Site icon Vistara News

ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್‌ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ

kishan reddy bjp appointed as karnataka incharge for rajyasabha

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವತಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ ಅವರನ್ನು ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ಉಸ್ತುವಾರಿಯಾಗಿ ನೇಮಕ ಮಾಡಿ ಬಿಜೆಪಿ ನೇಮಕ ಮಾಡಿದೆ.

ಕೇಂದ್ರ ಬಿಜೆಪಿ ಕಚೇರಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಈ ಆದೇಶ ಹೊರಡಿಸಿದ್ದಾರೆ. ಕರ್ನಾಟಕಕ್ಕೆ ಕಿಶನ್‌ ರೆಡ್ಡಿ ನೇಮಕವಾದರೆ, ಮಹಾರಾಷ್ಟ್ರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಹರಿಯಾಣಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ರಾಜಸ್ಥಾನಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೇಮಕವಾಗಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!

ಇದೀಗ ಸದಸ್ಯರಾಗಿರುವ ಕಾಂಗ್ರೆಸ್‌ನ ಜೈರಾಮ್‌ ರಮೇಶ್‌, ಬಿಜೆಪಿಯ ನಿರ್ಮಲಾ ಸೀತಾರಾಮನ್‌ ಅವರಿಗೆ ಅವೆರಡೂ ಪಕ್ಷಗಳು ಮತ್ತೆ ಅವಕಾಶ ಕಲ್ಪಿಸಿವೆ. ಇನ್ನು, ಕೆ.ಸಿ. ರಾಮಮೂರ್ತಿ ಹಾಗೂ 2021ರ ಸೆಪ್ಟೆಂಬರ್‌ 13ರಂದು ನಿಧನರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫರ್ನಾಂಡೀಸ್‌ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಬಿಜೆಪಿಯಿಂದ ನವರಸನಾಯಕ ಜಗ್ಗೇಶ್‌ ಆಯ್ಕೆಯಾಗುವುದು ಖಚಿತವಾಗಿದೆ. ಉಳಿದ ಒಂದು ಸ್ಥಾನಕ್ಕೆ ಅಂದರೆ ನಾಲ್ಕನೇ ರಾಜ್ಯಸಭೆ ಸ್ಥಾನಕ್ಕೆ ಮೂವರು ಪೈಪೋಟಿಯಲ್ಲಿದ್ದಾರೆ.

ಮೇ 24ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮೇ 31ರ ಮಂಗಳವಾರ ಅಂತಿಮ ದಿನವಾಗಿತ್ತು. ಆದರೆ ಅಂತಿಮ ದಿನಕ್ಕೆ ಒಂದು ದಿನ ಇರುವಂತೆ ಕಾಂಗ್ರೆಸ್‌ನ ಜೈರಾಮ್‌ ರಮೇಶ್‌ ಹಾಗೂ ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಹಿರಿಯ ನಾಯಕ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಖಾನ್‌ ಅವರನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ನಡೆಯುತ್ತಿರುವ ಒಳಜಗಳದ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ. ಉಳಿದಂತೆ ಬಿಜೆಪಿಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌, ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ಸಿಂಗ್‌ ಸಿರೋಯಾ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಎಲ್ಲ ನಾಮಪತ್ರವೂ ಊರ್ಜಿತ

ನಾಮಪತ್ರ ಸಲ್ಲಿಸಿದ್ದ ಎಲ್ಲ ಆರು ಜನರ ಅರ್ಜಿಗಳೂ ಸ್ವೀಕೃತವಾಗಿವೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ. ಜೂನ್‌ 3ರವರಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಷ್ಟರೊಳಗೆ ಯಾವುದೇ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರೆ ಜೈನ್‌ 10ರಂದು ಚುನಾವಣೆ ಇಲ್ಲದೆಯೇ ಅವಿರೋಧ ಆಯ್ಕೆ ಘೋಷಣೆ ಆಗುತ್ತದೆ. ಇಲ್ಲದಿದ್ದರೆ ಚುನಾವಣೆ ನಡೆಯುತ್ತದೆ. ಸದ್ಯದ ಸನ್ನಿವೇಶದಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಲಕ್ಷಣ ಕಾಣುತ್ತಿಲ್ಲ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕಾಂಗ್ರೆಸ್‌ ಎರಡನೇ ಅಭ್ಯರ್ಥಿ ಕಣಕ್ಕೆ: JDS ಮೈತ್ರಿಗೆ ಸಿದ್ದು ಗುದ್ದು

Exit mobile version