರೆ ದೂರಿನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಪ್ರಕರಣದಲ್ಲಿ ಯುವತಿಯದ್ದೆ ಪ್ರಮುಖ ಪಾತ್ರ ಎಂದು ತಿಳಿದು ಬಂದಿದೆ.
ಓಯೋ ರೂಂನಲ್ಲಿದ್ದಾಗಲೇ ಯುವತಿಯಿಂದ ಲೊಕೇಷನ್ ಶೇರಿಂಗ್
ಮಂಜುನಾಥ್ ಹಾಗೂ ರಜನಿಕಾಂತ್ ಇಬ್ಬರ ಜತೆ ಇದ್ದಾಗಲೇ ಯುವತಿ ಓಯೋ ರೂಂನ ಲೊಕೇಷನ್ ಅನ್ನು ತನ್ನ ಗ್ಯಾಂಗ್ಗೆ ಶೇರ್ ಮಾಡಿದ್ದಳು. ನಂತರ ಫಾಲೋ ಮಾಡಿದ್ದ ಆಕೆಯ ಗ್ಯಾಂಗ್ ಇಬ್ಬರನ್ನೂ ಕಿಡ್ನ್ಯಾಪ್ ಮಾಡುವ ಉದ್ದೇಶ ಹೊಂದಿತ್ತು. ಆದರೆ ಮಂಜುನಾಥ್ ಕಾರಿನಿಂದ ಜಿಗಿದು ಎಸ್ಕೇಪ್ ಆಗಿದ್ದ. ರಜನಿಕಾಂತ್ನನ್ನು ಕಿಡ್ನ್ಯಾಪ್ ಮಾಡಿ ಐದು ಲಕ್ಷ ಹಣಕ್ಕೆ ಡಿಮ್ಯಾಂಡ್ ಕೂಡ ಮಾಡಿದ್ದಾರೆ. ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ತೆರಳಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಾಲಕ್ಕೆ ಸಿಲುಕಿಕೊಂಡವರ ದೌರ್ಬಲ್ಯವೇ ಟಾರ್ಗೆಟ್
ತನಿಖೆಯಲ್ಲಿ ಈ ಗ್ಯಾಂಗ್ನ ಕೃತ್ಯ ಇದು ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಕೃತ್ಯಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ. ಲೈಂಗಿಕ ಚಟುವಟಿಕೆ ಜಾಲದಲ್ಲಿ ಸಿಲುಕಿಕೊಳ್ಳುವವರು ಸಮಸ್ಯೆ ಆದಾಗ ಮರ್ಯಾದೆಗೆ ಅಂಜಿ ಹಾಗೂ ಮುಜುಗರದಿಂದಾಗಿ ಠಾಣೆ ಮೆಟ್ಟಿಲು ಏರುವುದಿಲ್ಲ. ಬದಲಿಗೆ ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಇಂತಹವರನ್ನೇ ಟಾರ್ಗೆಟ್ ಮಾಡುವ ಈ ಕಾಲ್ ಗರ್ಲ್ ಗ್ಯಾಂಗ್ ನಾಟಕವಾಡಿ, ಸುಲಿಗೆ ಮಾಡುತ್ತಾರೆ. ಸದ್ಯ ಈ ಪ್ರಕರಣ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ