ಬೆಂಗಳೂರು: ದೇಶದ ಪ್ರಮುಖ ಹಾಲು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಕೆಎಂಎಫ್ ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಮಾರುಕಟ್ಟೆಗಳಲ್ಲಿ ನಂದಿನಿ ಪಿಜ್ಜಾ ಸಿಗಲಿದೆ. ಅಲ್ಲದೆ, ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ವೇಳೆ ಟ್ಯಾಬ್ಲೋ ಪ್ರದರ್ಶನಗೊಳ್ಳಲಿದೆ. ಇನ್ನು ಉತ್ತರ ಭಾರತದಲ್ಲಿಯೂ ಮಾರುಕಟ್ಟೆ ವಿಸ್ತರಣೆಗೆ ಚಿಂತನೆ ನಡೆಸಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಡೈರಿ ಸರ್ಕಲ್‌ನಲ್ಲಿರುವ ಕೆಎಂಎಫ್ (KMF product) ಕಚೇರಿಯಲ್ಲಿ 8 ವಿವಿಧ ಮಾದರಿ ಹೊಸ ಸಿಹಿ ತಿನಿಸುಗಳು ಬಿಡುಗಡೆ ಮಾಡಲಾಯಿತು. 2 ಬಗೆಯ ಬಿಸ್ಕತ್‌ಗಳು, ಪನೀರ್ ಮುರುಕು ಮತ್ತು ಗುಡ್‌ಲೈಫ್ ಚಾಕೋಲೆಟ್ ಗಿಫ್ಟ್ ಬಾಕ್ಸ್‌ಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾತನಾಡಿ ಈ ಎಲ್ಲ ವಿವರಣೆ ನೀಡಿದ್ದಾರೆ.
ಕೆಎಂಎಫ್‌ನಲ್ಲಿ ರುಚಿಕರ ಪಿಜ್ಜಾ ಲಭ್ಯ
ನಂದಿನಿ ಹಾಲು, ಮೊಸರು, ಮಜ್ಜಿಗೆ, ಐಸ್‌ಕ್ರೀಂ, ಬಿಸ್ಕತ್ ಸೇರಿದಂತೆ ಹತ್ತು ಹಲವು ಉತ್ಪನ್ನಗಳು ಈಗಾಗಲೇ ಗ್ರಾಹಕರನ್ನು ತಲುಪಿದ್ದು, ಈಗಿನ ಟ್ರೆಂಡ್‌ಗೆ ತಕ್ಕಂತೆ ಕೆಎಂಎಫ್ ಪಿಜ್ಜಾವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿನಿತ್ಯ ಕೆಎಂಎಫ್‌ನಲ್ಲಿ 40 ಮೆಟ್ರಿಕ್ ಟನ್ ಖೋವಾ, ಚೀಸ್, ಪನೀರ್ ಉತ್ಪಾದನೆ ಆಗುತ್ತಿದ್ದು, ಈಗ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದೆ. ಅಲ್ಲದೆ, ಡಿಸೆಂಬರ್ ಅಂತ್ಯದೊಳಗೆ 100 ಮೆಟ್ರಿಕ್ ಟನ್ ಚಾಕೋಲೆಟ್ , 5 ಕೋಟಿ ಸುವಾಸನೆಯುಕ್ತ ಹಾಲು (flavored milk) ಬಾಟಲಿಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ.
ಮೈಸೂರು ದಸರಾದಲ್ಲಿ ಟ್ಯಾಬ್ಲೋ
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಲಾಗಿದ್ದು, ಹಲವಾರು ಹೊಸ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಜತೆಗೆ ಈ ವರ್ಷ ಮೊಟ್ಟಮೊದಲ ಬಾರಿಗೆ ಮೈಸೂರಿನ ಜಂಬೂ ಸವಾರಿ ವೇಳೆ ಕೆಎಂಎಫ್ ಟ್ಯಾಬ್ಲೋ ಅನಾವರಣ ಮಾಡಲಾಗುತ್ತಿದೆ. ಇದು ಕೆಎಂಎಫ್ ಬ್ರ್ಯಾಂಡ್‌ಗೆ ಮತ್ತಷ್ಟು ಮೆರಗು ನೀಡಲಿದೆ.
ದೆಹಲಿಯಲ್ಲಿ ಡೈರಿ ಸಮ್ಮೇಳನ
ಸೆಪ್ಟೆಂಬರ್ 12ರಿಂದ 15ರವರೆಗೆ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ನೇತೃತ್ವದಲ್ಲಿ ದೆಹಲಿಯಲ್ಲಿ ಡೈರಿ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಮುಂದಿನ 50 ವರ್ಷಗಳಿಗೆ ಬೇಕಾಗಿರುವ ತಂತ್ರಜ್ಞಾನ ಕುರಿತ ಸಮಾಲೋಚನೆ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಅಮೂಲ್ ಕೋ ಸ್ಪಾನ್ಸರ್ ಆಗಿ ಇರಲಿದೆ.
ಉತ್ತರ ಭಾರತಕ್ಕೂ ವಿಸ್ತರಣೆ, ಕೋಲ್ಕತ್ತಾ-ಯುಪಿಯಲ್ಲಿ ಮಾರಾಟ
ರಾಜ್ಯವನ್ನು ಹೊರತುಪಡಿಸಿ ಹೊರ ರಾಜ್ಯಕ್ಕೆ ದಿನಕ್ಕೆ 5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಕೇರಳ, ಚೆನ್ನೈ, ಹೈದರಾಬಾದ್, ಗೋವಾ, ಪುಣೆ ಸೇರಿದಂತೆ ಮುಂಬೈನಲ್ಲಿ ಪ್ರತಿನಿತ್ಯ 2 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದೆ. ಇನ್ನು 2023ರ ಜನವರಿ ವೇಳೆಗೆ ದೆಹಲಿಯಲ್ಲಿ 5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ. ಕೋಲ್ಕತ್ತಾ ಹಾಗೂ ಯುಪಿಯಲ್ಲೂ ಹಾಲು ಮಾರಾಟ ಮಾಡಲು ಗುರಿ ಹೊಂದಿರುವ ಕೆಎಂಎಫ್, ಉತ್ತರ ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲು ನಿರ್ಧರಿಸಿದೆ.
ಹೊರ ರಾಜ್ಯದಲ್ಲೂ ನಂದಿನಿ ಕೆಫೆ
ರಾಜಧಾನಿ ಬೆಂಗಳೂರಿನ ಜಯನಗರ, ಕಸ್ತೂರಿನಗರ ಸೇರಿದಂತೆ ೪ ಕಡೆ ನಂದಿನಿ ಕೆಫೆ ಇದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಹಾಸನದಲ್ಲೊಂದು, ಮಂಗಳೂರಿನಲ್ಲಿ ಎರಡು ಕೆಫೆ ತೆರೆಯಲು ಯೋಜನೆ ರೂಪಿಸಲಾಗಿದೆ. ಜತೆಗೆ ಹೊರರಾಜ್ಯ ಕೇರಳದಲ್ಲಿಯೂ ನಂದಿನಿ ಕೆಫೆಯ ಉದ್ಘಾಟನೆಗೆ ಸಿದ್ಧತೆ ನಡೆದಿರುವುದಾಗಿ ಕೆಎಂಎಫ್ ನಿರ್ದೇಶಕ ಸತೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | GST 5% ಏರಿಕೆಯಾದರೆ, ನಂದಿನಿ ಮಜ್ಜಿಗೆ ದರ 14% ಹೆಚ್ಚಿಸಿದ ಕೆಎಂಎಫ್!