ಬೆಳಗಾವಿ: ಅತಿ ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆಯಾಗಲಿದ್ದು, ಪ್ರತಿ ಲೀಟರ್‌ಗೆ ಕನಿಷ್ಠ ಮೂರು ರೂಪಾಯಿ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಸ್ವತಃ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೇ ಭಾನುವಾರ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲೀಕರಣ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು, ಕೆಎಂಎಫ್ ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಹೈನುಗಾರರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರಕಾರ ಸದ್ಯವೇ ದರ ಏರಿಕೆಗೆ ಅನುಮತಿ ನೀಡಲಿದೆ ಎಂದು ಅವರು ಹೇಳಿದರು. ಹೀಗೆ ಹೆಚ್ಚಿಸಿದ ದರವನ್ನು ನೇರವಾಗಿ ರೈತರಿಗೇ ನೀಡಲಾಗುವುದು. ರೈತರಿಗೆ ಪ್ರಸಕ್ತ ೨೮ ರೂ. ಹಾಲಿನ ದರ ಮತ್ತು ಐದು ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮುಂದೆ ಇದು ಮೂರು ರೂ.ಯಷ್ಟು ಹೆಚ್ಚಿ, ಒಂದು ಲೀಟರ್‌ಗೆ ೩೬ ರೂ. ಸಿಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ‘ಈ ಭಾಗದಲ್ಲಿ ಹಾಲು ಶೀಥಲೀಕರಣ ಕೇಂದ್ರ ಆರಂಭಕ್ಕೆ 25 ವರ್ಷದಿಂದ ಬೇಡಿಕೆ ಇತ್ತು. ಬಾಲಚಂದ್ರ ಜಾರಕಿ ಹೊಳಿ ಬೇಡಿಕೆ ಈಡೇರಿಸಿದ್ದಾರೆ’ ಎಂದು ಹೇಳಿದರು.
ಈಗ ದರ ಎಷ್ಟಿದೆ? (ಲೀಟರ್‌ಗೆ)
ನಂದಿನಿ ನೀಲಿ ಹಾಲು (ಟೋನ್ಡ್ ಮಿಲ್ಕ್)- ೩೭ ರೂ., ಹಸಿರು ಹಾಲು (ಹೋಮೋಜಿನೈಸ್ಡ್ ಟೋನ್ ಮಿಲ್ಕ್)- ೩೮ ರೂ., ಕಿತ್ತಳೆ ಬಣ್ಣ (ಹೋಮೋಜಿನೈಜ್ಡ್ ಕೌ ಮಿಲ್ಕ್) -೪೧ ರೂ., ಶುಭಂ-ಕೇಸರಿ- ೪೩ ರೂ., ಸಮೃದ್ಧಿ-ನೇರಳೆ ಬಣ್ಣ- ೪೬ ರೂ. ಇದೆ.
ಇದನ್ನೂ ಓದಿ | KMF Nandini Milk | ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಗಂಧದ ಗುಡಿ ಹೆಸರು; 15 ದಿನ ಇರಲಿದೆ ಈ ಸಾಲು!