ಹುಬ್ಬಳ್ಳಿ: ಹುಟ್ಟಿದ್ದು ಒಂದು ಕೊಟ್ಟಿದ್ದು ಮತ್ತೊಂದು ಮಗು! ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ (Kims Hospital) ಸಿಬ್ಬಂದಿ ಎಡವಟ್ಟು ಪೋಷಕರಿಗೆ ತಲೆಕೆಟ್ಟು ಹೋಗಿತ್ತು. ಹಸುಗೂಸುಗಳನ್ನು ಅದಲು ಬದಲು ಮಾಡಿದ ಕಿಮ್ಸ್ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ಗಂಡು ಮಗು ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತವ್ವ ಪೂಜಾರ್ ಎಂಬಾಕೆ ಕಳೆದ 15 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿನ ತೂಕ ಕಡಿಮೆ ಇದ್ದ ಕಾರಣಕ್ಕೆ ಕಿಮ್ಸ್ ವೈದ್ಯರು ಐಸಿಯುನಲ್ಲಿ ಇರಿಸಿದ್ದರು.
15 ದಿನಗಳ ಬಳಿಕ ಮುತ್ತವ್ವಗೆ ಜನಿಸಿದ ಗಂಡು ಮಗು ಬದಲಿಗೆ ಹೆಣ್ಣು ಮಗುವನ್ನು ನೀಡಿದ್ದಾರೆ. ಹಾಲುಣಿಸುವಾಗ ಇದು ಗಮನಕ್ಕೆ ಬಂದಿದ್ದು, ತಮ್ಮದಲ್ಲದ ಮಗುವನ್ನು ಮಡಿಲಿನಲ್ಲಿ ಕಂಡು ಪೋಷಕರು ದಿಗ್ಭ್ರಮೆಗೊಂಡಿದ್ದಾರೆ. ಕಿಮ್ಸ್ ಸಿಬ್ಬಂದಿ ಮಾಡಿದ ಎಡವಟ್ಟು ತಾಯಂದಿರಿಗೆ ಕ್ಷಣಕಾಲ ದಿಕ್ಕೇ ತೋಚದಂತಾಗಿತ್ತು.
ಹೆಣ್ಣು ಹೆತ್ತವರಿಗೆ ಗಂಡು ಮಗು ನೀಡಿ, ಗಂಡು ಹೆತ್ತವರಿಗೆ ಹೆಣ್ಣು ಮಗು ನೀಡಿದ್ದಾರೆ. ಕೂಡಲೇ ಪೋಷಕರು ಕಿಮ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಮೊದಲು ನಿಮಗೆ ಹೆಣ್ಣು ಮಗುವೇ ಜನಿಸಿದ್ದು ಎಂದು ವಾದ ಮಾಡಲು ಮುಂದಾಗಿದ್ದಾರೆ. ಬಳಿಕ ಪೋಷಕರು ದಾಖಲೆಗಳನ್ನು ತೋರಿಸಿದಾಗ ಸಿಬ್ಬಂದಿ ತಾವು ಮಾಡಿದ್ದು ಎಡವಟ್ಟು ಎಂದು ಗೊತ್ತಾಗಿದೆ. ವೈದ್ಯರನ್ನೇ ನಾವು ದೇವರು ಎಂದು ಭಾವಿಸುತ್ತೇವೆ, ಅವರೇ ಹೀಗೆ ಮಾಡಿದ್ದರೆ ಹೇಗೆ ಎಂದು ಕಿಡಿಕಾರಿದ್ದಾರೆ. ವಿಷಯ ಗಮನಕ್ಕೆ ಬರುತ್ತಿದ್ದಂತೆ ಕಿಮ್ಸ್ನ ವೈದ್ಯಕೀಯ ಅಧೀಕ್ಷಕರು ಆಯಾ ಪೋಷಕರಿಗೆ ಮಗು ಬದಲಿಸಿ ಕೊಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ