Site icon Vistara News

Kittur Rani Chennamma Awards: ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

Kittur Rani Chennamma awards

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಹಾಗೂ ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮಹಿಳೆಯರು ಮತ್ತು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ ಮಹಿಳೆಯರಿಗೆ ʼಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿʼ ಹಾಗೂ ವಿವಿಧ ಪ್ರಶಸ್ತಿ ಪ್ರದಾನ (Kittur Rani Chennamma Awards) ಮಾಡಿ ಸನ್ಮಾನಿಸಲಾಯಿತು.

ನಗರದ ಕಬ್ಬನ್ ಉದ್ಯಾನವನದ ಜವಾಹರ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2024 ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ರಾಜ್ಯ ಸರ್ಕಾರದಿಂದ 1994-95ನೇ ಸಾಲಿನಿಂದ ʼಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿʼಗಳನ್ನು ನೀಡಲಾಗುತ್ತಿದೆ.

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 6-ಸಂಸ್ಥೆಗಳು, ಅವಿರತವಾಗಿ ಸಾಧನೆ ಮಾಡಿರುವ 20 ಮಹಿಳಾ ಸಾಧಕಿಯರಿಗೆ (ಮಹಿಳಾ ಅಭಿವೃದ್ಧಿ-9, ಕಲೆ- 5, ಕ್ರೀಡೆ -2, ಸಾಹಿತ್ಯ -3, ಶಿಕ್ಷಣ -1) ಸೇರಿದಂತೆ ಒಟ್ಟು 26 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಇದನ್ನೂ ಓದಿ | Raja Marga Column : ಸಾಯಲು ಹೊರಟ ಸಾಧು ಕೋಕಿಲಾರನ್ನು ಬದುಕಿಸಿದ್ದು ಒಂದು ಸಿನಿಮಾ!

ಮಹಿಳೆಯರ ಸರ್ವಾಂಗೀಣ ಸಬಲೀಕರಣಕ್ಕಾಗಿ ರಚಿಸಲಾಗಿರುವ ಸ್ತ್ರೀಶಕ್ತಿ ಗುಂಪುಗಳನ್ನು ಪ್ರೋತ್ಸಾಹಿಸಲು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀಶಕ್ತಿ ಗುಂಪುಗಳಿಗೆ ಹಾಗೂ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀಶಕ್ತಿ ಒಕ್ಕೂಟಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. ಇದಲ್ಲದೆ 4 ಕಂದಾಯ ವಿಭಾಗೀಯ ಮಟ್ಟದಲ್ಲಿ 4 ಸ್ತ್ರೀಶಕ್ತಿ ಗುಂಪುಗಳಿಗೆ ಯಶೋಧರಮ್ಮ ದಾಸಪ್ಪ ಅವರ ಹೆಸರಿನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇದೇ ವೇಳೆ 31 ಜಿಲ್ಲೆಗಳಲ್ಲಿ ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಹಮ್ಮಿಕೊಂಡಿರುವ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆಯನ್ನು ಬಿಂಬಿಸುವ “ಅಂತರಾಳ” ಕಿರುಹೊತ್ತಿಗೆಯ 19ನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಇನ್ನು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version