Site icon Vistara News

KL Rahul: ಬಡ ವಿದ್ಯಾರ್ಥಿನಿಗೆ ನೆರವು ನೀಡಿದ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ರಾಹುಲ್‌

KL Rahul Helped Shruti Kulavi

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್​(KL Rahul) ಅವರು ಯಾವುದೇ ಫ‌ಲಾಪೇಕ್ಷೆ ಮತ್ತು ಪ್ರಚಾರ ಪಡೆಯದೇ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅಮೃತ್ ಮಾವಿನಕಟ್ಟಿ ಎಂಬ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡಿದ್ದ ರಾಹುಲ್​, ಇದೀಗ ಮತ್ತೊಂದು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.

ಸುಡುಗಾಡು ಸಿದ್ದರ ಕುಟುಂಬದ ಬಾಲೆಯ ವಿದ್ಯಾಭ್ಯಾಸಕ್ಕೆ ರಾಹುಲ್‌ ನೆರವಿನ ಹಸ್ತ ಚಾಚಿದ್ದಾರೆ. ಅಲೆಮಾರಿ ಜೀವನ ನಡೆಸಿಕೊಂಡು ಬದುಕು ನಡೆಸುವ ಬಡ ಕುಟುಂಬದ ಸೃಷ್ಟಿ ಕುಲಾವಿ(KL Rahul Helped Shruti Kulavi) ಎಂಬ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಈಕೆ ಭವಿಷ್ಯದಲ್ಲಿ ವೈದ್ಯೆಯಾಗುವ ಗುರಿ ಹೊಂದಿದ್ದಾಳೆ.

ಧಾರವಾಡ ಸಿದ್ದೇಶ್ವರ ಕಾಲೋನಿಯ ರುವ ಹನುಮಂತಪ್ಪ ಮತ್ತು ಸುಮಿತ್ರಾ ದಂಪತಿಯ ಮಗಳು ಸೃಷ್ಟಿ ಕುಲಾವಿ ತೀವ್ರ ಬಡತನದ ಕಾರಣ ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿದ್ದರು. ಈ ಮಾಹಿತಿ ತಿಳಿದ ಇಲ್ಲಿನ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಅವರು, ನೆರವಿಗಾಗಿ ಕ್ರಿಕೆಟಿಗ ರಾಹುಲ್‌ ಅವರನ್ನು ಸಂಪರ್ಕಿಸಿದ್ದರು. ಇದಕ್ಕೆ ರಾಹುಲ್​ ಸ್ಪಂದಿಸಿದ್ದು ನೆರವು ನೀಡಲು ಮುಂದೆ ಬಂದಿದ್ದಾರೆ. ಈ ಬಾಲಕಿ 1996ರಲ್ಲಿ ದೀಪಕ ಗಾಂವ್ಕರ್‌ ಹಾಗೂ ಅನಿತಾ ಗಾಂವ್ಕರ್‌ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್‌ ಎಕ್ಸಲೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಲಿದ್ದಾರೆ.

ತಾಯಿ ಕಳೆದುಕೊಂಡ ಯುವಕನಿಗೆ ನೆರವು ನೀಡಿದ್ದ ರಾಹುಲ್​

ಕೆ.ಎಲ್‌.ರಾಹುಲ್ ಅವರು ಕೆಲವು ತಿಂಗಳುಗಳ ಹಿಂದೆ ಅಮೃತ್ ಮಾವಿನಕಟ್ಟಿ ಎಂಬ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದರು. ಅಮೃತ ಮಾವಿನಕಟ್ಟಿ ಎಂಬ ಈ ವಿದ್ಯಾರ್ಥಿ ಮಹಲಿಂಗಪುರದ ಬಡಕುಟುಂಬವೊಂದರ ಯುವಕ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದ. ಆದರೆ ಕಡುಬಡತನದಲ್ಲಿದ್ದ ಅಮೃತ್ ಮಾವಿನಕಟ್ಟಿ ತಾಯಿಯನ್ನು ಕಳೆದುಕೊಂಡಿದ್ದ. ಇದೇ ಕಾರಣಕ್ಕೆ ಆತನಿಗೆ ಮುಂದೆ ವಿದ್ಯಾಭ್ಯಾಸ ನಡೆಸಲು ಕಷ್ಟವಾಗಿತ್ತು. ಆಗ ರಾಹುಲ್​ ಈ ಯುವಕನ ನೆರವಿಗೆ ನಿಂತಿದ್ದರು.

ಇದನ್ನೂ ಓದಿ KL Rahul: ಅಂದು ಕಪಿಲ್​, ಇಂದು ರಾಹುಲ್​; ಇದು ಒಂದು ಬಾತ್​ರೂಮ್​ನ ರೋಚಕ ಕತೆ

75 ಸಾವಿರ ನೆರವು

ಮಂಜುನಾಥ ಹೆಬಸೂರ ಅವರೇ ಈ ವಿಚಾರವನ್ನು ರಾಹುಲ್​ ಗಮನಕ್ಕೆ ತಂದಿದ್ದರು. ಬಳಿಕ ರಾಹುಲ್​ ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದರು. ಅಮೃತ್ ಮಾವಿನಕಟ್ಟಿ ಬಿಕಾಂ ಓದಲು ಕೆಎಲ್ಇ ಸಂಸ್ಥೆಯ ಕಾಲೇಜಿಗೆ ಬಂದಿದ್ದ. ಆತನ ಪರಿಸ್ಥಿತಿ ಹಾಗೂ ಆತನ ಅಂಕಗಳನ್ನು ನೋಡಿದ ಆಡಳಿತ ಮಂಡಳಿ 10 ಸಾವಿರ ರಿಯಾಯಿತಿ ನೀಡಿತ್ತು. ಆದರೆ ಉಳಿದ ಹಣವನ್ನು ತುಂಬಲು ಸಾಧ್ಯವಾಗದೇ ಇದ್ದಾಗ ಆತ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದ. ಈ ವೇಳೆ ವಿಷಯ ತಿಳಿದ ಮಂಜುನಾಥ ಅವರು ಇದನ್ನು ರಾಹುಲ್​ಗೆ ತಿಳಿಸಿದ್ದಾರೆ. ಕೂಡಲೇ ರಾಹುಲ್ ಅವರು, 75 ಸಾವಿರ ಹಣವನ್ನು ಯುವಕನ ಖಾತೆಗೆ ಜಮಾ ಮಾಡಿದ್ದರು. ಈ ಮೂಲಕ ಯುವಕ‌ನ ಭವಿಷ್ಯಕ್ಕೆ ಬೆಳಕಾಗಿದ್ದಾರೆ.

Exit mobile version