Site icon Vistara News

Video viral | ಸರಕಾರಿ ಬಸ್‌ನಲ್ಲಿ ಡ್ರೈವರ್‌ ಕಾಲಡಿಯೇ ಹೆಡೆ ಎತ್ತಿ ಬುಸುಗುಟ್ಟಿದ ಕಾಳಿಂಗ ಸರ್ಪ! ಮುಂದೇನಾಯ್ತು?

ಕಾಳಿಂಗ ಸರ್ಪ

ಚಿಕ್ಕಮಗಳೂರು: ಬಸ್‌ ಚಾಲಕ ಎಕ್ಸಿಲೇಟರ್‌ ತುಳಿಯುವಾಗ ಯಾಕೋ ಸುಮ್ಮನೆ ಕೆಳಗೆ ನೋಡಿದ್ದಾನೆ. ಕೆಳಗೆ ನೋಡಿದರೆ ಪಾದದಿಂದ ಕೇವಲ ಒಂದಡಿ ದೂರದಲ್ಲಿ ಕಾಳಿಂಗ ಸರ್ಪವೊಂದು ಹೆಡೆ ಬಿಚ್ಚಿ ಕುಳಿತಿದೆ!

ಕಾಳಿಂಗ ಸರ್ಪವನ್ನು ದೂರದಿಂದ ನೋಡಿದರೇ ಮೈ ಜುಮ್ಮೆನ್ನುತ್ತದೆ. ಸುಮ್ಮನೆ ಒಮ್ಮೆ ಹೆಡೆ ಬೀಸಿದರೆ ಸಾಕು ಅಷ್ಟೇ ದೂರದಲ್ಲಿ ಅದು ಬಂದು ಕುಳಿತಿದ್ದನ್ನು ನೋಡಿದ ಆ ಚಾಲಕನ ಎದೆ ಹೇಗೆ ಹೊಡೆದುಕೊಂಡಿರಬಹುದು ಊಹಿಸಿ. ಅದಕ್ಕಿಂತಲೂ ಹೆಚ್ಚಾಗಿ ಎದೆ ನಡುಗಿಸುವ ಸಂಗತಿ ಎಂದರೆ ಅದೆಷ್ಟು ಹೊತ್ತಿಂದ ಅ ಹಾವು ಅಲ್ಲಿ ಕುಳಿತಿತ್ತೋ ಏನೋ?! ಹಾಗಿದ್ದರೂ ಅದು ಸುಮ್ಮನೆ ಏನೂ ಮಾಡದೆ ಕುಳಿತಿತ್ತಲ್ಲ. ಅದೃಷ್ಟ ಅಂದರೆ ಅದೇ ಅಲ್ವಾ?

ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ! ಶೃಂಗೇರಿಯಿಂದ ಬೆಂಗಳೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ ಅದು. ಬಸ್‌ ಕೊಪ್ಪ ತಾಲೂಕಿನ ಜಯಪುರ ಗ್ರಾಮ ತಲುಪಿತ್ತು. ಅದುವರೆಗೆ ಆರಾಮದಲ್ಲಿ ಬಸ್‌ ಚಲಾಯಿಸುತ್ತಿದ್ದ ಚಾಲಕ ಸುಮ್ಮನೆ ಒಮ್ಮೆ ಕೆಳಗೆ ಬಗ್ಗಿ ನೋಡಿದ್ದಾನೆ. ಆಗ ಅವನಿಗೆ ಕಾಲಿನಿಂದ ಸ್ವಲ್ಪವೇ ದೂರದಲ್ಲಿ ಹೆಡೆ ಎತ್ತಿದ ಕಪ್ಪು ಕಪ್ಪು ಕಾಳಿಂಗ ಸರ್ಪ ಕಂಡಿದೆ!

ಆತ ಗಾಬರಿಗೊಂಡರೂ ಅವಸರ ಮಾಡದೆ ಮೆಲ್ಲನೆ ಬಸ್‌ನ್ನು ನಿಲ್ಲಿಸಿ ಕೆಳಗೆ ಇಳಿದಿದ್ದಾನೆ. ಎದುರುಗಡೆ ಕಾಳಿಂಗ ಸರ್ಪ ಇದೆ ಎಂದು ಪ್ರಯಾಣಿಕರಿಗೆ ಹೇಳಿದಾಗ ಅವರು ಮಾತ್ರ ಎದ್ದೆವೋ ಬಿದ್ದೆವೋ ಎಂದು ಕೆಳಗಿಳಿದು ಓಡಿದರು. ಕೆಲವರು ಕುತೂಹಲಿಗಳು ಇಣುಕಿದರು.

ಹೊಡೀತಿದ್ರೆ ನಂಗೆ ಟಿಕೆಟೆ!
ಘಟನೆ ಹೇಗೆ ನಡೆಯಿತು ಎಂದು ಇತರ ಪ್ರಯಾಣಿಕರಿಗೆ ವಿವರಿಸುವ ಚಾಲಕ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಟಿಕೆಟೆ ಎಂದು ಆರಾಮವಾಗಿ ಹೇಳುತ್ತಾನೆ. ʻಅಪ್ಪ ಹೋಗೋ ಇಳ್ಕೊಳ್ಳೋ ದೇವರೇʼ ಎಂದು ಹೇಳುತ್ತಾನೆ. ಅಂತಿಮವಾಗಿ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಹಿಡಿಯಲಾಗುತ್ತದೆ ಅನ್ನುವಲ್ಲಿಗೆ ಭಯಾನಕ ಅಂಕವೊಂದಕ್ಕೆ ತೆರೆ ಬೀಳುತ್ತದೆ. ಘಟನೆಯ ವಿಡಿಯೊ ಕೆಲವೇ ಕ್ಷಣಗಳಲ್ಲಿ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

ಇದನ್ನೂ ಓದಿ | ಗಣೇಶೋತ್ಸವ ಭದ್ರತೆಗೆ ಹೋಗಿದ್ದ ಪೊಲೀಸರು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದು ನಿಜ, ಸಿಕ್ಕಿತು ಮೃತದೇಹ

Exit mobile version