ಹಾಸನ: ಈ ಹಿಂದೆ ಶಾಸಕರಾಗಿದ್ದ ದಿವಂಗತ ಎಚ್.ಎಸ್. ಪ್ರಕಾಶ್ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ನಡುವಿನ ಹಗ್ಗಜಗ್ಗಾಟದ ನಡುವೆಯೇ ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಕೆ.ಎಂ. ರಾಜೇಗೌಡ ಅವರ ಹೆಸರು ಕೇಳಿಬಂದಿದೆ.
ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಮತ್ತೊಂದು ಗುಂಪು ಕೆಲಸ ಮಾಡದ ಅಥವಾ ವಿರುದ್ಧವಾಗಿ ಕೆಲಸ ಮಾಡುವ ಸಾಧ್ಯತೆಯಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ಕಾರಣಕ್ಕೆ ರಾಜೇಗೌಡ ಅವರಿಗೆ ಟಿಕೆಟ್ ನೀಡುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ವಡ್ಡರಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತಿವಿ ಅಂತ ಹೇಲಿದ್ದರಿಂದ ನಾನು ಹಿಂದೆ ಸರಿಯಲ್ಲ. ಕಾರ್ಯಕರ್ತರಿಗೆ ಗೊಂದಲಕ್ಕಿಂತ ಹೆಚ್ಚಾಗಿ ಒಂದು ಸಿಂಪತಿ, ಅನುಕಂಪ ಬರಬಹುದಲ್ಲವೇ? ಇಷ್ಟೆಲ್ಲ ಶ್ರಮಪಟ್ಟು ಟಿಕೆಟ್ ತಗೊಬೇಕು ಅಂತ ಹೇಳಿ, ಸಿಂಪತಿನು ಬರಬಹುದು. ಹೆಸರುಗಳು ಬೇರೆ ಬೇರೆ ಓಡಾಡುತ್ತಿವೆ. ಅಂತಿಮವಾಗಿ ಯಾರಿಗೆ ಕೊಡಬೇಕು ಎಂದು ತೀರ್ಮಾನ ಮಾಡತಕ್ಕಂತಹ ಅನುಭನ ನಮಗಿಂತ ಹೆಚ್ಚಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗಿದೆ.
ನನಗೆ ಹಾಸನ ಜಿಲ್ಲೆಯ ಸಂಪೂರ್ಣವಾದಂತಹ ನರನಾಡಿ ಗೊತ್ತಿಲ್ಲ. ನಾನು ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಈ ಕ್ಷಣದವರೆಗೂ ಹೆಚ್ಚಿನ ಸಮಯ ಕೊಟ್ಟಿಲ್ಲ. ದೇವೇಗೌಡರಿಗೆ ಇಂಚಿಂಚು ಗೊತ್ತಿರುವ ವಿಷಯ. ಅಂತಿಮವಾದ ನಿರ್ಣಯ ದೇವೇಗೌಡರೇ ಮಾಡ್ತಾರೆ, ಅಲ್ಲಿಯವರೆಗೂ ಕಾಯಬೇಕು ಎಂದರು.
ಕೆ.ಎಂ.ರಾಜೇಗೌಡರ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೊಂದು ಮೂರನೇ ಹೆಸರು ಬಂದಿದೆ, ನಾಳೆ ನಾಲ್ಕನೇ ಹೆಸರು ಬರಬಹುದು. ಅಭ್ಯರ್ಥಿಗಳು ಘೋಷಣೆ ಆಗುವವರೆಗೂ ಅಡಿಷನ್ ಆದ್ರೂ ಆಗಬಹುದು ಎಂದು ತಿಳಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಕೆ.ಎಂ. ರಾಜೇಗೌಡ ಪ್ರತಿಕ್ರಿಯಿಸಿ, ವರಿಷ್ಠರೆಲ್ಲರೂ ಸೇರಿ ಗೊಂದಲ ಪರಿಹಾರಕ್ಕೋಸ್ಕರ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ನನ್ನ ಹೆಸರು ಪರಿಹಾರ ಅಂತಾ ಅವರಿಗೆ ಅನ್ನಿಸಿರಬಹುದು. ಪಕ್ಷದ ವರಿಷ್ಠರೆಲ್ಲರೂ ನನ್ನ ಜೊತೆ ಮಾತಾನಾಡಿದ್ದಾರೆ. ಏನ್ ಮಾತಾಡಿದ್ದಾರೆ ಅಂತಾ ಈಗ ಪ್ರಸ್ತಾಪ ಮಾಡೋದು ಸೂಕ್ತ ಅಲ್ಲ.
ಎರಡು ಭಾರಿ ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದೆ. ಜೆಡಿಎಸ್ ಬಂದಾಗ ನನಗೆ ಟಿಕೆಟ್ ಕೊಡ್ತೇನೆ ಅಂತಾ ಆಶ್ವಾಸನೆ ಕೊಟ್ಟಿದ್ರು. ಕಳೆದ ಭಾರಿ ದೊಡ್ಡವರೇ ಮನೆಗೆ ಬಂದು ಈಭಾರಿ ನೀವು ನಿಲ್ಲಬೇಡಿ, ಪ್ರಕಾಶ್ ಅವರಿಗೆ ಸಪೋರ್ಟ್ ಮಾಡಿ, ಪ್ರಕಾಶ್ ಅವರದ್ದು ಇದು ಕೊನೆ ಚುನಾವಣೆ ಎಂದಿದ್ದರು. ಪ್ರಕಾಶ್ ಅವರ ಕೈಯಲ್ಲಿ ಹಾಲು ಕುಡಿಸಿ, ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲ ಅಂತಾ ತೀರ್ಮಾನ ಮಾಡಿ ಹೋಗಿದ್ರು.
ಇದನ್ನೂ ಓದಿ: Hasana Politics : ಭವಾನಿ ರೇವಣ್ಣ ಆಸೆ ಈಡೇರಲ್ಲ; ಎಚ್‌ಡಿಕೆ ಪರೋಕ್ಷ ಸಂದೇಶ, ಆದ್ರೆ ರೇವಣ್ಣ ಪ್ಲ್ಯಾನೇ ಬೇರೆ!
ಎರಡು ಭಾರಿನೂ ನನಗೆ ಟಿಕೆಟ್ ಮಿಸ್ ಆಯ್ತು. ಆದ್ರೂ ಪಕ್ಷಕ್ಕೆ ದ್ರೋಹ ಮಾಡಬಾರದು ಅಂತಾ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಹೆಸರು ಬಂದಿದ್ದರಿಂದ ನಾನು ತಟಸ್ಥನಾದೆ. ಅವರಿಬ್ಬರಿತ ನಡುವೆ ನಾನು ಯಾಕೆ ಮಧ್ಯೆ ಹೋಗೋದು ಎಂದು ಸುಮ್ಮನಿದ್ದೆ. ದೊಡ್ಡವರು ಮಾತು ಕೊಟ್ಟಂತೆ ನಡೆದುಕೊಳ್ತಾರೆ ಅನ್ನೋ ವಿಶ್ವಾಸ ನನಗೆ ಇತ್ತು. ಗೊಂದಲದ ನಡುವೆ ವರಿಷ್ಠರು ನನ್ನನ್ನು ಗುರುತಿಸಿದ್ದಾರೆ. ಒಂದು ವೇಳೆ ನನಗೆ ಟಿಕೆಟ್ ಕೊಟ್ಟರೆ ಭವಾನಿ ರೇವಣ್ಣ, ಸ್ವರೂಪ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಬೇರೆ ಅಭ್ಯರ್ಥಿ ಯಾರೇ ಆದರೂ ತಲೆಕೆಡಿಸಿಕೊಳ್ಳದೇ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
50 ಸಾವಿರ ಅಂತರದಲ್ಲಿ ಗೆಲ್ಲುತ್ತೇನೆ ಎಂಬ ಶಾಸಕ ಪ್ರೀತಂಗೌಡ ಕುರಿತು ಪ್ರತಿಕ್ರಿಯಿಸಿ, ಅವರು ತುಂಬಾ ಮೇಲಿದ್ದಾರೆ, ಚುನಾವಣೆ ಅದ್ಮೇಲೆ ಕೆಳಕ್ಕೆ ಇಳಿಸುತ್ತೇವೆ. ಅವರಿಗೆ ಜನರೇ ಉತ್ತರ ಕೊಡ್ತಾರೆ ಎಂದು ತಿಳಿಸಿದ್ದಾರೆ.