Site icon Vistara News

Congress Politics : 3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಈ ಸರ್ಕಾರ ಉಳಿಯಲ್ಲ: ಕೆ.ಎನ್.‌ ರಾಜಣ್ಣ ಸ್ಫೋಟಕ ಹೇಳಿಕೆ

KN Rajanna infront of vidhana soudha

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ (Congress Government) ಮೂರು ಡಿಸಿಎಂ ಹುದ್ದೆ ಸೃಷ್ಟಿಯ (Three Deputy CM posts created) ಅನಿವಾರ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಇದರ ಅಗತ್ಯತೆ ಇದೆ. ಒಂದು ವೇಳೆ ಕಡಿಮೆ ಲೋಕಸಭಾ ಸ್ಥಾನವನ್ನು ಗೆದ್ದರೆ ರಾಜ್ಯದಲ್ಲಿ ಅಭದ್ರ ಸರ್ಕಾರ ಉಂಟಾಗುತ್ತದೆ ಎಂದು ಸಚಿವ ಕೆ.ಎನ್.‌ ರಾಜಣ್ಣ (Minister KN Rajanna) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಈ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಒಳರಾಜಕೀಯದಲ್ಲಿ (Congress Politics) ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್‌ ಹೇಳಿಕೆ ನೀಡಿರುವ ಕೆ.ಎನ್.‌ ರಾಜಣ್ಣ, ಹಲವು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಹೈಕಮಾಂಡ್‌ನವರು ಜನರ ಅಭಿಪ್ರಾಯವನ್ನು ನೋಡುತ್ತಾರೆ. ಹಾಗಾಗಿ ಸರ್ಕಾರದ ಸುಭದ್ರತೆಗೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಡಿಸಿಎಂ ಹುದ್ದೆಯನ್ನು ಸೃಷ್ಟಿ ಮಾಡಿ ಎಂದು ನಾನು ವರಿಷ್ಠರಿಗೆ ಹೇಳಿದ್ದೇನೆ. ಕಡಿಮೆ ಲೋಕಸಭಾ ಸ್ಥಾನ ಗೆದ್ದರೆ ರಾಜ್ಯದಲ್ಲಿ ಸರ್ಕಾರ ಅಭದ್ರವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Weather report : ಇಂದು – ನಾಳೆ ಬೆಂಗಳೂರಲ್ಲಿ ಭರ್ಜರಿ ವರುಣ; ಕರಾವಳಿಯಲ್ಲಿ ಗಾಳಿ ಸಹಿತ ಮಳೆ

ನಾನು ರಾಜಕೀಯ ದುರುದ್ದೇಶದಿಂದ ಕೊಟ್ಟ ಹೇಳಿಕೆ ಇದಲ್ಲ. ನಮ್ಮ ಪಕ್ಷದ ಹಿತದೃಷ್ಟಿಯಿಂದ ಈ ಮಾತನ್ನು ಆಡುತ್ತಿದ್ದೇನೆ. ಚರಣ್ ಸಿಂಗ್ ಕಾಲದಲ್ಲಿ ಆರು ರಾಜ್ಯಗಳ ಸರ್ಕಾರವನ್ನು ವಜಾ ಮಾಡಲಾಯಿತು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾನು ಯಾರ ಪರ ಅಲ್ಲ,, ಇದರಲ್ಲಿ ನನ್ನ ಸ್ವಾರ್ಥ ಇಲ್ಲ ಎಂದು ಕೆ.ಎನ್.‌ ರಾಜಣ್ಣ ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್‌ ಬಂದು ಕ್ಲಾರಿಫಿಕೇಶನ್‌ ಕೇಳಲಿ

ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ನಾನು ನೀಡಿದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಯಾಕೆ ನನ್ನ ಕ್ಲಾರಿಫಿಕೇಷನ್ ಪಡೆಯಬೇಕು? ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರು ತಾನೇ? ಅವರೇ ಕರೆದು ಕೇಳಲಿ. ನಾನಂತೂ ಈವರೆಗೆ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿಲ್ಲ. ಅವರು ಕಾವೇರಿ ವಿಷಯದಲ್ಲಿ ಬ್ಯುಸಿ ಇದ್ದು, ಈಗ ದೆಹಲಿಯಲ್ಲಿ ಇದ್ದಾರೆ ಎಂದು ಕೆ.ಎನ್.‌ ರಾಜಣ್ಣ ಹೇಳಿದರು.

ಮೂರು ಡಿಸಿಎಂ ಎಂದು ಹೇಳಿದ್ದೇನೆ. ಪರಿಶಿಷ್ಟರು ಅಂತ ಅಷ್ಟೇ ಹೇಳಿದ್ದೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂತ ಹೇಳಿಲ್ಲ ಎಂದು ಕೆ.ಎನ್.‌ ರಾಜಣ್ಣ ಹೇಳುವ ಮೂಲಕ ದಲಿತ ಕೋಟಾದಲ್ಲಿ ಡಾ. ಜಿ. ಪರಮೇಶ್ವರ್‌ ಒಬ್ಬರೇ ಅಲ್ಲ, ತಾವೂ ಸಹ ರೇಸ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಲಿಂಗಾಯತ, ಮೈನಾರಿಟಿಯವರಿಗೂ ಅವಕಾಶ ಕೊಡಬೇಕು ಎಂದು ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.

ನಾನು ಯಾವ ಬಣದವನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಈ ಸರ್ಕಾರಕ್ಕೆ ಅಭದ್ರತೆ ಉಂಟಾಗುತ್ತದೆ ಎಂಬ ಕಾರಣಕ್ಕೆ ನಾನು ಮಾತನಾಡಿದ್ದೇನೆ. ಅದು ಬಿಟ್ಟರೆ ಬೇರೆ ಯಾವ ಉದ್ದೇಶವೂ ನನಗೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ನನ್ನಿಂದ ಹೇಳಿಸಿಲ್ಲ

ಸಮುದಾಯವಾರು ಮೂರು ಡಿಸಿಎಂ ಆಗಬೇಕು ಎಂಬ ವಿಚಾರದಲ್ಲಿ ತಪ್ಪೇನಿದೆ? ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಅವರಿಗೆ ಸರಿ ಅನ್ನಿಸಿದರೆ ಮಾಡುತ್ತಾರೆ. ಬೇಡ ಎಂದಾದರೆ ಬಿಡುತ್ತಾರೆ. ಸಿದ್ದರಾಮಯ್ಯ ಅವರು ಈ ಮಾತನ್ನು ನನ್ನಿಂದ ಹೇಳಿಸುತ್ತಿದ್ದಾರೆ ಎಂಬುದು ತಪ್ಪು. ನಾನು ಈ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡೇ ಇಲ್ಲ. ಈ ರೀತಿಯ ಹೆಚ್ಚು ಡಿಸಿಎಂ ಮಾಡಿದರೆ ಡಿ.ಕೆ. ಶಿವಕುಮಾರ್‌ ಪ್ರಾಮುಖ್ಯತೆ ಕಡಿಮೆ ಮಾಡಲಾಗುತ್ತದೆ ಎಂಬುದೂ ತಪ್ಪು ಎಂದು ಕೆ.ಎನ್.‌ ರಾಜಣ್ಣ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Namma Metro : ನಾಳೆ ನೇರಳೆ ಮಾರ್ಗದ ಮೆಟ್ರೋ ಪ್ರಯಾಣದಲ್ಲಿ ವ್ಯತ್ಯಯ; ಈ ಟೈಮಲ್ಲಿ ಸೇವೆ ಇಲ್ಲ!

ನನ್ನ ಹೇಳಿಕೆಗೆ ಬದ್ಧ

ಈ ಲೋಕಸಭೆ ಚುನಾವಣೆ ಬಹಳ ಪ್ರಮುಖವಾದುದು. ಅದರ ಗೆಲುವಿಗಾಗಿ ಈ ಸೂತ್ರ ಹೇಳಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶ ಇಲ್ಲ. ಇವತ್ತಿನ ಚುನಾವಣಾ ವ್ಯವಸ್ಥೆ ನೋಡಿದಾಗ ಜಾತಿ ಬಹಳ ಪ್ರಾಮುಖ್ಯತೆ ವಹಿಸುತ್ತಿದೆ. ಆದ್ದರಿಂದ ಸಮುದಾಯವಾರು ಮೂರು ಡಿಸಿಎಂ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ನನ್ನ ಅಭಿಪ್ರಾಯಕ್ಕೆ ಯಾವ ಚಾಲೆಂಜ್ ಬೇಕಾದರೂ ಎದುರಿಸಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯಿಂದ ನಾನು ದೂರ ಸರಿಯೋ ಮಾತಿಲ್ಲ. ಲೋಕಸಭೆ ಚುನಾವಣೆ ಬಳಿಕ ಕೆಲವೊಮ್ಮೆ ಸರ್ಕಾರಗಳನ್ನೇ ವಿಸರ್ಜನೆ ಮಾಡಿದ ಉದಾಹರಣೆ ಇದೆ. ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ ಕಾಲದಲ್ಲೆಲ್ಲ ಇದು ನಡೆದಿದೆ. ಈಗಲೂ ಹಾಗೇ ಆಗೋದಿಲ್ಲ ಎನ್ನುವುದಕ್ಕೆ ಏನಿದೆ ಗ್ಯಾರಂಟಿ? ಹೀಗಾಗಿ ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು. ಡಿ.ಕೆ. ಶಿವಕುಮಾರ್ ಹೇಳಿಕೆಗೆ ನಾನು ವಿರೋಧಿಸುವುದೂ ಇಲ್ಲ, ಸಹಮತವೂ ಇಲ್ಲ ಎಂದು ಕೆ.ಎನ್.‌ ರಾಜಣ್ಣ ಹೇಳಿದರು.

Exit mobile version